ನವದೆಹಲಿ:ಯೋಧರಿಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ದೂರನ್ನು ಹರಿಯಬಿಡುವ ಮೂಲಕ ಕೇಂದ್ರ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ ಬೆನ್ನಲ್ಲೇ ಸೇನೆಯಲ್ಲಿ ಯಾವುದೇ ಸಮಸ್ಯೆಗಳಿದ್ದರು ಅದರ ಬಗ್ಗೆ ನೇರವಾಗಿ ನನಗೆ ಮಾಹಿತಿ ನೀಡಿ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಯೋಧರಿಗೆ ಸಂದೇಶ ರವಾನಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯೋಧರು ತಮ್ಮ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಳ್ಳುವುದು ಸರಿಯಲ್ಲ. ಸೇನಾ ಕೇಂದ್ರ ಕಚೇರಿಗಳಲ್ಲಿ ಸಲಹೆ ಮತ್ತು ದೂರು ನೀಡಲು ದೂರು ಪೆಟ್ಟಿಗೆ ಇರುತ್ತದೆ. ಅದನ್ನು ಬಳಸಿಕೊಳ್ಳಬಹುದು ಎಂದರು.
ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಅರೆಸೇನಾ ಸಿಬ್ಬಂದಿಗೆ ಕಳಪೆ ದರ್ಜೆಯ ಆಹಾರ ನೀಡಲಾಗುತ್ತಿದೆ ಎಂದು ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಸಾಮಾಜಿಕ ಜಾಲತಾಣದ ಮೂಲಕ ಆರೋಪಿಸಿದ್ದರು. ನಂತರ ಸಿಆರ್ ಪಿಎಫ್ ಯೋಧ ಕೂಡ ತನ್ನ ದೂರು ಹೇಳಿಕೊಳ್ಳಲು ವಿಡಿಯೋ ಮೊರೆ ಹೋಗಿದ್ದ. ಇದರಿಂದಾಗಿ ಕೇಂದ್ರ ಸರ್ಕಾರ ಮುಜುಗರಕ್ಕೆ ಸಿಲುಕಿತ್ತು.
ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಮತ್ತೆ ಸರ್ಜಿಕಲ್ ದಾಳಿ ನಡೆಸುವ ಸಂಭವ ತಳ್ಳಿಹಾಕುವಂತಿಲ್ಲ ಎಂಬುದಾಗಿ ಪುನರುಚ್ಚರಿಸಿದ್ದಾರೆ.