Advertisement

ಹೆತ್ತವರ ಎದುರೇ ರೌಡಿ‌ಶೀಟರ್‌ ಬರ್ಬರ ಕೊಲೆ

03:45 AM Mar 09, 2017 | |

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಬೆಳ್ಳಂ ಬೆಳಗ್ಗೆ ಲಾಂಗು-ಮಚ್ಚುಗಳನ್ನು ಝಳಪಿಸಿರುವ ಗುಂಪು ಹಳೇ ರೌಡಿಶೀಟರ್‌ ಸುನಿಲ್‌ಕುಮಾರ್‌ ಅಲಿಯಾಸ್‌ ಸುನಿಲ್‌(28)ನನ್ನು ಬರ್ಬರವಾಗಿ ಕೊಲೆ ಮಾಡಿದೆ.

Advertisement

ಬೆಳಗ್ಗೆ ನಿದ್ದೆಯಿಂದ ಎದ್ದು ತಂದೆ-ತಾಯಿಯ ಜತೆ ಮಾತನಾಡುತ್ತಿದ್ದಾಗಲೇ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳನ್ನು ಕಂಡ ಸುನಿಲ್‌ ತಪ್ಪಿಸಿಕೊಳ್ಳಲು ಹೊರಗೆ ಓಡಿದರೂ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹತ್ಯೆ ಮಾಡಲಾಗಿದ್ದು, ಸಿನಿಮೀಯ ರೀತಿಯಲ್ಲಿ ನಡೆದ ರೌಡಿಗಳ ದಾಳಿಯಿಂದ ಸ್ಥಳೀಯ ಜನತೆ ಬೆಚ್ಚಿ ಬೀಳುವಂತಾಯಿತು.ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿಶೀಟರ್‌ ನಾಗರಾಜ್‌ ಅಲಿಯಾಸ್‌ ಸ್ಪಾಟ್‌ ನಾಗ ಮತ್ತು ತಂಡ ಈ ಭೀಕರ ಹತ್ಯೆ ನಡೆಸಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ತನ್ನ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಸುನಿಲ್‌ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಹೊಂಚು ಹಾಕಿದ್ದ ಸ್ಪಾಟ್‌ ನಾಗ, ಬುಧವಾರ ಬೆಳಿಗ್ಗೆ 8-15ರ ಸುಮಾರಿಗೆ ಕಮಲಾನಗರದ ಸುನಿಲನ ಮನೆಗೆ ತನ °ಸಹಚರರ ಜತೆ ಮಾರಕಾಸ್ತ್ರಗಳೊಂದಿಗೆ ಪ್ರವೇಶಿಸಿ ನಿದ್ದೆಯಿಂದ ಎದ್ದು ಪೋಷಕರ ಜತೆ ಮಾತನಾಡುತ್ತಿದ್ದ ಸುನಿಲ್‌ ಜತೆ ಜಗಳ ತೆಗೆದು ಹಲ್ಲೆಗೆ ಮುಂದಾಗ. . ಇದರಿಂದ ಗಾಬರಿಯಾದ  ಸುನಿಲ್‌ ತಾಯಿ ತಂದೆ ಮಗನ ರಕ್ಷಣೆಗೆ ಮುಂದಾದರು. ಇದರಿಂದ ಸಿಟ್ಟಾದ ನಾಗ, ಸುನಿಲ್‌ ತಾಯಿ ಉಷಾ ಅವರ ಮೇಲೆ ಲಾಂಗ್‌ ಬೀಸಿದ್ದು ಆಕೆಯ ಬಲಗೈಗೆ ತೀವ್ರ ಗಾಯವಾಗಿದ್ದು ಎರಡು ಬೆರಳು ತುಂಡಾಗಿವೆ.

ಈ ತಳ್ಳಾಟ, ನೂಕಾಟದಲ್ಲಿ ತಪ್ಪಿಸಿಕೊಳ್ಳಲು ಮನೆಯಿಂದ ಹೊರಬಂದ ಸುನಿಲ್‌ನನ್ನು  ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದು 500 ಮೀಟರ್‌ ದೂರದಲ್ಲಿ  ಕೆಡವಿಕೊಂಡ ದುಷ್ಕರ್ಮಿಗಳು, ಮನಸೋಯಿಚ್ಛೆ ಹಲ್ಲೆ ಮಾಡಿದರು. ತೀವ್ರ ರಕ್ತಸ್ತಾವದಿಂದ ಸುನಿಲ್‌ ಸ್ಥಳದಲ್ಲೇ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ಕರಗಲಿಲ್ಲ ಹಂತಕರ ಮನಸ್ಸು
ದುಷ್ಕರ್ಮಿಗಳ ದಾಳಿಯಿಂದ ಸುನಿಲ್‌ ಹಾಗೂ ಆತನ ಪೋಷಕರ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಹೊರಗೆ ಬಂದಿದ್ದಾರೆ. ಈ  ಘಟನೆ ಕಣ್ಣಾರೆ ಕಂಡು ಬೆಚ್ಚಿಬಿದ್ದ ಸ್ಥಳೀಯರು ಸುನಿಲ್‌ನ ಸಹಾಯಕ್ಕೆ ಧಾವಿಸದೆ ಅಸಹಾಯಕತೆ ತೋರಿಸಿದರು. ಸುನಿಲ್‌ ತಂದೆ-ತಾಯಿ  ಮಗನನ್ನು ಬಿಟ್ಟುಬಿಡುವಂತೆ ಗೋಗರೆದರೂ, ದುಷ್ಕರ್ಮಿಗಳು ಲೆಕ್ಕಿಸದೆ ಹಲ್ಲೆ ನಡೆಸಿದರು.

