ಚನ್ನರಾಯಪಟ್ಟಣ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಟಿಎಪಿಎಂಎಸ್ ಗೋದಾಮಿನಲ್ಲಿ ಶೇಖರಣೆ ಮಾಡಿದ್ದ ಸಾವಿರ ಕ್ವಿಂಟಲ್ ಗೋದಿಯನ್ನು ಗೋದಾಮಿನ ವ್ಯವಸ್ಥಾಪಕ ನಿಂಗರಾಜು ಕಳ್ಳಸಾಗಣೆ ಮಾಡಲು ಮುಂದಾಗಿದ್ದು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿನ ವಸತಿ ನಿಲಯ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಹಾಗೂ ಮೋರಾರ್ಜಿ ವಸತಿ ನಿಲಯಕ್ಕೆ ಗೋದಿ ನೀಡಬೇಕು. ಆದರೆ ಖದೀಮ ನಿಂಗರಾಜು ಜು.20ರ ತಡರಾತ್ರಿ ಲಾರಿ ಕರೆಸಿ ಅದರಲ್ಲಿ 200 ಕ್ಕೂ ಹೆಚ್ಚು ಚೀಲವನ್ನು ಲೋಡ್ ಮಾಡಿಸುವಾಗ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತೆರಳಿ ಗೋದಾಮಿನ ವ್ಯವಸ್ಥಾಪ ಕ ನಿಂಗರಾಜು ಅವರನ್ನು ವಶಕ್ಕೆ ಪಡೆದರು.
ತನಿಖೆ ನಡೆಸಿದ್ದು ಇನ್ನು ಗೋದಾಮಿನ ಮುಂಭಾಗ ನಿಂತಿದ್ದ ಲಾರಿ ಹಾಗೂ ಲಾರಿಯಲ್ಲಿದ್ದ ಗೋದಿ ವಶಕ್ಕೆ ಪಡೆದಿದ್ದಾರೆ. ಆಹಾರ ಮತ್ತು ನಾಗರೀಕ ಸೇವಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಗೋದಾಮಿ ಸ್ಥಳಕ್ಕೆ ರೈತ ಸಂಘ ಪದಾಧಿಕಾರಿಗಳು ಭೇಟಿ ನೀಡಿ ಆಹಾರ ಮತ್ತು ನಾಗರಿಕರ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಹಾರ ಸಾಮಗ್ರಿ ಅಕ್ರಮ ಮಾರಾಟ: ರೈತ ಸಂಘದ ತಾಲೂಕು ಅಧ್ಯಕ್ಷ ರವಿ ಮಾತನಾಡಿ, ನಿಂಗರಾಜು ಅರಕಲಗೂಡಿನಲ್ಲಿಯೂ ಇದೇ ರೀತಿ ಪಡಿತರ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದ ಇಲಾಖೆ ಅಧಿಕಾರಿಗಳು ಹೊಳೆನರಸೀಪುರಕ್ಕೆ ವರ್ಗಾವಣೆ ಮಾಡಿದ್ದರು. ಈಗೆ ಕೆಲ ತಿಂಗ ಹೊಳೆನರಸೀಪುರ ಗೋದಾಮಿನಲ್ಲಿಯೂ ಪಡಿತರ ಆಹಾರ ಅಕ್ರಮವಾಗಿ ಸಾಗಾಣೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ತಿಳಿದು ಕೂಡಲೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಅತನ್ನು ಅಮಾನತು ಮಾಡಲಾಗಿತ್ತು. ಆದರೆ ಈತ ಚನ್ನರಾಯಪಟ್ಟಣ ಗೋದಾಮಿಗೆ ವ್ಯವಸ್ಥಾಪಕನಾಗಿ ಕರ್ತಕ್ಕೆ ಹಾಜರಾಗಿ ಇಲ್ಲಿಯೂ ಇದೇ ರೀತಿ ಮಕ್ಕಳು ತಿನ್ನುವ ಆಹಾರ ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾನೂನು ಕ್ರಮಕ್ಕೆ ಆಗ್ರಹ: ಆಹಾರ ಇಲಾಖೆಯಲ್ಲಿ ಈತ ಬಹಳ ವರ್ಷಗಳಿಂದ ಪಳಗಿದ್ದು ಅಕ್ರಮವಾಗಿ ರಾತ್ರಿ ವೇಳೆ ಪಡಿತರ ಆಹಾರವನ್ನು ಲಾರಿಗಟ್ಟಲೆ ಮಾರಾಟ ಮಾಡಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾನೆ. ಇಲ್ಲಿ ಹಲವು ತಿಂಗಳಿನಿಂದ ಈ ಕೃತ್ಯ ನಡೆಯುತ್ತಿದೆ ಎಂದು ಗುಮಾನಿಯಿತ್ತು. ಆದರೆ, ಮಾಲು ಸಮೇತ ಹಿಡಿಯಬೇಕೆಂದು ಕಾಯ್ದ ಸಾರ್ವಜನಿಕರು ಈತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಪೊಲೀಸರು ಕಾನೂನು ಕ್ರಮ ಕೈಗೊ ಳ್ಳುವಂತೆ ಆಗ್ರಹಿಸಿದರು.
ತಕ್ಕ ಶಾಸ್ತಿ ಮಾಡಿ: ಬಡವರ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುವ ವಸತಿ ನಿಲಯಕ್ಕೆ ಕೇಂದ್ರ ಸರ್ಕಾರ ಗೋದಿ ಸರಬರಾಜು ಮಾಡಿದರೆ, ಇದರಲ್ಲಿಯೂ ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಇಂತಹರಿಗೆ ತಕ್ಕ ಶಾಸ್ತಿ ಆಗಬೇಕು. ಅಮಾನತು ಮಾಡಿದರೆ ಕೇಂದ್ರ ಕಚೇರಿಗೆ ಹೋಗಿ ಅಲ್ಲಿ ಹಣ ಕೊಟ್ಟು ಪುನಃ ಇಲಾಖೆಗೆ ಬರುತ್ತಾರೆ ಎಂದರೆ ಈತನಿಗೆ ಇನ್ನೆಷ್ಟು ಹಣದ ದಾಹವಿರಬೇಕು ಎಂದು ಕಿಡಿಕಾರಿದರು.
ಇಂತಹ ಭ್ರಷ್ಟ ಅಧಿಕಾರಿಗಳಿಗೆ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ಮಾಡುವುದು ತರವಲ್ಲ. ಒಂದು ವೇಳೆ ಈತ ಪುನಃ ಇಲಾಖೆ ಕರ್ತವ್ಯಕ್ಕೆ ಹಾಜರಾದರೆ ರಸ್ತೆಗೆ ಇಳಿದು ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಸಂಘ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತ ಸಂಘದ ಮುಖಂಡರಾದ ಹರೀಶ್, ಕುಮಾರ್, ಅಪ್ಪಾಜಿ, ನಂಜಪ್ಪ, ಮಂಜು, ನಿಂಗಣ್ಣ, ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.