Advertisement

ರತ್ನಮಂಜರಿ ಹುಡುಗನ ಹೊಸ ಸಿನಿಮಾ

12:00 PM May 26, 2019 | Team Udayavani |

ದಿಗಂತ್‌ ಅಭಿನಯದ “ಶಾರ್ಪ್‌ ಶೂಟರ್‌’ ಚಿತ್ರ ನಿರ್ದೇಶಿಸಿದ್ದ ಗೌಸ್‌ಪೀರ್‌, ಆ ಚಿತ್ರದ ಬಳಿಕ ಬೇರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಅವರೀಗ ಹೊಸ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿರುವ ಉತ್ತರ ಸಿಕ್ಕಿದೆ. ಹೌದು, ಇದುವರೆಗೆ ಗೀತ ಸಾಹಿತಿಯಾಗಿ, ಸಂಭಾಷಣೆಕಾರರಾಗಿದ್ದ ಆವರು, “ಶಾರ್ಪ್‌ಶೂಟರ್‌’ ಚಿತ್ರ ನಿರ್ದೇಶನದ ಬಳಿಕ ಎರಡನೇ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.

Advertisement

ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಈ ಬಾರಿ ಗೌಸ್‌ಪೀರ್‌ ಬಹುತೇಕ ಹೊಸಬರ ಜೊತೆ ಕೆಲಸ ಮಾಡುವ ನಿರ್ಧಾರ ಮಾಡಿದ್ದಾರೆ. ಇನ್ನೂ ಹೆಸರಿಡದ ಗೌಸ್‌ಪೀರ್‌ ನಿರ್ದೇಶನದ ಚಿತ್ರಕ್ಕೆ ರಾಜ್‌ಚರಣ್‌ ಹೀರೋ. “ರತ್ನಮಂಜರಿ’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟ ರಾಜ್‌ಚರಣ್‌ಗೆ ಇದು ಎರಡನೇ ಸಿನಿಮಾ. ಅವರೊಂದಿಗೆ ವಿಕ್ರಾಂತ್‌ ಹೆಗ್ಡೆ ಎಂಬ ಮತ್ತೂಬ್ಬ ಹೀರೋ ಕೂಡ ನಟಿಸುತ್ತಿದ್ದಾರೆ.

ಈ ಹಿಂದೆ ಇವರು “ಸೋಜಿಗ’ ಚಿತ್ರದಲ್ಲಿ ನಟಿಸಿದ್ದರು. ಇನ್ನು, ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಅವರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಉಳಿದಂತೆ ನಾಲ್ಕೈದು ಮಂದಿ ಸಹ ಕಲಾವಿದರು ನಟಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಗೌಸ್‌ಪೀರ್‌, ಕಥೆ ಕುರಿತು ಹೇಳುವುದಿಷ್ಟು.

“ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ. ಇಲ್ಲಿ ಹೀರೋ ಅನ್ನುವುದಕ್ಕಿಂತ ಕಥೆಯೇ ನಾಯಕ, ನಾಯಕಿ. ಒಬ್ಬ ತಾನು ಅಂದುಕೊಂಡಿದ್ದನ್ನು ಎಷ್ಟೇ ಕಷ್ಟವಾದರೂ ಸರಿ, ಅದನ್ನು ಮಾಡಿ ಮುಗಿಸುವಾತ. ಇನ್ನೊಬ್ಬ ತನ್ನ ಬದುಕಲ್ಲಿ ಯಾವುದನ್ನೂ ಗಂಭೀರವಾಗಿ ಪರಿಗಣಿಸದ, ಸಿಲ್ಲಿಯಾಗಿಯೇ ಎಲ್ಲವನ್ನು ನೋಡುವಾತ.

ಲೈಫ್ ಅನ್ನು ತುಂಬಾ ಸುಲಭವಾಗಿ ತೆಗೆದುಕೊಳ್ಳುವ ಹುಡುಗನೊಬ್ಬ ಶ್ರೀಮಂತ ಹುಡುಗಿಯೊಬ್ಬಳನ್ನು ಪಟಾಯಿಸಿ, ಲೈಫ‌ಲ್ಲಿ ಸೆಟ್ಲ ಆಗಿಬಿಡಬೇಕು ಎಂಬ ಆಸೆ. ಅದರಂತೆ ಅಂಥದ್ದೊಂದು ಶ್ರೀಮಂತ ಹುಡುಗಿ ಅವನ ಲವ್‌ಗೆ ಬೀಳುತ್ತಾಳೆ. ಇನ್ನೇನು ತಾನು ಅವಳಿಗೆ ಮೋಸ ಮಾಡುತ್ತಿದ್ದೇನೆ ಎಂಬ ಅರಿವಾಗಿ, ನಿಜ ಹೇಳಲು ಹೊರಡುವ ಮೊದಲೇ ಆಕೆಗೆ ಅವನೊಬ್ಬ ಚೀಟರ್‌ ಅನ್ನೋದು ಗೊತ್ತಾಗಿ ಬ್ರೇಕಪ್‌ ಆಗಿಬಿಡುತ್ತೆ.

Advertisement

ಅಂಥಾ ಸಮಯದಲ್ಲಿ ಅವನಿಗೊಂದು ಡೀಲ್‌ ಸಿಗುತ್ತೆ. ಅದು ಕಿಡ್ನಾಪ್‌ ಮಾಡುವ ದೊಡ್ಡ ಡೀಲ್‌. ಯಾರನ್ನು ಕಿಡ್ನಾಪ್‌ ಮಾಡಬೇಕು, ಯಾಕೆ ಕಿಡ್ನಾಪ್‌ ಮಾಡಬೇಕು, ಮಾಡಿದರೆ ಏನಾಗುತ್ತೆ ಅನ್ನೋದೇ ಕಥೆಯ ತಿರುಳು’ ಎನ್ನುತ್ತಾರೆ ಗೌಸ್‌ಪೀರ್‌.

ಬಹುತೇಕ ಮಜವಾಗಿಯೇ ಸಾಗುವ ಈ ಚಿತ್ರದಲ್ಲಿ ಮೂರು ಭರ್ಜರಿ ಫೈಟ್ಸ್‌, ಮೂರು ಹಾಡುಗಳು ಇರಲಿವೆ. ಬಕ್ಕೇಶ್‌ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಅವರಿಗೆ ಕಾರ್ತಿಕ್‌ ಸಾಥ್‌ ನೀಡುತ್ತಿದ್ದಾರೆ. ಯೋಗಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಂದೇಶ್‌ ಸಂಕಲನ ಮಾಡುತ್ತಿದ್ದಾರೆ. ಸುಮಾರು 40 ದಿನಗಳ ಕಾಲ ಎರಡು ಹಂತದಲ್ಲಿ ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದೆ.

ಕ್ಲೈಮ್ಯಾಕ್ಸ್‌ ಹೊರಗಡೆ ನಡೆಸುವ ಯೋಚನೆ ಚಿತ್ರತಂಡಕ್ಕಿದೆ. ಅಂದಹಾಗೆ, ಹರಿಸಿರಿ ಎಂಟರ್‌ ಟೈನ್‌ಮೆಂಟ್ಸ್‌ ಬ್ಯಾನರ್‌ನಲ್ಲಿ ಉಮಾಶಂಕರ್‌ (ಆನಂದ್‌) ಚಿತ್ರ ನಿರ್ಮಾಣ ಮಾಡುತ್ತಿದ್ದು, ಇದು ಅವರ ಮೊದಲ ನಿರ್ಮಾಣದ ಚಿತ್ರ. ಜುಲೈನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next