ಚಿಕ್ಕಬಳ್ಳಾಪುರ: ಚುನಾವಣೆ ಹೊಸ್ತಿಲಲ್ಲಿ ಜಿಲ್ಲೆಯ ಪಡಿತರದಾರರಿಗೆ ಅಕ್ಕಿ ಕಡಿತದ ಬಿಸಿ ತಟ್ಟುತ್ತಿದೆ. ಈ ಮೊದಲು ಅನ್ನಭಾಗ್ಯ ಯೋಜನೆಯಡಿ 6 ಕೆ.ಜಿ. ವಿತರಿಸುತ್ತಿದ್ದ ಅಕ್ಕಿಯಲ್ಲಿ ಇದೀಗ 2 ಕೆ.ಜಿ. ಕಡಿತವಾಗಿದ್ದು, ಬಡ ಕುಟುಂಬಗಳಿಗೆ ಒಂದು ರೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಿಲ್ಲಾದ್ಯಂತ ಏಪ್ರಿಲ್ ತಿಂಗಳಿಗೆ ಹಂಚಿಕೆ ಆಗಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಇದುವರೆಗೂ ವಿತರಣೆ ಆಗುತ್ತಿದ್ದ 6 ಕೆ.ಜಿ. ಬದಲಾಗಿ ಪ್ರತಿ ಬಿಪಿಎಲ್ ಕುಟುಂಬ ಒಬ್ಬ ಸದಸ್ಯನಿಗೆ ತಲಾ 4 ಕೆ.ಜಿ. ಮಾತ್ರ ವಿತರಿಸುವ ಮೂಲಕ 2 ಕೆ.ಜಿ. ಅಕ್ಕಿ ಕಡಿತ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
7 ಕೆ.ಜಿ.ಯಿಂದ 4 ಕೆ.ಜಿ.ಗೆ ಇಳಿಕೆ: ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರತಿ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ 7 ಕೆ.ಜಿ. ಅಕ್ಕಿ ವಿತರಣೆ ಆಗುತ್ತಿತ್ತು. ಅದು ಜನವರಿ, ಫೆಬ್ರವರಿಯಲ್ಲಿ 1 ಕೆ.ಜಿ. ಕಡಿತವಾಗಿ 6 ಕೆ.ಜಿ.ಗೆ ಬಂದು ನಿಂತಿತ್ತು. ಆದರೆ, ಈಗ 6ರಲ್ಲಿ 4 ಕೆ.ಜಿ. ಮಾತ್ರ ವಿತರಣೆ ಆಗುವ ಮೂಲಕ ಉಳಿದ 2 ಕೆ.ಜಿ. ಅಕ್ಕಿ ಕಡಿತ ಆಗಿರುವುದರಿಂದ ಸಹಜವಾಗಿಯೇ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕಡಿತಗೊಳಿಸಿರುವುದು ಬಡವರನ್ನು ಕೆರಳಿಸಿದೆ.
ಸದ್ಯ ಜಿಲ್ಲೆಯ ಎಎವೈ (ಅಂತ್ಯೋದಯ) ಪ್ರತಿ ಪಡಿತರ ಚೀಟಿಗೆ 21 ಕೆ.ಜಿ. ಅಕ್ಕಿ, 14 ಕೆ.ಜಿ. ರಾಗಿ ವಿತರಿಸಲಾಗುತ್ತಿದ್ದರೆ, ಬಿಪಿಎಲ್ ಕಾರ್ಡ್‌ನ ಪ್ರತಿ ಸದಸ್ಯನಿಗೆ ಅನ್ನಭಾಗ್ಯದಡಿ 4 ಕೆ.ಜಿ. ಅಕ್ಕಿ, 2 ಕೆ.ಜಿ. ರಾಗಿ ಉಚಿತವಾಗಿ ವಿತರಿಸಲಾಗುತ್ತಿದೆ. ಏಕ ಸದಸ್ಯ ಇರುವ ಎಪಿಎಲ್ ಕಾರ್ಡ್‌ಗೆ ತಿಂಗಳಿಗೆ 5 ಕೆ.ಜಿ., ಒಂದಕ್ಕಿಂತ ಹೆಚ್ಚಿರುವ ಪ್ರತಿ ಪಡಿತರ ಚೀಟಿಗೆ ಕೆ.ಜಿ.ಗೆ 15 ರೂ. ನಂತೆ 10 ಕೆ.ಜಿ. ಅಕ್ಕಿ ನೀಡುತ್ತಿದ್ದು, ರಾಗಿ ವಿತರಿಸುತ್ತಿಲ್ಲ.
