Advertisement

ಪಡಿತರ ವಿತರಣೆ ಆದೇಶ ಗೊಂದಲ; ಕೊನೆಗೂ ತಪ್ಪಲಿಲ್ಲ ಪಡಿತರದಾರರ ಸಂಕಷ್ಟ

10:34 PM Apr 19, 2020 | Sriram |

ಉಡುಪಿ: ರಾಜ್ಯ ಸರಕಾರದ ಆದೇಶದಂತೆ ಎರಡು ತಿಂಗಳ ಪಡಿತರವನ್ನು ವಿತರಿಸಲಾಗುತ್ತಿದ್ದು, ಇದೀಗ ಹೊಸದಾಗಿ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇರುವವರಿಗೂ ಸಾಮಗ್ರಿ ನೀಡುವಂತೆ ಸರಕಾರ ಆದೇಶ ನೀಡಿದೆ. ಆದರೆ ಜಿಲ್ಲೆಯಲ್ಲಿ ಕೆಲವೆಡೆ ಹೊಸ ಕಾರ್ಡ್‌ದಾರರಿಗೆ ಪಡಿತರ ಸಾಮಗ್ರಿ ದೊರಕದ ಪ್ರಕರಣ ಪತ್ತೆಯಾಗಿದೆ.

Advertisement

ಇಂಥ ಕೆಲವು ಪ್ರಕರಣಗಳು ಉದಯ ವಾಣಿಯ ಗಮನಕ್ಕೆ ಬಂದಿದ್ದು, ಕೆಲವು ಪಡಿತರ ಕಾರ್ಡ್‌ದಾರರೂ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

ಸತತ 2 ಗಂಟೆ ಕಾದೆ
ನನಗೆ 79 ವರ್ಷ. ಚಿಟಾ³ಡಿ ವಾರ್ಡ್‌ ಭಾಗ್ಯ ಮಂದಿರದ ನಿವಾಸಿ. ತಹಶೀಲ್ದಾರ್‌ ಮೂಲಕ ಹೊಸ ಕಾರ್ಡ್‌ ಪಡೆದುಕೊಂಡಿದ್ದೇನೆ. ಎ.18 ರಂದು ಸಮೀಪದ ನ್ಯಾಯಬೆಲೆ ಅಂಗಡಿ ಹೋಗಿ ಬೆಳಗ್ಗೆ 8.30ರಿಂದ 10.30ರ ವರೆಗೆ ಸರತಿ ಸಾಲಿನಲ್ಲಿ ಕಾದು ನಿಂತೆ. ಸಾಮಗ್ರಿ ಪಡೆಯಲು ಮುಂದಾದಾಗ ಅಂಗಡಿಯ ಸಿಬಂದಿ ಹೊಸ ಕಾರ್ಡ್‌ಗೆ ಸಾಮಗ್ರಿ ಬಿಡುಗಡೆಯಾಗಿಲ್ಲ ಎಂದರು. ಏನು ಮಾಡಬೇಕೋ ತೋಚಲಿಲ್ಲ ಎನ್ನುತ್ತಾರೆ ಶ್ರೀನಿವಾಸ್‌ ಶಾನಭಾಗ್‌.

ಕಾರ್ಯರೂಪಕ್ಕೆ ಯಾವಾಗ?
ನಾನು ಮತ್ತು ನನ್ನ ಪತ್ನಿ ಭಾಗ್ಯಮಂದಿರ ಕಾಲನಿಯಲ್ಲಿ ಬಾಡಿಗೆಗೆ ಇದ್ದೇವೆ. ಹೆಂಡತಿಗೆ 69 ವರ್ಷ. ಅವರಿಗೆ ತೀವ್ರ ಅನಾರೋಗ್ಯದ ಸಮಸ್ಯೆ ಇದೆ. ಚಿಕಿತ್ಸೆಗಾಗಿ ಓಡಾಟ ಮಾಡುತ್ತಿದ್ದೇನೆ. ಈ ಮಧ್ಯೆ ಎರಡು ಗಂಟೆ ಕಾದರೂ ಪ್ರಯೋಜನವಾಗಿಲ್ಲ. ಈ ವಯಸ್ಸಿನಲ್ಲಿ ನಮ್ಮ ಹಕ್ಕಿನ ಪಡಿತರವನ್ನು ಪಡೆಯಲು ಪರದಾಡಬೇಕಿದೆ. ಇದ್ಯಾವ ನ್ಯಾಯ? ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಕಾರ್ಡ್‌ ಇಲ್ಲದೆ ಅಕ್ಕಿ ನೀಡುವುದಾಗಿ ಘೋಷಿಸುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಸರಕಾರದ ಆದೇಶದಲ್ಲಿ ಹೊಸ ಕಾರ್ಡ್‌
ದಾರರಿಗೆ ಮೇ ತಿಂಗಳಲ್ಲಿ ವಿತರಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದರೆ ನಾವು ಕಾಯುವ ಪರಿಸ್ಥಿತಿ ಇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಿಖೀತವಾಗಿ ಯಾವುದೇ
ಸೂಚನೆ ಬಂದಿಲ್ಲ
ಉದಯವಾಣಿಯು ಈ ಸಂಬಂಧ ಮಾಹಿತಿ ಕೆದಕಿದಾಗ ಇಲಾಖೆಗಳ ಮೂಲಗಳ ಪ್ರಕಾರ ಸಿಕ್ಕ ಮಾಹಿತಿಯೆಂದರೆ, ಸರಕಾರದ ಆದೇಶ ಬಂದಿದ್ದರೂ ಲಿಖೀತವಾಗಿ ಯಾವುದೇ ಸೂಚನೆ ಬಂದಿಲ್ಲ. ಜತೆಗೆ ಪ್ರಸ್ತುತ ಮಾರ್ಚ್‌ ತಿಂಗಳ ಪಡಿತರ ವಿತರಿಸಲಾಗುತ್ತಿದೆ. ಒಂದು ವೇಳೆ ಇದೇ ಪಡಿತರ ಪ್ರಮಾಣದಲ್ಲಿ ಹೊಸ ಕಾರ್ಡ್‌ದಾರರಿಗೂ ಹಂಚಿಕೆ ಮಾಡಿ ದರೆ ಮಾರ್ಚ್‌ ತಿಂಗಳ ಪಡಿತರದಾರರಿಗೆ ಕೊರತೆಯಾಗಬಹುದು.

