ಹುಬ್ಬಳ್ಳಿ: ಬಡವರಿಗೆ ವಿವಿಧ ಸರಕಾರಿ ಸೌಲಭ್ಯ ಪಡೆಯಲು ಅವಶ್ಯವಾಗಿರುವ ಪಡಿತರ ಚೀಟಿ ಪಾಲಿಗೆ ಗಗನ ಕುಸುಮವಾಗಿದ್ದು, ಬಡವರು ಸಂಕಷ್ಟ ಪಡುವಂತಾಗಿದೆ ಎಂದು ತಾಪಂ ಸದಸ್ಯರು ಪಕ್ಷಭೇದ ಮರೆತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಮಿನಿ ವಿಧಾನಸೌಧದ ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನೂಲ್ವಿ ಕ್ಷೇತ್ರದ ಸದಸ್ಯ ಫರ್ವೇಜ್ ಬ್ಯಾಹಟ್ಟಿ ಪಡಿತರ ಚೀಟಿ ಸಮಸ್ಯೆ ಬಗ್ಗೆ ಅಧಿಕಾರಿ ವಿರುದ್ಧ ಹರಿಹಾಯ್ದರು. ಈ ಹಿಂದೆ ಇದ್ದ ಅಧಿಕಾರಿ ತಾಲೂಕಿನ ಎಲ್ಲರಿಗೂ ಪಡಿತರ ಚೀಟಿ ಕೊಡಿಸುವುದಾಗಿ ಹೇಳುತ್ತಲೆ ತಮ್ಮ ಜಾಗ ಖಾಲಿ ಮಾಡಿದರು. ಇದೀಗ ನೀವು ಹೊಸತಾಗಿ ಬಂದಿದ್ದು ತಾಲೂಕಿನ ಬಡವರಿಗೆ ಪಡಿತರ ಚೀಟಿ ಸಿಗುವಂತೆ ಕೆಲಸ ಮಾಡಿ, ಕೂಡಲೇ ಪಡಿತರ ಚೀಟಿ ವಿತರಣೆ ಕಾರ್ಯ ಮಾಡಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಖತೀಬ್, ಸದ್ಯ ಸರಕಾರದಿಂದ ಪಡಿತರ ಚೀಟಿ ಮಾಡಲು ಲಾಗಿನ್ ಆಗಿಲ್ಲ. ಲಾಗಿನ್ ಆಗುತ್ತಿದ್ದಂತೆ ಇಲಾಖೆಯಿಂದ ತಾಲೂಕಿನಲ್ಲಿರುವ ಬಡವರಿಗೆ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಉತ್ತರಿಸಿದರು. ತಾಲೂಕಿನಲ್ಲಿ ಕಡುಬಡವರಿಗೆ ಎಪಿಎಲ್, ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಈ ಕುರಿತು ಪರಿಶೀಲನೆ ಆಗಬೇಕು ಎಂದು ಸದಸ್ಯರು ಒತ್ತಾಯಿಸಿದರು.
ನೀರಿನ ಟ್ಯಾಂಕ್ ಶಿಥಿಲ: ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ಕೂಡಾ ಬಗೆಹರಿಸಲಾಗುತ್ತಿದೆ. ಇದಲ್ಲದೆ ಬಂಡಿವಾಡ, ಮಂಟೂರ, ಅಂಚಟಗೇರಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳು ಶಿಥಿಲಗೊಂಡಿದ್ದು ಅವುಗಳ ಪರಿಶೀಲನೆ ನಂತರ ಸರಿಪಡಿಸಲಾಗುವುದು. ಒಂದು ವೇಳೆ ನೂತನ ಟ್ಯಾಂಕ್ ನಿರ್ಮಿಸುವುದಿದ್ದರೆ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು.
