ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ರೇವ್ ಪಾರ್ಟಿ ಹಾಗೂ ಗ್ರಾಹಕರಿಗೆ ಪೂರೈಕೆಗೆ ನೆರೆ ರಾಜ್ಯದಿಂದ ತಂದಿದ್ದ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ರೈಲ್ವೆ ಪೊಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ 7 ಮಂದಿಯನ್ನು ಬಂಧಿಸಿದ್ದಾರೆ.
ಒಡಿಶಾದ ಸಿಮುಲಿಯಾಬಲೇಶ್ವರ ನಿವಾಸಿ ನಿತ್ಯಾನಾನದ್‌ದಾಸ್ (37), ತ್ರಿಪುರದ ನಾರ್ಥ್ ಭಾಗನ್‌ನ ರಾಜೇಶ್‌ದಾಸ್(25), ಬಿಹಾರದ ಕುಂಮ್ರಾ ಗ್ರಾಮದ ಅಮರ್‌ಜಿತ್ ಕುಮಾರ್ (23), ಒಡಿಶಾದ ಬಾಲಾಂಗಿರ್ ಜಿಲ್ಲೆಯ ನಿಕೇಶ್ ರಾಣಾ (23), ಒಡಿಶಾದ ಕೊಂದಮಾಲು ಜಿಲ್ಲೆಯ ಜಲಂಧರ್ ಕನ್ಹರ್(20), ಬೈಕುಂಟಾ ಕನ್ಹರ್(20) ಮತ್ತು ಸಾಗರ್ ಕನ್ಹರ್(19) ಬಂಧಿತರು. ಆರೋಪಿಗಳಿಂದ 60 ಲಕ್ಷ ರೂ. ಮೌಲ್ಯದ 60 ಕೆ.ಜಿ. 965 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.
ಐದು ಪ್ರಕರಣ ದಾಖಲು: ಹೊಸ ವರ್ಷ ಹಿನ್ನೆಲೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆ ತಡೆ ಯಲು ರೈಲ್ವೆ ಪೊಲೀಸರು ಡಿ.22ರಂದು ನಗರ ಪ್ರವೇಶಿಸುವ ಹಾಗೂ ಹೊರ ಹೋಗುವ ಎಲ್ಲಾ ರೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದಿಂದ ಬರುವ ರೈಲುಗಾಡಿಗಳ ಬಗ್ಗೆ ಹೆಚ್ಚು ನಿಗಾವಹಿಸಲಾಗಿತ್ತು. ಈ ವೇಳೆ ಪ್ರಶಾಂತಿ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್ ಪ್ರಸ್, ಶಾಲಿಮಾರ್ ವಾಸ್ಕೊ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಆರೋಪಿ ಗಳು ಅಕ್ರಮವಾಗಿ ಗಾಂಜಾ ಸಾಗಿಸುತ್ತಿರು ವುದು ಕಂಡು ಬಂದಿದೆ. ಈ ಸಂಬಂಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆ, ಬೈಯ್ಯಪ್ಪನಹಳ್ಳಿ, ಬೆಂಗಳೂರು ಗ್ರಾಮಾಂತರ ಠಾಣೆ, ಹುಬ್ಬಳ್ಳಿಯಲ್ಲಿ 1 ಪ್ರಕರಣಗಳು ದಾಖಲಿಸಲಾಗಿದೆ. ಈ ವಿಶೇಷ ತಂಡದ ಕಾರ್ಯಾಚರಣೆಗೆ ರೈಲ್ವೆ ಡಿಐಜಿಪಿ ಡಾ ಶರಣಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸ್ವಿಗ್ಗಿ, ಝೊಮೆಟೋ ಡೆಲಿವರಿ ಬಾಯ್‌ಗಳು: ಆರೋಪಿಗಳು ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಈ ಪೈಕಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ಕೆಲವರು ಸ್ವಿಗ್ಗಿ ಮತ್ತು ಝೊಮೆಟೋ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು. ಯಾವ ರೀತಿ ಮಾದಕ ವಸ್ತುಗಳ ಪೂರೈಕೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.
ಮಾದಕವಸ್ತ ಕಳ್ಳ ಸಾಗಣೆ ತಡೆಯಲು ರೈಲ್ವೆ ಪೊಲೀಸ್ ವಿಭಾಗದಲ್ಲಿ 4 ವಿಶೇಷ ತಂಡ ರಚಿಸಲಾಗಿತ್ತು. ಈ ತಂಡಗಳು ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ಬರುವ ರೈಲುಗಳ ಮೇಲೆ ತೀವ್ರ ನಿಗಾ ಇಟ್ಟು ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ 7 ಮಂದಿ ಆರೋಪಿಗಳು ಅಕ್ರಮವಾಗಿ ಮಾದಕ ವಸ್ತು ತರುತ್ತಿರುವುದು ಪತ್ತೆಯಾಗಿದ್ದು, ಬಂಧಿಸಲಾಗಿದೆ.
-ಎಸ್.ಕೆ.ಡಾ.ಸೌಮ್ಯಲತಾ, ರೈಲ್ವೆ ಎಸ್.ಪಿ.