Advertisement

ವರ್ಷಾಂತ್ಯಕ್ಕೆ ಅರ್ಹರಿಗೆ ಪಡಿತರ ಚೀಟಿ 

12:59 PM Nov 14, 2017 | Team Udayavani |

ಮೈಸೂರು: ಜಿಲ್ಲೆಯಲ್ಲಿ ಬಿಪಿಎಲ್‌ ಪಡಿತರ ಚೀಟಿ ಕೋರಿ 111304 ಅರ್ಜಿಗಳು ಸಲ್ಲಿಕೆಯಾಗಿದ್ದು ಈವರೆಗೆ 31052 ಕುಟುಂಬಗಳ ಮನೆ ಬಾಗಿಲಿಗೆ ಅಂಚೆ ಮೂಲಕ ಪಡಿತರ ಚೀಟಿ ರವಾನೆಯಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ತಿಳಿಸಿದರು. ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ನೀಡಿದರು.

Advertisement

ಪಡಿತರ ಚೀಟಿ ಕೋರಿ ಆನ್‌ಲೈನ್‌ ಮೂಲಕ ಜು.14ರವರೆಗೆ ಕೇಂದ್ರೀಯ ಸರ್ವರ್‌ಗೆ ಸಲ್ಲಿಕೆಯಾಗಿದ್ದ 111304 ಅರ್ಜಿಗಳ ಪೈಕಿ 89374 ಅರ್ಜಿಗಳನ್ನು ಪರಿಶೀಲನೆಗಾಗಿ ಜಿಲ್ಲೆಗೆ ಕಳುಹಿಸಲಾಗಿತ್ತು. ಗ್ರಾಮ ಲೆಕ್ಕಿಗರ ಮೂಲಕ ಶೇ.100ರಷ್ಟು ಪರಿಶೀಲನೆ ಮಾಡಿದ್ದೇವೆ.

7500 ಅರ್ಜಿ ತಿರಸ್ಕರಿಸಲಾಗಿದ್ದು, 13500 ಅರ್ಜಿಗಳನ್ನು ಮರು ಪರಿಶೀಲನೆಗಾಗಿ ಗ್ರಾಮಲೆಕ್ಕಿಗರಿಗೆ ನೀಡಲಾಗಿದೆ. ಕೂಡಲೇ ಸರಿಪಡಿಸಿ ಕೇಂದ್ರೀಯ ಸರ್ವರ್‌ಗೆ ಅಪ್‌ಲೋಡ್‌ ಕಾರ್ಯ ನವೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.

ಪಡಿತರ ಚೀಟಿ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಈಗಲೂ ಅವಕಾಶವಿದೆ ಎಂದ ಅವರು, ಜು.15ರ ನಂತರ ಸಲ್ಲಿಕೆಯಾಗಿರುವ ಸುಮಾರು 20 ಸಾವಿರ ಅರ್ಜಿಗಳು ಪರಿಶೀಲನೆಗೆ ಬರಬೇಕಿದೆ. ಕೂಡಲೇ ಬಂದಲ್ಲಿ ಡಿಸೆಂಬರ್‌ ಒಳಗೆ ಆ ಎಲ್ಲಾ ಅರ್ಜಿಗಳ ಪರಿಶೀಲನೆಯನ್ನೂ ಪೂರ್ಣಗೊಳಿಸುವುದಾಗಿ ತಿಳಿಸಿದರು.

ಸಿಎಂ ಅನಿಲ ಭಾಗ್ಯ: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಜಿಲ್ಲೆಗೆ ಮೊದಲ ಹಂತದಲ್ಲಿ 6322 ಕುಟುಂಬಗಳ ಗುರಿ ನಿಗದಿಪಡಿಸಲಾಗಿದ್ದು ಡಿಸೆಂಬರ್‌ ಮೊದಲ ವಾರದಲ್ಲಿ ಅನಿಲ ಭಾಗ್ಯ ಒದಗಿಸಲಾಗುವುದು ಎಂದರು.

Advertisement

3 ಲೀಟರ್‌ ಸೀಮೆಎಣ್ಣೆ ಪಡೆಯುತ್ತಿರುವ 20 ಸಾವಿರ ಕುಟುಂಬಗಳನ್ನು ಯೋಜನೆಗೆ ಫ‌ಲಾನುಭವಿಗಳೆಂದು ಗುರುತಿಸಲಾಗಿದೆ. 4040 ರೂ. ಪಾವತಿಸಿ 2 ಒಲೆಗಳ ಸ್ಟೌ, 2 ಸಿಲಿಂಡರ್‌, ರೆಗ್ಯುಲೇಟರ್‌ ಕೊಡಲಾಗುವುದು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕವೇ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಎಂದು ಹೆಸರಿಸಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕಗಳು 15 ದಿನಗಳಲ್ಲಿ ಕೆಟ್ಟು ನಿಲ್ಲುತ್ತೆ ಎನ್ನುವುದಾದರೆ ಆ ಯಂತ್ರ ಕಳಪೆ ಎಂದು ಅರ್ಥ. ಹೀಗಾಗಿ ಶುದ್ಧ ನೀರಿನ ಘಟಕಗಳ ನಿರ್ವಹಣೆಗೆ ಒಬ್ಬರನ್ನು ನೇಮಿಸಿ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ತಾಕೀತು ಮಾಡಿದರು.

ಉತ್ತರಿಸಿದ ಕೆಆರ್‌ಐಡಿಎಲ್‌ ಅಧಿಕಾರಿ, ಶುದ್ಧ ನೀರಿನ ಘಟಕಗಳಲ್ಲಿ ಶೇ.5 ರಿಂದ 10ರಷ್ಟು ದುರಸ್ತಿಗೆ ಬರುತ್ತಿವೆ. ಕೂಡಲೇ ಸರಿಪಡಿಸುತ್ತಿದ್ದೇವೆ ಎಂದರು. ಜಿಪಂ ಸಿಇಒ ಪಿ.ಶಿವಶಂಕರ್‌, ಘಟಕಗಳಿಗೆ ಒಂದು ವರ್ಷದ ವಾರಂಟಿ ನೀಡಿರುವುದರಿಂದ ಡಿ.31ರವರೆಗೆ ನಿಮ್ಮದೇ ಜವಾಬ್ದಾರಿ ಇದೆ, ಸರಿಮಾಡಿಸಿ ಎಂದರು.

ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣದ ಪ್ರಗತಿ ಸರಿಯಿಲ್ಲ. ವರುಣ ಕ್ಷೇತ್ರಕ್ಕೆ ಹೆಚ್ಚುವರಿ 5 ಸಾವಿರ ಮನೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಆದರೆ, ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ತಾಪಂ ಇಒಗಳು ಆದ್ಯತೆ ಮೇಲೆ ಕೆಲಸ ಮಾಡುವಂತೆ ಸೂಚಿಸಲಾಯಿತು.

ಜಿಲ್ಲೆಯ ಅಂಗನವಾಡಿಗಳ 386 ಶೌಚಾಲಯಗಳನ್ನು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸಿಇಒ ಪಿ.ಶಿವಶಂಕರ್‌, ತಾಪಂ ಇಒಗಳಿಗೆ ತಾಕೀತು ಮಾಡಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷಿ, ಜಿಪಂ ಸಿಇಒ ಪ್ರಭುಸ್ವಾಮಿ ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next