Advertisement

ರುದ್ರಭೂಮಿ ಚಿತ್ರಣವೇ ಬದಲು; ಶ್ರಮದಾನ ಎಲ್ಲರಿಗೂ ಪ್ರೇರಣೆಯಾಗಲಿ

06:22 PM Oct 05, 2021 | Nagendra Trasi |

ಮುದ್ದೇಬಿಹಾಳ: ರುದ್ರಭೂಮಿ ಕೈಲಾಸವನವನ್ನು ಸ್ವಚ್ಛವಾಗಿಟ್ಟುಕೊಂಡಷ್ಟು ದೇವರು ಸಂತೃಪ್ತನಾಗುತ್ತಾನೆ. ರುದ್ರಭೂಮಿಯಲ್ಲೇ ನಮಗೆ ದೇವರು ಸಿಗುತ್ತಾನೆ. ಅಲ್ಲಿರುವುದು ಸುಮ್ಮನೆ, ಇಲ್ಲಿರುವುದು ನಮ್ಮನೆ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದ್ದು ರುದ್ರನ ವಾಸಸ್ಥಳವಾಗಿರುವ ರುದ್ರಭೂಮಿಯೇ ನಮ್ಮೆಲ್ಲರ ಶಾಶ್ವತ ವಾಸದ ಮನೆ ಎನ್ನುವ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ಎಂದು ತಂಗಡಗಿ ಹಡಪದ ಅಪ್ಪಣ್ಣ ಮಹಾ ಸಂಸ್ಥಾನ ಮಠದ ಪೀಠಾ ಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿಯವರು ನುಡಿದರು.

Advertisement

ಇಲ್ಲಿನ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ ಕೈಲಾಸವನದಲ್ಲಿ ನಡೆದ 9ನೇ ವಾರದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರಮದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆ ನೀಡಿ ಅವರು ಮಾತನಾಡಿದರು. ಸ್ವಚ್ಛತಾ ಕಾರ್ಯವನ್ನು ನಾವು ಈ ಸ್ಥಾನಕ್ಕೆ ಬರುವವರೆಗೂ ಮುಂದುವರೆಸಬೇಕು. ನಾವೆಲ್ಲ ಒಂದಿಲ್ಲೊಂದು ದಿನ ಇಲ್ಲಿಗೆ ಬರಲೇಬೇಕು. ಈ ಸ್ಥಳವು ಸ್ವತ್ಛವಾಗಿದ್ದಷ್ಟು ದೇವರು ನಮಗೆ ಸಿಗುತ್ತಾನೆ. ಇದು ಕೈಲಾಸಕ್ಕೆ ಸಮ. ಮಠ ಮಂದಿರಗಳು ಪುಣ್ಯ ಕ್ಷೇತ್ರವಲ್ಲ, ನಾಶವಾಗುವ ದೇಹವನ್ನು ತನ್ನೊಡಲಲ್ಲಿ ಸಂರಕ್ಷಿಸಿಕೊಳ್ಳುವ ಈ ಜಾಗವೇ ಪುಣ್ಯ ಕ್ಷೇತ್ರ ಎಂದು ಸಾಂದರ್ಭಿಕವಾಗಿ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ 18 ಎಕರೆಯಷ್ಟು ವಿಶಾಲವಾದ ರುದ್ರಭೂಮಿ ಹೊಂದಿರುವ ಜಾಗವನ್ನು ಮುದ್ದೇಬಿಹಾಳ ಹೊರತು ಬೇರೆಲ್ಲೂ ನೋಡಿಲ್ಲ. ಇದನ್ನು ರಕ್ಷಣೆ ಮಾಡಿ ಕಾಪಾಡುವ ಹೊಣೆ ಹಿರಿಯರು, ಯುವಜನತೆಯ ಮೇಲಿದೆ. ಜನಸಂಖ್ಯೆ ಜಾಸ್ತಿ ಆದಂತೆಲ್ಲ 18 ಎಕರೆ ಜಾಗವೂ ಸಾಲೋದಿಲ್ಲ. ವೀರಶೈವ ಲಿಂಗಾಯತ ಸಮಾಜದವರು ನಡೆಸುತ್ತಿರುವ ಸ್ವತ್ಛತಾ ಕಾರ್ಯ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾದದ್ದು ಎಂದರು. ಸ್ವಚ್ಛತಾ ಕಾರ್ಯಕ್ಕೆ ನೆರವಾಗುತ್ತಿರುವ ದಾಸೋಹಿಗಳದ್ದು ಪುಣ್ಯದ ಕಾರ್ಯ. ಇವರಾರೂ ತಮ್ಮ ಹೆಸರು ಹೇಳಿಕೊಂಡಿಲ್ಲ.

ಹೇಳಿಕೊಂಡು ದಾನ ಮಾಡುವವರ ನಡುವೆ ಗುಪ್ತದಾನ ಮಾಡುವ ಇಂಥ ಪುಣ್ಯವಂತರು ಇರುವುದು ಸಂತಸ ಪಡುವಂಥದ್ದು. ಹೆಸರಿಗೆ ಅಪೇಕ್ಷೆ ಪಡದೆ ಶ್ರಮದಾನಕ್ಕೆ ಮಹತ್ವ ನೀಡುವ ಗುರಿ ಹೊಂದಿರುವುದು ಇತರರಿಗೂ ಮಾದರಿಯಾಗಲಿ ಎಂದರು. ಸಮಾಜದ ಪದಾಧಿಕಾರಿ ಸಂಗಮೇಶ ನಾವದಗಿಯವರು ಕೈಲಾಸವನ ಅಭಿವೃದ್ಧಿಗೆ ದೇಣಿಗೆ ನೀಡಿದ ದಾನಿಗಳ ಹೆಸರುಗಳನ್ನು ಎಲ್ಲರಿಗೂ ಓದಿ ಹೇಳಿದರು. ಸಮಾಜದ ಇನ್ನೋರ್ವ ಪದಾಧಿಕಾರಿ ಸಿದ್ದರಾಜ
ಹೊಳಿಯವರು ಕಾರ್ಯಕ್ರಮ ನಿರ್ವಹಿಸಿದರು.

ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಅಧ್ಯಕ್ಷತೆಯಲ್ಲಿ ನಡೆದ ಸ್ವತ್ಛತಾ ಕಾರ್ಯದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಜಿಒಸಿಸಿ ಬ್ಯಾಂಕ್‌ನ ಜಿಲ್ಲಾಧ್ಯಕ್ಷ ಅರವಿಂದ ಹೂಗಾರ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಭಾರತಿ ಪಾಟೀಲ, ಹಡಪದ ಸಮಾಜದ 50ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ನೂರಾರು ಸದಸ್ಯರು ಪಾಲ್ಗೊಂಡು ಕಸ, ಕಳೆ, ಮುಳ್ಳುಕಂಟಿ ಕೀಳುವ ಮೂಲಕ ಅಂದಾಜು 2-3 ಗಂಟೆವರೆಗೆ ಶ್ರಮದಾನ ಮಾಡಿದರು.

Advertisement

ರುದ್ರಭೂಮಿಯ ಚಿತ್ರಣವೇ ಬದಲು
ಕಳೆದ 8 ರವಿವಾರಗಳದಂದು ಸಮರೋಪಾದಿಯಲ್ಲಿ ನಡೆದ ಶ್ರಮದಾನದ ಫಲವಾಗಿ ರುದ್ರಭೂಮಿಯ ಚಿತ್ರಣವೇ ಬದಲಾಗತೊಡಗಿದೆ. ಬಡಾವಣೆಯೊಂದರ ನಿವೇಶನ ಮಾದರಿಯಲ್ಲಿ ಕಚ್ಚಾ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ಪ್ಲ್ಯಾಂಟೇಶನ್‌ ಮಾದರಿಯಲ್ಲಿ ಗಿಡಗಳನ್ನು ಗುರ್ತಿಸಿ ಸಂರಕ್ಷಿಸಲಾಗುತ್ತಿದೆ. ಅಲ್ಲಲ್ಲಿ ಕಸದ ಡಬ್ಬಿ ಇಟ್ಟು ಸ್ವತ್ಛತೆಯ ಮಹತ್ವ ತಿಳಿಸಿಕೊಡಲಾಗುತ್ತಿದೆ.

ಈಗಾಗಲೇ ಶೇ.60 ಭಾಗದಷ್ಟು ಜಾಗವನ್ನು ಕಸ, ಕಳೆ, ಮುಳ್ಳುಕಂಟಿ ಮುಕ್ತಗೊಳಿಸಿ ಚೊಕ್ಕಟಗೊಳಿಸಲಾಗಿದೆ. ಇನ್ನುಳಿದ ಶೇ.40ರಷ್ಟು ಭಾಗದಲ್ಲಿ ಮುಳ್ಳುಕಂಟಿ ಹೆಚ್ಚಾಗಿರುವುದರಿಂದ ಜೆಸಿಬಿ ಬಳಸಿ ಅವೆಲ್ಲವನ್ನೂ ತೆರವುಗೊಳಿಸಲಾಗುತ್ತಿದೆ. ಜಮೀನಿನ ಕೊನೇಯ ಭಾಗದಿಂದ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರಲು ಯೋಜನೆ ರೂಪಿಸಲಾಗಿದೆ. ಒಂದೂವರೆ ತಿಂಗಳ ಹಿಂದೆ ರುದ್ರಭೂಮಿಗೆ ಬಂದು ಹೋದವರು ಇಂದು ಬಂದು ನೋಡಿದರೆ ಇದು ಹಿಂದೆ ನೋಡಿದ ರುದ್ರಭೂಮಿನಾ ಅಥವಾ ಸುಂದರ ಉದ್ಯಾನವನವಾ ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಆಗಿದೆ.

ಸಮಾಜದ ರುದ್ರಭೂಮಿಯಲ್ಲಿ ಅತಿಕ್ರಮಣ, ಮಲ ಮೂತ್ರ ಮಾಡುವುದು ಸೇರಿದಂತೆ ಯಾವುದೇ ಅನಪೇಕ್ಷಿತ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. 18 ಎಕರೆ ಜಮೀನಿನ ಗಡಿ ಗುರ್ತಿಸಿದ ನಂತರ ಸಂಪೂರ್ಣ ಕಾಂಪೌಂಡ್‌ ನಿರ್ಮಿಸಿ ಸಂರಕ್ಷಿಸಲಾಗುತ್ತದೆ. ರುದ್ರಭೂಮಿಯನ್ನು ಉದ್ಯಾನವನದ ಹಾಗೆ ಕಾಣುವಂತೆ ಮಾಡುವ ಗುರಿ ಸಾಧನೆಯತ್ತ ಗಮನ ಹರಿಸಲಾಗಿದೆ.
ಪ್ರಭುರಾಜ ಕಲಬುರ್ಗಿ,
ಅಧ್ಯಕ್ಷ, ವೀರಶೈವ ಲಿಂಗಾಯತ
ಸಮಾಜ, ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next