ಬಳ್ಳಾರಿ: ಕೋವಿಡ್ 19 ವೈರಸ್ ಭೀತಿಯಿಂದಾಗಿ ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗುತ್ತಿರುವ ಕೂಲಿ ಕಾರ್ಮಿಕರಿಗೆ ಹಲವು ಸಂಘ ಸಂಸ್ಥೆ, ಸಮಾಜ ಸೇವಕರಿಂದ ರಸ್ತೆಯುದ್ದಕ್ಕೂ ಊಟದ ವ್ಯವಸ್ಥೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಆದರೆ ಗೃಹ ಬಂಧನದಲ್ಲಿರುವ ವೈರಸ್ ಶಂಕಿತ ಕುಟುಂಬಕ್ಕೆ ನೆರೆಹೊರೆಯವರು ದೇಣಿಗೆ ಸಂಗ್ರಹಿಸಿ ತಿಂಗಳ ದವಸ ಧಾನ್ಯಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜತೆಗೆ ಹೊರಬರದಂತೆ ಜಾಗೃತಿಯನ್ನೂ ಮೂಡಿಸಿದ್ದಾರೆ.
ಕೋವಿಡ್ 19 ವೈರಸ್ ಭೀತಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ವೈರಸ್ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಆಗಿದೆ. ದೂರದೂರುಗಳಿಂದ ದುಡಿಯಲೆಂದು ಬೃಹತ್ ನಗರಗಳಿಗೆ ವಲಸೆ ಬಂದಿದ್ದ ಕೂಲಿ ಕಾರ್ಮಿಕರೆಲ್ಲರೂ ವೈರಸ್ ಭೀತಿಯಿಂದಾಗಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದಾರೆ. ಹೀಗೆ ಬೆಂಗಳೂರಿಗೆ ದುಡಿಯಲೆಂದು ಕುಟುಂಬ ಸಮೇತ ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೋಗಿದ್ದ ಬಳ್ಳಾರಿ ನಗರದ 7ನೇ ವಾರ್ಡ್‌ನಲ್ಲಿರುವ ಗಾರೆ ಕೆಲಸದ ಕುಟುಂಬ ಸಹ ಕಳೆದ ಎರಡ್ಮೂರು ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕುಟುಂಬಕ್ಕೂ ಬಳ್ಳಾರಿಯಲ್ಲಿ ವೈದ್ಯರು ತಪಾಸಣೆ ವೇಳೆ ಸ್ಕ್ರೀನಿಂಗ್ ಮಾಡಿದ್ದು, 14 ದಿನಗಳ ಕಾಲ ಗೃಹಬಂಧನ (ಹೋಮ್ ಕ್ವಾರಂಟೈನ್) ದಲ್ಲಿರುವಂತೆ ಸೂಚಿಸಿದ್ದು, ಅದರಂತೆ ಮನೆಯಲ್ಲಿ ಇರಿಸಿರುವುದು ನೆರೆಹೊರೆಯ ಜನರನ್ನು ಆತಂಕಕ್ಕೀಡು ಮಾಡಿದೆ.
ನಗರದ 6 ಮತ್ತು 7ನೇ ವಾರ್ಡ್‌ಗಳು ಸಂಪೂರ್ಣ ಕೂಲಿ ಕಾರ್ಮಿಕರಿಂದ ಕೂಡಿರುವ ಸ್ಲಂ ಪ್ರದೇಶಗಳಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ವೃದ್ಧರು, ಮಕ್ಕಳು ಇದ್ದು, ಶಾಲೆಗಳು, ಟ್ಯೂಷನ್ ಗಳು ರಜೆಯಲ್ಲಿರುವ ಕಾರಣ ಮಕ್ಕಳು, ಯುವಕರು ರಸ್ತೆಗಳಲ್ಲೇ ಆಟವಾಡುತ್ತಾ ಇರುತ್ತಾರೆ. ಇಂಥ ಪ್ರದೇಶಗಳಲ್ಲಿ ಸೋಂಕು ಹರಡಿದರೆ ಅದರ ಪರಿಣಾಮ ಊಹಿಸಲೂ ಅಸಾಧ್ಯವಾಗಲಿದೆ.