Advertisement

ಸುನಿಲ್‌ ರಕ್ಷಣೆಗೆ ಧಾವಿಸಿದ ಹಿರಿಯ ವೃದ್ಧರೊಬ್ಬರು ಹತ್ತಿರ ಹೋಗಿ, ಹಂತಕರ ಪೈಶಾಚಿಕ ಕೃತ್ಯದ ಭಯಾನಕತೆಗೆ ಹೆದರಿ ಹಿಂದೆ ಸರಿದಿದ್ದು, ಮತ್ತೂಂದೆಡೆ ಈ ದಾಳಿಯ ಸೂತ್ರಧಾರ ಸ್ಪಾಟ್‌ ನಾಗ, ಸುನಿಲ್‌ ಮೃತಪಟ್ಟ ನಂತರವೂ ಎಂಟು ಬಾರಿ ಲಾಂಗ್‌ನಿಂದ ಮತದೇಹಕ್ಕೆ ಕೊಚ್ಚಿದ. ನಂತರ ಕೇಕೆ  ಹಾಕುತ್ತಾ ಪರಾರಿಯಾದ.  ಈ ದೃಶ್ಯಗಳು ಸ್ಥಳೀಯರು ಮೊಬೈಲ್‌ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಕಣ್ಣೆದುರೆ ಮಗನ ಬರ್ಬರ ಹತ್ಯೆ ನೋಡಿದ ಸುನಿಲ್‌ ತಾಯಿ ಹಾಗೂ ತಂದೆಯ ಆಕ್ರಂದನ ಮುಗಿಲುಮುಟ್ಟಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನ ಮೃತದೇಹ ನೋಡಿ ತಾಯಿ ಕಣ್ಣೀರು ಹರಿಸಿದರು. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತನ್‌ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು.

ಒಂದು ವರ್ಷದ ದ್ವೇಷ ಕಾರಣ
ಕೊಲೆಯಾದ ಸುನಿಲ್‌ ವಿರುದ್ಧ ಕೊಲೆ, ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ತೆರೆಯಲಾಗಿತ್ತು. ಕಳೆದ ವರ್ಷ ನಡೆದ ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಪ್ರಕರಣದಲ್ಲಿ ಜೈಲು ಸೇರಿ 10 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಕಳೆದ ವರ್ಷ ಸ್ಪಾಟ್‌ನಾಗನ ಮೇಲೆ ರೌಡಿ ಯತಿರಾಜು ತಂಡ ನಡೆಸಿದ ಕೊಲೆ ಯತ್ನದಲ್ಲಿ ಸುನಿಲ್‌ ನಾಲ್ಕನೇ ಆರೋಪಿಯಾಗಿದ್ದ. ತನ್ನ ಮೇಲೆ ನಡೆದ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿ ಬಿಡುಗೆಯಾಗಿದ್ದ ನಾಗ,ಸುನಿಲ್‌ ವಿರುದ್ಧ ಕೆಂಡ ಕಾರುತ್ತಿದ್ದ. ಅಲ್ಲದೆ  ಜೈಲಿನಿಂದ ಬಿಡುಗಡೆಯಾದ ಬಳಿಕ ಸುನಿಲ್‌  ಹತ್ಯೆಗೆ ಸಂಚು ರೂಪಿಸಿ, ಕಳೆದ ಮೂರು ದಿನಗಳಿಂದ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.

ಸ್ಪಾಟ್‌ ನಾಗನ ಮೇಲೆ 8 ಕೇಸ್‌
ಸ್ಪಾಟ್‌ ನಾಗ 2010ರಿಂದ ಕೊಲೆ, ದರೋಡೆ, ಕಳ್ಳತನ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದು, ಈತನ ವಿರುದ್ಧ ಬಸವೇಶ್ವರ ನಗರ ಠಾಣೆ ಹಾಗೂ ರಾಜಗೋಪಾಲನಗರ ಪೊಲೀಸ್‌ ಠಾಣೆಗಲ್ಲಿ ರೌಡಿಶೀಟರ್‌ ತೆಗೆಯಲಾಗಿದೆ.ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ ಈತ ಜಾಮೀನು ಪಡೆದುಕೊಂಡು ಹೊರಗೆ ಬಂದು, ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಎಂದು ಹೇಳಲಾಗಿದೆ.

ಹಳೇ ವೈಷಮ್ಯದಿಂದ ಸುನಿಲ್‌  ಕೊಲೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈಗಾಗಲೇ ಕೊಲೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋ ದೃಶ್ಯಾವಳಿ ನೋಡಿಕೊಂಡು ಐದು ದುಷ್ಕರ್ಮಿಗಳ ಗುರುತು ಪತ್ತೆಹಚ್ಚಲಾಗಿದೆ.ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುತ್ತದೆ”
– ಅನುಚೇತ್‌, ಡಿಸಿಪಿ ಪಶ್ಚಿಮ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next