ಕೋಲ್ಕತ: ಪಶ್ಚಿಮ ಬಂಗಾಳದ ಖ್ಯಾತ ಸಾಹಿತಿ ಹಾಗೂ ಜಾನಪದ ಸಾಹಿತ್ಯದ ಸಂಶೋಧಕಿ ರತ್ನಾ ರಶೀದ್ ಬ್ಯಾನರ್ಜಿ ಅವರು ತಮಗೆ 2019ರಲ್ಲಿ ತಮಗೆ ನೀಡಲಾಗಿದ್ದ “ಅನ್ನದ ಶಂಕರ್ ಸ್ಮಾರಕ ಸನ್ಮಾನ್’ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸು ಮಾಡಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಾಹಿತ್ಯ ಪ್ರಶಸ್ತಿ ಕೊಟ್ಟಿದ್ದರಿಂದಾಗಿ ಅವಮಾನವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಬರೆದಿರುವ “ಕಬೀತಾ ಬಿತಾನ್’ ಕವನ ಸಂಕಲನಕ್ಕೆ ರವೀಂದ್ರನಾಥ ಠಾಗೋರ್ ಅವರ ಜನ್ಮದಿನೋತ್ಸವದಂದು ಪ್ರಸಕ್ತ ವರ್ಷದಿಂದ ಪಶ್ಚಿಮ ಬಂಗಾಳ ಸರ್ಕಾರ ಆರಂಭಿಸಿರುವ “ಸಾಹಿತ್ಯ ಪ್ರಶಸ್ತಿ’ಯನ್ನು ಕೊಡಲಾಗಿದೆ.
ಇದು, ಸಾಹಿತಿ ರಶೀದ್ ಬ್ಯಾನರ್ಜಿಯವರ ಅಸಮಾಧಾನಕ್ಕೆ ಕಾರಣವಾಗಿದ್ದು, 2019ರಲ್ಲಿ ಪಶ್ಚಿಮ ಬಂಗಾ ಬಾಂಗ್ಲಾ ಅಕಾಡೆಮಿಯು ತಮಗೆ ಕೊಟ್ಟಿದ್ದ ಅನ್ನದ ಶಂಕರ್ ಸ್ಮಾರಕ ಸನ್ಮಾನ್ ಪ್ರಶಸ್ತಿಯನ್ನು ಅಕಾಡೆಮಿಯ ಅಧ್ಯಕ್ಷರೂ ಹಾಗೂ ರಾಜ್ಯ ಶಿಕ್ಷಣ ಸಚಿವರೂ ಆಗಿರುವ ಬ್ರಾತ್ಯಾ ಬಸು ಅವರಿಗೆ ವಾಪಸು ಕಳಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, “”ಮಮತಾ ಅವರು ರಾಜಕೀಯದಲ್ಲಿ ಸಾಧನೆ ಮಾಡಿದ್ದಾರೆಂದು ಒಪ್ಪುತ್ತೇನಾದರೂ ಸಾಹಿತ್ಯಿಕವಾಗಿ ಸಾಧನೆ ಮಾಡಿದ್ದಾರೆಂದು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ, ಅವರ ಪುಸ್ತಕಕ್ಕೆ ಪ್ರಶಸ್ತಿ ಕೊಟ್ಟಿರುವುದು ಒಂದು ರೀತಿಯಲ್ಲಿ ಸಾಹಿತ್ಯಕ್ಕೆ ಮಾಡಿದ ಅವಮಾನ’ ಎಂದು ರತ್ನಾ ತಿಳಿಸಿದ್ದಾರೆ.