Advertisement

ವಿರಾಟ್‌ ಮೂರ್ತಿಯ ಮಹಾಮಜ್ಜನಕ್ಕೆ ರತ್ನಗಿರಿ ಸಿದ್ಧ

12:50 AM Jan 25, 2019 | Team Udayavani |

ಬೆಳ್ತಂಗಡಿ: ಸತ್ಕಾರ್ಯಗಳ ಮೂಲಕ ಸದಾ ಪುಣ್ಯಕ್ಷೇತ್ರವಾಗಿ ಗುರುತಿಸಲ್ಪಟ್ಟಿರುವ ಧರ್ಮಸ್ಥಳ ಕ್ಷೇತ್ರದಲ್ಲಿ ಮತ್ತೂಂದು ಐತಿಹಾಸಿಕ ಕಾರ್ಯಕ್ರಮಕ್ಕೆ ದಿನಗಣನೆ ಆರಂಭಗೊಂಡಿದೆ. ಕ್ಷೇತ್ರದ ಭಗವಾನ್‌ ಶ್ರೀ ಬಾಹುಬಲಿಯ ಚತುರ್ಥ ಮಹಾಮಸ್ತಕಾಭಿಷೇಕ ಫೆ. 9ರಿಂದ 18ರ ವರೆಗೆ ಅತ್ಯಂತ ವೈಭವೋಪೇತವಾಗಿ ನಡೆಯುವುದಕ್ಕೆ ಸಿದ್ಧತೆ ವೇಗವಾಗಿ ಸಾಗಿದೆ.ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗ ದರ್ಶನದಲ್ಲಿ ನಡೆಯುವ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುವುದಕ್ಕೆ ಭಕ್ತಜನ ಕಾತರದಿಂದ ಕಾಯುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲರೂ ಆಗಮಿಸುವ ಅಸಂಖ್ಯಾತ ಭಕ್ತ ವರ್ಗವನ್ನು ಸ್ವಾಗತಿಸುವುದಕ್ಕೆ ಕಾತರರಾಗಿದ್ದಾರೆ.

Advertisement

1982 ಪ್ರಥಮ ಮಹಾಮಸ್ತಕಾಭಿಷೇಕ
ಧರ್ಮಸ್ಥಳದ ರತ್ನಗಿರಿಯಲ್ಲಿ ಪ್ರತಿಷ್ಠಾಪಿಸಿರುವ 39 ಅಡಿ ಎತ್ತರದ ಭಗವಾನ್‌ ಬಾಹುಬಲಿಯ ವಿರಾಟ್‌ ಮೂರ್ತಿ ದಿ| ರತ್ನವರ್ಮ ಹೆಗ್ಗಡೆ ಹಾಗೂ ರತ್ನಮ್ಮ ಹೆಗ್ಗಡೆ ಅವರ ಸಂಕಲ್ಪದ ಪ್ರತೀಕ. ಕಾರ್ಕಳದ ಮಂಗಲಪಾದೆಯಲ್ಲಿ ವಿಗ್ರಹವನ್ನು ರೆಂಜಾಳ ಗೋಪಾಲಕೃಷ್ಣ ಶೆಣೈ ಅವರು ಕೆತ್ತಿದ್ದು, ಬಳಿಕ ಅದನ್ನು ವಿಶೇಷ ಟ್ರಾಲಿಯ ಮೂಲಕ ಕ್ಷೇತ್ರಕ್ಕೆ ತರಲಾಗಿತ್ತು.

1975ರಲ್ಲಿ  ಪ್ರತಿಷ್ಠಾಪನೆ ಕಾರ್ಯ ಪ್ರಾರಂಭಗೊಂಡಿದ್ದು, 1982ರ ಫೆ. 4ರಂದು 108ನೇ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜ್‌ ಮತ್ತು 108ನೇ ಆಚಾರ್ಯ ವಿಮಲ ಸಾಗರ ಮಹಾರಾಜರ ನೇತೃತ್ವದಲ್ಲಿ ಪ್ರಥಮ ಮಹಾಮಸ್ತಕಾಭಿಷೇಕ ನಡೆದಿತ್ತು. 1995ರ ಫೆ. 5ರಿಂದ 10ರ ವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್‌ ಜೀ ಮಹಾರಾಜರ ನೇತೃತ್ವದಲ್ಲಿ ದ್ವಿತೀಯ ಮಹಾಮಸ್ತಕಾಭಿಷೇಕ,  2007ರ ಜ. 28ರಿಂದ ಫೆ. 2ರ ವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್‌ ಜೀ ಮಹಾರಾಜರ ನೇತೃತ್ವ ದಲ್ಲಿ  ತೃತೀಯ ಹಾಗೂ ಈಗಿನದು 4ನೇ ಮಹಾಮಸ್ತಕಾಭಿಷೇಕದ ಸಂಭ್ರಮ.

