Advertisement

ಜನಜಾಗೃತಿ ರಥಯಾತ್ರೆ ಅಭಿಯಾನಕ್ಕೆ ಚಾಲನೆ

03:59 PM Mar 11, 2022 | Team Udayavani |

ಚಿತ್ರದುರ್ಗ: ಬಾಲ್ಯಾವಸ್ಥೆ, ಕಿಶೋರಾವಸ್ಥೆಯ ಕಾರ್ಮಿಕ ನಿಷೇಧ ಕುರಿತು ಜನಜಾಗೃತಿಗಾಗಿ ರಥ ಯಾತ್ರೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಮಕ್ಕಳು ರಾಷ್ಟ್ರದ ಸಂಪತ್ತು. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯು ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣ ಅವಕಾಶಗಳನ್ನು ತಡೆಗಟ್ಟುತ್ತದೆ. ಕಲಿಯುವ ವಯಸ್ಸಿನಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿದು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಕಳವಳಕಾರಿಯಾಗಿದೆ. ಶಿಕ್ಷಣ ವಂಚಿತ ಹಾಗೂ ದುಡಿಮೆಯಲ್ಲಿ ತೊಡಗಿರುವ ಈ ಮಕ್ಕಳನ್ನು ರಾಷ್ಟ್ರದ ಮುಖ್ಯವಾಹಿನಿಗೆ ಕರೆತರಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಘಟಿತರಾಗಿ ಪ್ರಯತ್ನಿಸಬೇಕಿದೆ ಎಂದರು.

14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಸಂಸ್ಥೆಗಳಲ್ಲಿ 15 ರಿಂದ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧ. ಮಕ್ಕಳಿಂದ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲಕಾರ್ಮಿಕರನ್ನು ನೇಮಿಸಿಕೊಂಡರೆ 20 ಸಾವಿರದಿಂದ 50 ಸಾವಿರದವರೆಗೆ ದಂಡ ಹಾಗೂ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.

6 ರಿಂದ 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಗಳಲ್ಲಿ ಹಾಗೂ 18 ವರ್ಷ ವಯಸ್ಸಿನವರೆಗಿನ ಕಿಶೋರರು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುವುದು ಕಂಡಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಗೆ ಸಂಪರ್ಕಿಸಬೇಕು ಎಂದು ಹೇಳಿದರು.

ಜನಜಾಗೃತಿ ಅಭಿಯಾನ ರಥವು 10 ದಿನ ಜಿಲ್ಲೆಯಲ್ಲಿ ಸಂಚರಿಸಿ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಜಾಗೃತಿ ಮೂಡಿಸಲಿದೆ ಎಂದರು.

Advertisement

ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಇಬ್ರಾಹೀಂ ಸಾಬ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ಮಕ್ಕಳ ರಕ್ಷಣಾಧಿಕಾರಿ ಲೋಕೇಶಪ್ಪ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಪಿ. ಸತೀಶ್‌ಕುಮಾರ್‌ ಸೇರಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next