ಮೇಲಾಗಿ ಕೇಂದ್ರ ಸರ್ಕಾರದ ಲಾಕ್‌ಡೌನ್ ಆದೇಶದಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ವಾರ್ಡ್‌ಗಳಲ್ಲೂ ಸಾಧ್ಯವಾದಷ್ಟು ಮಕ್ಕಳು, ಯುವಕರು, ವೃದ್ಧರು ಮನೆಯಿಂದ ಹೊರಗೆ ಬರುವುದನ್ನು ತಡೆಹಿಡಿಯಲಾಗಿದೆ. ಆದರೂ, ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಬೀದಿಗಳ ರಸ್ತೆಬದಿಯಲ್ಲಿ ನಿಲ್ಲುವುದು, ಮಕ್ಕಳು ಆಟವಾಡುವುದು ಸಾಮಾನ್ಯ. ಹಾಗಾಗಿ ಇಂಥಹ ಸಂದರ್ಭದಲ್ಲಿ ಗೃಹಬಂಧನದಲ್ಲಿರುವ ಶಂಕಿತ ಸೋಂಕಿತರು ಸಂಚರಿಸಿದಲ್ಲಿ ಇತರರಿಗೆ ಹರಡುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಗೃಹ ಬಂಧನದಲ್ಲಿರುವವರಿಗೆ ತಿಂಗಳ ರೇಷನ್ ನೀಡುವ ಮೂಲಕ ಮನೆಯಿಂದ ಹೊರಗಡೆ ಬಾರದಂತೆ ಮನವಿ ಮಾಡಲಾಗಿದೆ. ಜತೆಗೆ ವಾರ್ಡ್‌ಗಳಲ್ಲೂ ಕೆಲವೊಂದು ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಕಡುಬಡವರಾದ ಶಂಕಿತ ಕುಟುಂಬದ ವ್ಯಕ್ತಿಗಳು, ಅನ್ಯಕಾರ್ಯನಿಮಿತ್ತ ಪದೇ ಪದೆ ಹೊರಗಡೆ ಸಂಚರಿಸುವ ಸಾಧ್ಯತೆಯಿರುವುದರಿಂದ ಇತರರಿಗೂ ಸೋಂಕು ಆವರಿಸಲಿದೆ ಎಂದು ಭಯಭೀತರಾದ ನೆರೆಹೊರೆಯ ಜನರು ಪ್ರತಿಯೊಬ್ಬರಿಂದ ಸುಮಾರು 2 ಸಾವಿರ ರೂಗಳಷ್ಟು ದೇಣಿಗೆ ಸಂಗ್ರಹಿಸಿದ್ದಾರೆ. ಮೂವರು ಸದಸ್ಯರುಳ್ಳ ಈ ಕುಟುಂಬಕ್ಕೆ ಒಂದು ತಿಂಗಳಿಗೆ ಆಗುವಷ್ಟು 25 ಕೆಜಿ ಅಕ್ಕಿ, 3 ಲೀಟರ್ ಎಣ್ಣೆ, 2 ಉಪ್ಪಿನ ಪ್ಯಾಕೇಟ್, ತಲೆಗೆ ಹಚ್ಚಿಕೊಳ್ಳಲು ಕೊಬ್ಬರಿ ಎಣ್ಣೆ, ಬೆಳಗ್ಗೆ ಹಲ್ಲುಜ್ಜಲು ಟೂತ್‌ಪೇಸ್ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜತೆಗೆ ದಯಮಾಡಿ ವೈದ್ಯರು ಸೂಚಿಸಿರುವ ನಿಗದಿತ 14 ದಿನಗಳ ಕಾಲ ಹೊರಗಡೆ ಬಾರದಂತೆ ಮನೆಯಲ್ಲೇ ಇರುವಂತೆಯೂ ಕೋರಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ದೇಣಿಗೆ ನೀಡಿದ ಮುಖಂಡರು ಉದಯವಾಣಿಗೆ ತಿಳಿಸಿದ್ದಾರೆ.
-ವೆಂಕೋಬಿ ಸಂಗನಕಲ್ಲು