Advertisement
ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರ ತವರು ಜಿಲ್ಲೆಯಲ್ಲೇ ಈಗ ಪಡಿತರ ಚೀಟಿದಾರರಿಗೆ ಸಕಾಲಕ್ಕೆ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಅಷ್ಟೇ ಅಲ್ಲ ಪಡಿತರ ಅವ್ಯವಸ್ಥೆ ಸರಿಪಡಿಸಲು ಸರಕಾರ ಜಾರಿಗೊಳಿಸಿರುವ ಕೆಲವೊಂದು ನಿಯಮಗಳಿಂದ ಬೇಸತ್ತು ಈಗಾಗಲೇ ಮಂಗಳೂರಿನ ಎಂಟು ಪಡಿತರ ಅಂಗಡಿಗಳು ಬಾಗಿಲು ಮುಚ್ಚಿವೆ. ಈ ರೀತಿ ಸರಕಾರ ಮತ್ತು ಪಡಿತರ ವಿತರಕರ ಸಂಘದ ನಡುವಿನ ಹಗ್ಗಜಗ್ಗಾಟದಿಂದಾಗಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.
ದ.ಕ. ಜಿಲ್ಲೆಯಲ್ಲಿ ಒಟ್ಟು 493 ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ ಮಂಗಳೂರು ನಗರ ವ್ಯಾಪ್ತಿಯಲ್ಲಿ 60, ಗ್ರಾಮಾಂತರ ವ್ಯಾಪ್ತಿಯಲ್ಲಿ 120 ಅಂಗಡಿಗಳಿವೆ. ಉಡುಪಿ ಜಿಲ್ಲೆಯಲ್ಲಿ 390 ಅಂಗಡಿಗಳಿವೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿ ಮೊದಲೇ ನಷ್ಟದಲ್ಲಿರುವ ನ್ಯಾಯಬೆಲೆ ಅಂಗಡಿದಾರರಿಗೆ ಸರಕಾರದ ಹೊಸ ನಿಯಮಗಳು ಈಗ ಮತ್ತಷ್ಟು ಸಮಸ್ಯೆ ತಂದೊಡ್ಡಿವೆ. ಪರಿಣಾಮ ಅಲ್ಲಲ್ಲಿ ನ್ಯಾಯಬೆಲೆ ಅಂಗಡಿಗಳು ಮುಚ್ಚಲ್ಪಡುತ್ತಿವೆ. ಜಿಲ್ಲೆಯ ಇತರೆಡೆಯೂ ಕೆಲವೆಡೆ ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ದ.ಕ. ಜಿಲ್ಲಾ ಪಡಿತರ ವಿತರಕರ ಸಂಘದ ಪ್ರಮುಖರೋರ್ವರು ತಿಳಿಸಿದ್ದಾರೆ.
Related Articles
ಪಡಿತರ ವಿತರಕರಿಗೆ ಒಂದು ಕೆಜಿ ಪಡಿತರ ವಿತರಿಸಿದರೆ 36 ಪೈಸೆ ಇದ್ದ ಕಮಿಷನನ್ನು ಕಳೆದ ಎಂಟು ತಿಂಗಳಿನಿಂದ 70 ಪೈಸೆಗೆ ಹೆಚ್ಚಳ ಮಾಡಲಾಗಿದೆ. ಇದರ ಪ್ರಕಾರ ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 500 ಮಂದಿ ಪಡಿತರ ಚೀಟಿದಾರರು ಇದ್ದಲ್ಲಿ ಸುಮಾರು 4,000 ರೂ. ಆ ವಿತರಕನಿಗೆ ಸಿಗುತ್ತದೆ. ಆದರೆ ನ್ಯಾಯಬೆಲೆ ಅಂಗಡಿ ಅಂದರೆ ಕನಿಷ್ಠ ಇಬ್ಬರು ಕೆಲಸಗಾರರು, ವಿದ್ಯುತ್ ಬಿಲ್ ಪಾವತಿ, ಅಂಗಡಿ ಬಾಡಿಗೆ ಎಂದೆಲ್ಲ ತಿಂಗಳಿಗೆ ಕನಿಷ್ಠ 20,000 ರೂ. ವರೆಗೆ ಖರ್ಚು ಬರುತ್ತದೆ. ಈ ಬಗ್ಗೆ ಸರಕಾರ ಗಮನ ಕೊಡದೆ ಕೇವಲ ನ್ಯಾಯಬೆಲೆ ಅಂಗಡಿಯವರ ಮೇಲೆಯೇ ಆರೋಪ ಮಾಡಲಾಗುತ್ತದೆ. ಸಮಸ್ಯೆಗಳ ಬಗ್ಗೆ ಹೇಳಿದಲ್ಲಿ ಪರವಾನಿಗೆ ರದ್ದು ಮಾಡಲಾಗುವುದು ಎನ್ನುತ್ತಾರೆ ಎಂದು ಸಂಘದ ಸದಸ್ಯರು ಹೇಳುತ್ತಾರೆ.