Advertisement

ಹೊಸ ಕಾರ್ಡ್‌ದಾರರಿಗೆ ಈ ತಿಂಗಳಿನಿಂದ (ಎಪ್ರಿಲ್‌) ವಿತರಣೆ ಯಾಗಬೇಕಿದೆ. ಎಪ್ರಿಲ್‌ ಪಡಿತರ ಇನ್ನೂ ವಿತರಣೆಯಾಗಬೇಕಿದೆಯಷ್ಟೇ ಎನ್ನಲಾಗಿದೆ.

ಆದರೆ ಸರಕಾರದ ಈ ಗೊಂದಲದ ಆದೇಶದಿಂದ (ಯಾವ ತಿಂಗಳಿನಿಂದ ವಿತರಿಸ ಬೇಕು ಇತ್ಯಾದಿ) ಜನರು ಸಂಕಷ್ಟ ಪಡು ವಂತಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬೆಳ್ಳಂಬೆಳಗ್ಗೆಯೇ ನ್ಯಾಯಬೆಲೆ ಅಂಗಡಿಗೆ ಹೋಗಿ ಗಂಟೆಗಟ್ಟಲೆ ನಿಂತು ಬರುವಂತಾಗಿದೆ. ಇನ್ನು ಮುಂದಾದರೂ ಆದೇಶಗಳಲ್ಲಿ ಇಂಥ ಗೊಂದಲ ಉಂಟಾಗಬಾರದು ಎನ್ನುತ್ತಾರೆ ಪಡಿತರದಾರರು.

ನ್ಯಾಯಬೆಲೆ ಅಂಗಡಿಗಳಿಗೆ ಪೀಕಲಾಟ
ಸರಕಾರ ಹೊಸ ಆದ್ಯತಾ (ಬಿಪಿಎಲ್‌) ಮತ್ತು ಆದ್ಯತೇತರ (ಎಪಿಎಲ್‌) ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿ, ವಿಲೇವಾರಿಗೆ ಬಾಕಿ ಇರುವ ಅರ್ಜಿದಾರರಿಗೆ ಪಡಿತರ ವಿತರಿಸುವಂತೆ ಆದೇಶ ನೀಡಿದೆ. ಆದರೆ ಆನ್‌ಲೈನ್‌ನಲ್ಲಿ ಮಾತ್ರ ಈ ಕಾರ್ಡ್‌ದಾರರಿಗೆ ಸಾಮಗ್ರಿ ಬಿಡುಗಡೆಯಾಗಿಲ್ಲ ಎನ್ನುವುದಾಗಿ ತೋರಿಸುತ್ತಿದೆ. ಇದರಿಂದ ಪಡಿತರ ಅಂಗಡಿಗಳ ಸಿಬಂದಿ ಸಾಮಗ್ರಿ ವಿತರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನ್ಯಾಯಬೆಲೆ ಅಂಗಡಿಯವರೂ ಜನರ ಟೀಕೆಗೆ ಗುರಿಯಾಗುವಂತಾಗಿದೆ ಎಂಬುದು ಕೇಳಿಬರುತ್ತಿರುವ ಅಭಿಪ್ರಾಯ.

ಮುಂದಿನ ತಿಂಗಳು ವಿತರಣೆ
ಸರಕಾರದ ಆದೇಶದಂತೆ ಹೊಸ ಕಾರ್ಡ್‌ಗಳ ಪಡಿತರ ಸಾಮಗ್ರಿಗಳು ಮುಂದಿನ ತಿಂಗಳಿನಿಂದ ವಿತರಣೆಯಾಗಲಿದೆ. ಪ್ರಸ್ತುತ ಮಾರ್ಚ್‌ ತಿಂಗಳಿನಲ್ಲಿ ಕಳುಹಿಸಲಾದ ಇಂಡೆಂಟ್‌ ಮೇಲೆ ಪಡಿತರ ವಿತರಣೆಯಾಗುತ್ತಿದೆ. ಹೊಸ ಕಾರ್ಡ್‌ದಾರರು ಆತಂಕಕ್ಕೆ ಒಳಗಾಗುವುದು ಬೇಡ. ಮುಂದಿನ ತಿಂಗಳಲ್ಲಿ ಸಾಮಗ್ರಿ ಬಿಡುಗಡೆಯಾಗಲಿದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next