ಮುಳಬಾಗಿಲು: ತಾಲೂಕಿನ ದೊಡ್ಡಿಗಾನಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ವೇಳೆ ತೂಕದಲ್ಲಿ ಮೋಸ ಎಸಗಲಾಗುತ್ತಿದೆ ಎಂದು ಎಂದು ಆರೋಪಿಸಿ ಪಡಿತರ ಚೀಟಿದಾರರು ಬಿಜೆಪಿ ಮುಖಂಡರ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ.ಎನ್.ಪ್ರವೀಣ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಡಿತರದಾರರು, ತಾಲೂಕಿನ ಆವಣಿ ಹೋಬಳಿ ದೇವರಾಯಸಮುದ್ರ ಗ್ರಾಪಂ ವ್ಯಾಪ್ತಿಯ ದೊಡ್ಡಿಗಾನಹಳ್ಳಿ, ಮಲ್ಲಪ್ಪನಹಳ್ಳಿ, ಬೆಳ್ಳಂಬಳ್ಳಿ ಹಾಗೂ ಕಮ್ಮದಟ್ಟಿ ಗ್ರಾಮಗಳ ಜನರಿಗೆ ಸರ್ಕಾರದಿಂದ ವಿತರಣೆ ಮಾಡುವ ಆಹಾರಧಾನ್ಯಗಳನ್ನು ವಿತರಣೆ ಮಾಡಲು ದೊಡ್ಡಿಗಾನಹಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲಾಗಿದೆ. ಸದ್ಯ ಶ್ರೀನಿವಾಸಗೌಡ ಎಂಬುವರು ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದು, ಸರ್ಕಾರದಿಂದ ಉಚಿತವಾಗಿ ನೀಡುವ ಧಾನ್ಯವನ್ನು ಪಡಿತರ ಚೀಟಿದಾರರಿಗೆ ನೀಡದೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಕುರಿತು ಕೇಳಿದರೆ ನಿಮ್ಮ ಪಡಿತರ ಚೀಟಿ ಸರಿಯಿಲ್ಲ, ಭಾವಚಿತ್ರ ಇಲ್ಲ, ಚಿಕ್ಕ ಮಕ್ಕಳಿಗೆ ರೇಷನ್ ನೀಡುವುದಿಲ್ಲ, ಆಧಾರ್ ಸಂಖ್ಯೆ ಲಿಂಕ್ ಆಗಿಲ್ಲ ಎಂದು ಸಬೂಬು ನೀಡಿ ನಯವಾಗಿ ಮೋಸ ಮಾಡುತ್ತಿದ್ದಾರೆ. ಜತೆಗೆ ತೂಕದಲ್ಲೂ ಭಾರೀ ಮೋಸ ಮಾಡುತ್ತಿದ್ದಾರೆ. ತಕ್ಕಡಿಯ ಹಿಂಬದಿಯಲ್ಲಿ 250 ಗ್ರಾಂ. ತೂಕದ ಕಬ್ಬಿಣದ ರಾಡ್ ಕಟ್ಟಿರುವುದನ್ನು ಸಾರ್ವಜನಿಕರೇ ಇತ್ತೀಚೆಗೆ ಬಹಿರಂಗಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದರೆ ನಿರ್ಲಕ್ಷ್ಯದಿಂದ ಉತ್ತರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದಾರೆ. ಹೀಗೆ ತೂಕದಲ್ಲಿ ಮೋಸ ಮಾಡುವ ಜತೆಗೆ ಪಡಿತರ ವಿತರಣೆ ಮಾಡಲು ಕಾಟ ಕೊಡುತ್ತಿರುವ, ನಿಗದಿತ ದರಕ್ಕಿಂತ ಅಧಿಕ ದರ ವಸೂಲಿ ಮಾಡುತ್ತಿರುವ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದೇ ರೀತಿ 2009ರಲ್ಲೂ ಪಡಿತರ ಚೀಟಿದಾರರಿಗೆ ಮೋಸ ಮಾಡಿ ವಂಚಿಸಿದ್ದಾಗ ತಾಲೂಕು ಆಡಳಿತ ಆ ಸಂದರ್ಭದಲ್ಲಿ ಶ್ರೀನಿವಾಸ್‌ಗೌಡ ಅವರ ನ್ಯಾಯಬೆಲೆ ಅಂಗಡಿಯನ್ನು ಕೆಲ ಕಾಲ ರದ್ದುಗೊಳ್ಳಿಸಿ ಬೇರೆ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿತ್ತು. ಮತ್ತೆ ಲೈಸನ್ಸ್ ಪಡೆದುಕೊಂಡು ಹಳೇ ಚಾಳಿ ಮುಂದುವರಿಸಿದ್ದು, ಕೂಡಲೇ ಕಾನೂನು ಕ್ರಮಕೈಗೊಂಡು ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸಬೇಕು.
ನ್ಯಾಯಬೆಲೆ ಅಂಗಡಿಯನ್ನು ಬೇರೆ ವ್ಯಕ್ತಿಗಳಿಗೆ ಹಸ್ತಾಂತರಿಸಿ ಅವರ ಮೂಲಕ ಆಹಾರಧಾನ್ಯಗಳನ್ನು ವಿತರಣೆ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪ್ರಸಾದ್, ತಾಲೂಕು ಬಿಜೆಪಿ ಅಧ್ಯಕ್ಷ ನಾಗಾರ್ಜುನ, ಯುವ ಮೋರ್ಚಾ ಅಧ್ಯಕ್ಷ ವಿಶ್ವನಾಥರೆಡ್ಡಿ, ಮುಖಂಡರಾದ ನಂಗಲಿ ರಮೇಶ್, ಕಿರಣ್, ಕೊಲದೇವಿ ಶ್ರೀರಾಮಪ್ಪ, ಹನುಮಪ್ಪ, ರಮೇಶ್ ಸೇರಿದಂತೆ ಅನೇಕರಿದ್ದರು.