Advertisement
ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪೋಸ್ ಯಂತ್ರ ಕಡ್ಡಾಯ ಎಂದು ರಾಜ್ಯ ಸರಕಾರ ನಿಯಮ ಜಾರಿಗೊಳಿಸಿತು. ಆದರೆ ಇದಕ್ಕೆ ಬೇಕಾದ ವ್ಯವಸ್ಥೆಯನ್ನೇ ಮಾಡಿಲ್ಲ. ಕೇವಲ ಯಂತ್ರ ಅಳವಡಿಸಿದರೆ ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ತೊಂದರೆಗಳು ಉಂಟಾಗುತ್ತವೆ. ಯಂತ್ರ ಅಳವಡಿಸುವುದರಿಂದ ಸರ್ವರ್ ಸಮಸ್ಯೆ ತಲೆದೋರಿದರೆ ಅದು ಸರಿಯಾಗುವವರೆಗೆ ಕಾಯುವುದಕ್ಕೆ ಜನರೂ ತಯಾರಿರುವುದಿಲ್ಲ. ಇದು ಅಂಗಡಿಯವರಿಗೂ ತಲೆನೋವು ಎನ್ನುತ್ತಾರೆ ಅವರು.
ಪಾರದರ್ಶಕ ಸೇವೆಗಾಗಿ ಪೋಸ್ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್, ಪಡಿತರ ಚೀಟಿದಾರರಿಗೆ ಪಾರದರ್ಶಕವಾಗಿ ಪಡಿತರ ಸಿಗಬೇಕು. ಇದಕ್ಕಾಗಿ ರಾಜ್ಯದ ಎಲ್ಲಕಡೆ ಪೋಸ್ ಯಂತ್ರ ಅಳವಡಿಸಲಾಗಿದೆ. ವಿತರಕರು ಸಕಾಲಕ್ಕೆ ಪಡಿತರ ವಿತರಿಸದಿರುವುದು, ವಂಚನೆಗಳು ಇದರಿಂದ ಹತೋಟಿಗೆ ಬರಲಿವೆ ಎಂದರು. ಪಡಿತರ ವಿಳಂಬ?
ಈ ನಡುವೆ ಪಡಿತರ ವಿತರಣೆಯಲ್ಲಿಯೂ ವಿಳಂಬವಾಗುತ್ತಿದೆ ಎಂಬುದು ಪಡಿತರ ಚೀಟಿದಾರರ ಅಳಲು. ಪಡಿತರ ಬಂದಿದೆ ಎಂದು ಮೊಬೈಲ್‌ಗೆ ಸಂದೇಶ ಬರುತ್ತದೆ. ನ್ಯಾಯಬೆಲೆ ಅಂಗಡಿಗೆ ಹೋಗಿ ಕೇಳಿದರೆ ಬಂದಿಲ್ಲ ಅಥವಾ ಸ್ಟಾಕ್ ಖಾಲಿಯಾಗಿದೆ ಎನ್ನುತ್ತಾರೆ. ಕೆಲಸ ಬಿಟ್ಟು, ವಾಹನ ಬಾಡಿಗೆ ಮಾಡಿಕೊಂಡು ಬಂದರೆ ಪಡಿತರ ಸಿಗದೇ ಬರಿಗೈಯಲ್ಲಿ ವಾಪಸಾಗ ಬೇಕಾಗುತ್ತದೆ ಎಂದು ಅನಿತಾ ಎಸ್. ಭಂಡಾರ್ಕರ್ ಹೇಳುತ್ತಾರೆ ಆದರೆ ಸ್ಟಾಕ್ ಖಾಲಿಯಾಗುತ್ತಿಲ್ಲ. ಚೀಟಿದಾರರಿಗೆ ಸರಿಯಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ. ಪೋಸ್ ಇಲ್ಲವೇ ಕೂಪನ್
ಕೂಪನ್ ವ್ಯವಸ್ಥೆ ಜಾರಿಗೊಳಿಸಿದಾಗ ಬೇಡ ಎಂದು ಗಲಾಟೆ ಮಾಡಿದ್ದಲ್ಲದೇ ಅಂಗಡಿ ನಡೆಸಲಾಗುವುದಿಲ್ಲ ಎಂದೂ ಕೆಲ ಅಂಗಡಿದಾರರು ಬರೆದು ಕೊಟ್ಟಿದ್ದರು. ಈಗ ನಿಲ್ಲಿಸಿದ ಅಂಗಡಿ ಬೇಕು ಎಂದು ಕೇಳುತ್ತಿದ್ದಾರೆ. ಪೋಸ್ ಯಂತ್ರ ಅಳವಡಿಸದೇ ಇರುವ ಅಂಗಡಿಗಳಲ್ಲಿ, ಇಂಟರ್ನೆಟ್ ಸಿಗದೇ ಇರುವೆಡೆಗಳಲ್ಲಿ ಮತ್ತೆ ಕೂಪನ್ ವ್ಯವಸ್ಥೆ ಜಾರಿಗೆ ತರಲು ಸರಕಾರ ನಿರ್ಧರಿಸಿದೆ. ಸರ್ವರ್ ಸಮಸ್ಯೆ ನೆಪ ಅಷ್ಟೆ. ಇಷ್ಟೆಲ್ಲ ಇಂಟರ್ನೆಟ್ ಬಳಕೆ ಮಾಡುತ್ತೇವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಸರ್ವರ್ ಸಮಸ್ಯೆ ತಲೆದೋರುವುದಾ? ಎಂದು ಪ್ರಶ್ನಿಸಿರುವ ಸಚಿವ ಯು.ಟಿ. ಖಾದರ್ ಅವರು ಸರ್ವರ್ ಸಮಸ್ಯೆ ನೆಪವೊಡ್ಡಿ ಯಂತ್ರ ಅಳವಡಿಸಲು ಹಿಂದೇಟು ಹಾಕಿದ್ದ ನ್ಯಾಯಬೆಲೆ ಅಂಗಡಿಗಳು ಕೂಪನ್ ವ್ಯವಸ್ಥೆಗೆ ತೆರೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. – ಧನ್ಯಾ ಬಾಳೆಕಜೆ