ವಿನೂತನ  ಕಾರ್ಯ
ಸಾಂಪ್ರದಾಯಿಕವಾಗಿ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮ ನಡೆಸಿ ಬಳಿಕ ಬಾಹುಬಲಿಗೆ ಮಸ್ತಕಾಭಿಷೇಕ ನಡೆಯುತ್ತದೆ. ಆದರೆ ಕ್ಷೇತ್ರದಲ್ಲಿ ವಿನೂತನವಾಗಿ ಆಚಾರ್ಯ ಶ್ರೀಗಳು ಮತ್ತು ಭಟ್ಟಾರಕರ ಅನುಮತಿ ಪಡೆದು ಶ್ರೀ ಭಗವಾನ್‌ ಬಾಹುಬಲಿಯ ಪಂಚ ಮಹಾವೈಭವದ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದು ಬಾಹುಬಲಿಗೆ ಪ್ರಾಮುಖ್ಯ ಕೊಡುವ ಹೊಸ ಪರಿವರ್ತನೆ ಎಂದು ಪೂಜ್ಯರು ಈಗಾಗಲೇ ತಿಳಿಸಿದ್ದಾರೆ. ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದ ಹಿಂಬದಿಯಲ್ಲಿ ಪಂಚಮಹಾವೈಭವಕ್ಕಾಗಿ ವಿಶಾಲ ಸಭಾಂಗಣ ನಿರ್ಮಾಣಗೊಳ್ಳುತ್ತಿದೆ.

ಭರದಿಂದ ಸಾಗಿದೆ ಕಾಮಗಾರಿ
ಈ ಸಂದರ್ಭದಲ್ಲಿ  ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯಾಗಿ ಲೋಕೋಪಯೋಗಿ ಇಲಾಖೆಯಿಂದ ಒಟ್ಟು  
23.50 ಕೋ.ರೂ.ಗಳ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಟ್ಟು  15 ಕೋ.ರೂ.ಗಳಲ್ಲಿ ನೇತ್ರಾವತಿ ಸ್ನಾನಘಟ್ಟ ದಿಂದ ಧರ್ಮಸ್ಥಳದ ಮುಖ್ಯದ್ವಾರದ ವರೆಗಿನ 2 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ, 7.5 ಕೋ.ರೂ.ಗಳಲ್ಲಿ ಗಂಗೋತ್ರಿ ಕಟ್ಟಡದಿಂದ ಸ್ನಾನಘಟ್ಟವರೆಗಿನ 4 ಕಿ.ಮೀ.ರಸ್ತೆಯನ್ನು 7 ಮೀ. ಅಗಲಗೊಳಿಸುವುದು, ಬಸ್‌ ಡಿಪೋ ರಸ್ತೆ ವಿಸ್ತರಿಸುವುದು, 1 ಕೋ.ರೂ. ವೆಚ್ಚದಲ್ಲಿ ರತ್ನಗಿರಿ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.

Advertisement

ಮಹೋತ್ಸವ ಸಮಿತಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ರಾಗಿ ಡಿ. ಸುರೇಂದ್ರ ಕುಮಾರ್‌ ಮತ್ತು ಸಂಚಾಲಕರಾಗಿ ಡಿ. ಹಷೇìಂದ್ರ ಕುಮಾರ್‌ ಕರ್ತವ್ಯ ದಲ್ಲಿ  ತೊಡಗಿದ್ದಾರೆ. ರಾಜ್ಯ ಮಟ್ಟದ ಸಂಪರ್ಕ ಸಮಿತಿ, ಅಟ್ಟಳಿಗೆ ನಿರ್ಮಾಣ ಸಮಿತಿ, ಆರ್ಥಿಕ ಸಮಿತಿ, ಅಭಿಷೇಕ ಮತ್ತು ಅಟ್ಟಳಿಗೆ ಸಮಿತಿ, ಪೂಜಾ ಸಮಿತಿ, ಪಂಚಕಲ್ಯಾಣ ಸಮಿತಿ, ಸಾಂಸ್ಕೃತಿಕ ಸಮಿತಿ, ತ್ಯಾಗಿ ಸೇವಾ ಸಮಿತಿ, ಚಪ್ಪರ ಸಮಿತಿ, ಆಹಾರ ಸಮಿತಿ ಹೀಗೆ 26 ಸಮಿತಿಗಳನ್ನು ರಚಿಸಲಾಗಿದೆ..ರಾಜ್ಯ, ರಾಷ್ಟ್ರಮಟ್ಟದ ಗಣ್ಯರು ಪಾಲ್ಗೊಳ್ಳಲಿದ್ದು, ಅವರ ಕಾರ್ಯಕ್ರಮ ಜೋಡಣೆ, ಸ್ವಾಗತದ ಕುರಿತು ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ರಾಜ್ಯಾದ್ಯಂತ ವಿವಿಧ ಸಭೆ ನಡೆಸಿ, ಮಹಾ ಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next