Advertisement
ಯಾವುದೇ ಹೊಸ ಕಾರ್ಡ್‌ಗಳಿಗೆ ಅರ್ಜಿ ಸ್ವೀಕಾರ, ಈಗ ಇರುವ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ, ಹೆಸರನ್ನು ತೆಗೆಯುವುದು ಹೀಗೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಚುನಾವಣೆಗಿಂತ ಮೊದಲು ತಿದ್ದುಪಡಿಗೆ ನೀಡಿದ್ದರೆ, ಅದು ತಿದ್ದುಪಡಿ ಆಗಿದ್ದರೆ ಮಾತ್ರ ತಾತ್ಕಾಲಿಕವಾಗಿ ಕಾರ್ಡ್ ನೀಡಲಾಗುತ್ತದೆ. ವಿವಿಧ ಯೋಜನೆಗಳಿಗೆ ಅರ್ಜಿ ಹಾಕಲು, ಉದ್ಯೋಗ ಖಾತರಿ, ವಿದ್ಯಾರ್ಥಿವೇತನ, ಸಹಾಯಧನ, ಆಸ್ಪತ್ರೆಗಳಲ್ಲಿ ಸರಕಾರದ ಯೋಜನೆ ಪ್ರಯೋಜನಕ್ಕೆ ಪಡಿತರ ಚೀಟಿ ಅಗತ್ಯ. ಜತೆಗೆ ಇದರಲ್ಲಿ ಹೆಸರು ಪರಿಷ್ಕರಣೆಯೂ ಆಗಬೇಕಿರುತ್ತದೆ. ಆದರೆ ಪ್ರಕ್ರಿಯೆಯೇ ನಿಂತು ಹೋಗಿದ್ದರಿಂದ ಜನರ ಮೇಲೆ ಪರಿಣಾಮ ಬೀರಿದೆ.
ಇತ್ತೀಚಿನ ವರ್ಷಗಳಲ್ಲಿ ಪಡಿತರ ಚೀಟಿ ಪ್ರಕ್ರಿಯೆ ಆನ್ ಲೈನ್ ಮೂಲಕವೇ ನಡೆಯುತ್ತಿದೆ. ಇದರಲ್ಲಿ ಆಗಾಗ್ಗೆ ದೋಷ ಕಂಡುಬರುತ್ತಿರುವುದರಿಂದ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಹಾಗಾಗಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಇದರೊಂದಿಗೆ ಯಾರಧ್ದೋ ಆದಾಯ ಪ್ರಮಾಣ ಪತ್ರಕ್ಕೆ ಮತ್ಯಾರಿಗೋ ಬಿಪಿಎಲ್ ಕಾರ್ಡು ನೀಡಿದ ಎಡವಟ್ಟುಗಳೂ ನಡೆದಿದ್ದು, ಇವುಗಳನ್ನು ತಪ್ಪಿಸಲು ಪ್ರತ್ಯೇಕ ಸಾಫ್ಟ್ವೇರ್ ಅಳವಡಿಸಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ ಸಲ್ಲಿಕೆಯಾಗಿರುವ 25,000 ಬಿಪಿಎಲ್ ಅರ್ಜಿಗಳಲ್ಲಿ 19,000 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಹೆಸರು ಪರಿಷ್ಕರಣೆಗೆ ಚುನಾವಣೆ ಪೂರ್ವದಲ್ಲಿ ನೀಡಿದ ಅರ್ಜಿಗಳು ವಿಲೇವಾರಿಯಾಗಿವೆ. ಆದರೆ ಎಪಿಎಲ್‌ನ 3 ಸಾವಿರ ಅರ್ಜಿಗಳು ಬಾಕಿ ಇವೆ. ಕಾರ್ಡ್ ವಿತರಣೆ ನಡೆಯಬೇಕಿದೆ. ಇದಕ್ಕೂ ಹಿನ್ನಡೆಯಾಗಿದೆ.
Related Articles
ಬಿಪಿಎಲ್ ಆದಾಯ ಮಿತಿ 1.2 ಲಕ್ಷ ರೂ.ಗೆ ಏರಿಸಿದ ಕಾರಣ ಎಪಿಎಲ್ ಕಾರ್ಡು ರದ್ದು ಮಾಡಿ ಬಿಪಿಎಲ್ ಕಾರ್ಡು ಮಾಡಿಸುವವರ ಸಂಖ್ಯೆ ಇದೀಗ ಹೆಚ್ಚುತ್ತಿದೆ. ಈ ಮೊದಲು ಪಡಿತರ ಚೀಟಿ ಮಾಡಲು ಆರ್‌ಆರ್ ಸಂಖ್ಯೆ (ವಿದ್ಯುತ್ ಮೀಟರ್ ಸಂಖ್ಯೆ), ಮನೆ ನಂಬರ್, ಮನೆ ತೆರಿಗೆ ರಶೀದಿ ಅಗತ್ಯವಿತ್ತು. ಈಗ ಆಧಾರ್ ಮಾತ್ರ ಸಾಕು. ಒಂದೇ ಷರತ್ತು ಎಂದರೆ ಇನ್ನೊಂದು ಪಡಿತರ ಚೀಟಿಯಲ್ಲಿ ಹೆಸರು ಸೇರಿಸಬಾರದು ಎಂಬುದು. ಆದ್ದರಿಂದ ಅನೇಕರು ವಿಭಜಿತ ಕುಟುಂಬ ಎಂದು ಪ್ರತ್ಯೇಕ ಮಾಡಿಸುತ್ತಿದ್ದಾರೆ.
Advertisement
ಈ ಹಿಂದೆ ಪಡಿತರ ಚೀಟಿ ಜತೆ ಆಧಾರ್ ಸಂಖ್ಯೆ ಲಿಂಕ್ ಗೆ ಹಲವು ಬಾರಿ ತಿಳಿಸಲಾಗಿತ್ತು. ಆದರೆ ಕೆಲವರು ಊರಲ್ಲಿ ಇಲ್ಲದ ಕಾರಣ ಮಾಡಿರಲಿಲ್ಲ. ಪದೇ ಪದೇ ಮಾಹಿತಿ ನೀಡಿದರೂ ಲಿಂಕ್ ಮಾಡದವರ ಹೆಸರನ್ನು ತೆಗೆಯಲಾಗಿದೆ. ಆ ಪೈಕಿ ಈಗ ಕೆಲವರು ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಅವರು ಮತ್ತೆ ಅರ್ಜಿ ಹಾಕಿ ಹೆಸರು ಸೇರ್ಪಡೆ ಮಾಡಬೇಕು. ಈಗ ಪಡಿತರ ಚೀಟಿ ಪ್ರಕ್ರಿಯೆಯೇ ಸ್ಥಗಿತವಾದ್ದರಿಂದ ಅವರಿಗೂ ಸಮಸ್ಯೆಯಾಗಿದೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೇವೆ.– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ, ಉಡುಪಿ
ಇದು ಇಡೀ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆ. ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಸರಕಾರದ ಮಟ್ಟದಲ್ಲಿಯೇ ಕ್ರಮ ಕೈಗೊಳ್ಳಬೇಕಿದೆ.
– ಎಂ.ಆರ್. ಭಟ್, ಜಿಲ್ಲಾ ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ — ಸಂತೋಷ್ ಬೊಳ್ಳೆಟ್ಟು