ಹೆಸ್ಕಾಂ ಅಧಿಕಾರಿ ತರಾಟೆಗೆ: ಹೆಬಸೂರ ಕ್ಷೇತ್ರದ ಸದಸ್ಯ ಫಕ್ಕೀರಪ್ಪ ಚಾಕಲಬ್ಬಿ ಹಾಗೂ ನೂಲ್ವಿಯ ಫರ್ವೇಜ್ ಬ್ಯಾಹಟ್ಟಿ ಮಾತನಾಡಿ, ಗ್ರಾಮಗಳಲ್ಲಿ ವಿದ್ಯುತ್ ಕಂಬಗಳ ದುಸ್ಥಿತಿ ಕುರಿತು ಹೆಸ್ಕಾಂ ಅಧಿಕಾರಿ ಜಿಂಗಾಡೆ ಅವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿ ಜಿಂಗಾಡೆ ಮಾತನಾಡಿ, ಸಿಬ್ಬಂದಿ ಕೊರತೆ ಇದೆ. ಆದರೂ ಗ್ರಾಮೀಣದಲ್ಲಿ ವಿದ್ಯುತ್ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಫರ್ವೇಜ್ ಬ್ಯಾಹಟ್ಟಿ ಗ್ರಾಮದಲ್ಲಿನ ದುಸ್ಥಿತಿ ವೀಡಿಯೊ ತೋರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಕೃಷಿ ಇಲಾಖೆ, ಲೋಕಪಯೋಗಿ ಇಲಾಖೆ, ಸಣ್ಣ ನೀರಾವರಿ ಉಪವಿಭಾಗ, ತೋಟಗಾರಿಕೆ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ವರದಿ ನೀಡಿದರು.
ತಾಪಂ ಅಧ್ಯಕ್ಷೆ ಚನ್ನಮ್ಮ ಗೋರ್ಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರೋಜಾ ಅಳಗವಾಡಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಫಕ್ಕೀರವ್ವಾ ಹುಲ್ಲಂಬಿ, ಇಒ ಡಾ| ರಾಮಚಂದ್ರ ಹೊಸಮನಿ ಹಾಗೂ ತಾಪಂ ಸದಸ್ಯರು, ಪಿಡಿಒಗಳು ಇದ್ದರು. ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 12:30 ಗಂಟೆಗೆ ಆರಂಭವಾಯಿತು.
ಅನುದಾನ ಕೊರತೆ: ಪ್ರಗತಿ ವರದಿ ನೀಡುವುದು ಅಸಾಧ್ಯ!
ತಾಪಂ ಸಾಮಾನ್ಯ ಸಭೆಯಲ್ಲಿ ಭೂ-ಸೇನಾ ನಿಗಮದಿಂದ ನಡೆದ ಕಾಮಗಾರಿಯ ವಿವರದ ಕೇವಲ 10 ಪ್ರತಿಗಳನ್ನು ನೀಡಲಾಗಿತ್ತು. ತಾಪಂ ಇಒ ಡಾ| ಆರ್.ವೈ. ಹೊಸಮನಿ ಅವರು ಕೇವಲ 10 ಪ್ರತಿ ನೀಡಿದರೆ ಸಾಲದು 25 ಪ್ರತಿ ನೀಡಬೇಕು ಎಂದಾಗ, ಭೂ-ಸೇನಾ ಅಧಿಕಾರಿ ಸಾಧ್ಯವಿಲ್ಲ ಎಂದರು. ಇಲಾಖೆಯಲ್ಲಿ ಸ್ಟೇಶನರಿಗೆ ಎಂದು ನೀಡುವುದು ಕೇವಲ 3 ಸಾವಿರ ರೂ. ಮಾತ್ರ. ಅದರಲ್ಲಿ ಪ್ರತಿ ಬಾರಿ 25 ಪ್ರತಿಗಳನ್ನು ನೀಡುವುದು ಇಲಾಖೆಗೆ ಹೊರೆಯಾಗುತ್ತದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತಾಪಂ ಇಒ, ಭೂ ಸೇನಾ ನಿಗಮದ ಇಲಾಖೆಗೆ ಶೋಕಾಸ್ ನೋಟಿಸ್ ನೀಡುವಂತೆ ಆದೇಶ ನೀಡಿದರು.