ರಾಗಿ ಬೆಳೆದವರಿಗೆ ಪುನಃ ರಾಗಿ ವಿತರಣೆ: ಜಿಲ್ಲೆಯಲ್ಲಿ ಈಗಾಗಲೇ 8,573 ರೈತರಿಂದ 1,19,234 ಕ್ವಿಂಟಲ್ ರಾಗಿಯನ್ನು ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದೆ. ಆದರೆ, ಪುನಃ ರೈತರಿಂದ ಖರೀದಿಸಿದ ರಾಗಿಯನ್ನು ಪಡಿತರ ಅಂಗಡಿಗಳ ಮೂಲಕ ರೈತರಿಗೆ ವಿತರಿಸುತ್ತಿದೆ. ಒಂದು ರೀತಿ ಅಕ್ಕಿ ಬೇಕಿದ್ದರೂ ಅಕ್ಕಿ ಕಡಿತ ಮಾಡಿರುವ ಇಲಾಖೆ, ಬೇಡವಾದ ರಾಗಿಯನ್ನು ಬಲವಂತವಾಗಿ ನೀಡಲಾಗುತ್ತಿದೆಯೆಂಬ ಆರೋಪ ಪಡಿತರ ಗ್ರಾಹಕರಿಂದ ಕೇಳಿ ಬರುತ್ತಿದೆ.
ನಮ್ಮ ಹಂತದ ನಿರ್ಧಾರವಲ್ಲ: ಸವಿತಾ 2 ಕೆ.ಜಿ. ಅಕ್ಕಿ ಕಡಿತ ನಮ್ಮ ಹಂತದಲ್ಲಿ ಆಗಿರುವ ನಿರ್ಧಾರ ಅಲ್ಲ. ಸರ್ಕಾರದ ಆದೇಶದಂತೆ 2 ಕೆ.ಜಿ. ಅಕ್ಕಿ ಬದಲಾಗಿ ತಲಾ 2 ಕೆ.ಜಿ. ರಾಗಿ ವಿತರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿರುವ ರಾಗಿ ಮುಗಿಯುವರೆಗೂ ಬಿಪಿಎಲ್ ಕುಟುಂಬಗಳಿಗೆ ರಾಗಿ ವಿತರಿಸುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಸವಿತಾ ಉದಯವಾಣಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿಂದ ಕೇವಲ 4 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಜೊತೆಗೆ 2 ಕೆ.ಜಿ. ರಾಗಿ ವಿತರಿಸಲಾಗುತ್ತಿದೆ. ರಾಗಿ ಬದಲು ಅಕ್ಕಿಯೇ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಮಾರುಕಟ್ಟೆಯಲ್ಲಿ ರಾಗಿಗಿಂತ ಅಕ್ಕಿ ಬೆಲೆ ಏರಿಕೆ ಆಗಿರುವುದರಿಂದ ಪಡಿತರ ಅಂಗಡಿಗಳಲ್ಲಿ ಮೊದಲಿನಂತೆ ತಲಾ 6 ಕೆ.ಜಿ. ಅಕ್ಕಿ ವಿತರಿಸಿದರೆ ಬಡವರಿಗೆ ಅನುಕೂಲವಾಗಲಿದೆ.
–ಶ್ರೀನಿವಾಸ್, ಕೂಲಿ ಕಾರ್ಮಿಕ, ಚಿಕ್ಕಬಳ್ಳಾಪುರ