Advertisement

ಪುಣ್ಯಫ‌ಲಗಳ ರಥ ಸಪ್ತಮಿ

10:12 PM Jan 31, 2020 | Lakshmi GovindaRaj |

ಸೂರ್ಯಚಂದ್ರರು ಸಮಯದ ನಿಯಾಮಕರು. ಅವರ ಗತಿಯಿಂದಲೇ ಹಗಲಿರುಳು, ಪಕ್ಷ-ಮಾಸ-ಸಂವತ್ಸರಗಳು ಉರುಳುತ್ತವೆ. ಮಕರ ಸಂಕ್ರಾಂತಿ ದಿನದಿಂದ, ವರ್ಷದ ಉತ್ತರಾಯಣ ಶುರುವಾಗುತ್ತದೆ. ಮಾಘಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯನು ವಿಶೇಷವಾಗಿ ಬೆಳಗುತ್ತಾನೆ. ಅಂದು ರಥಸಮೇತನಾದ ಸೂರ್ಯನನ್ನು ಪೂಜಿಸಲಾಗುತ್ತದೆ.

Advertisement

ಅಂದು ಸೂರ್ಯನ ಜತೆಗೆ ಸೂರ್ಯಮಂಡಲವರ್ತಿಯಾಗಿ ವಿರಾಜಿಸುವ ನಾರಾಯಣನಿಗೂ, ಪರಶಿವನಿಗೂ ವೈಭವೋಪೇತವಾಗಿ ಪೂಜಾರ್ಚನೆಗಳು ನಡೆಯುತ್ತವೆ. ವೈಷ್ಣವ, ಶೈವ ಎಂಬ ಭೇದವಿಲ್ಲದೆ ಎಲ್ಲರೂ ಮಾಡುವ ಹಬ್ಬ ಇದಾಗಿದೆ. ಸೂರ್ಯನಾರಾಯಣ ಎಂದು ಕರೆಯಲ್ಪಡುವ ಸೂರ್ಯನ ಸಪ್ತಾಶ್ವಯುತವಾದ ರಥವನ್ನು ಧ್ಯಾನಿಸಿ, ಎಲ್ಲ ದೇವಸ್ಥಾನಗಳಲ್ಲೂ ರಥೋತ್ಸವಗಳು ಆರಂಭಗೊಳ್ಳುತ್ತವೆ. ಆದ್ದರಿಂದಲೂ ಈ ದಿನಕ್ಕೆ “ರಥಸಪ್ತಮಿ’ ಎಂಬ ಹೆಸರು ಬಂದಿದೆ.

ಸೂರ್ಯನಿಗೂ, “7’ರ ಸಂಖ್ಯೆಗೂ ಬಹಳ ಆಪ್ತ ನಂಟು. ಸೂರ್ಯನ ರಥಕ್ಕೆ 7 ಕುದುರೆಗಳು, ಪೂಜೆಗೆ ಪ್ರಶಸ್ತ ದಿನ ಸಪ್ತಮಿ, ಸೂರ್ಯ 7 ಬಗೆಯ ನೈವೇದ್ಯ ಪ್ರಿಯ, 7 ಪ್ರದಕ್ಷಿಣೆ ಶ್ರೇಷ್ಠ, ಸೂರ್ಯ ಬಯಸುವುದು 7 ಪತ್ರೆಗಳ ಅರ್ಚನೆಯನ್ನು. ಈ ಸಪ್ತಮಿ ತಿಥಿಯಂದು ಅರುಣೋದಯದ ಸಮಯದಲ್ಲಿ ಪುಣ್ಯತೀರ್ಥದಲ್ಲಿ ಸ್ನಾನಮಾಡಿ, ಮಂತ್ರಜಪ ಮತ್ತು ದೇವತಾರಾಧನೆ ಮಾಡಲಾಗುತ್ತದೆ.

ಸ್ನಾನಮಾಡುವಾಗ 7 ಎಕ್ಕದ ಎಲೆಯನ್ನು ತಲೆ, ತೋಳುಗಳ ಮೇಲೆ ಇರಿಸಿಕೊಂಡು ಅಥವಾ ತಲೆಯ ಮೇಲೆ ಚಿನ್ನ, ಬೆಳ್ಳಿ ಅಥವಾ ಸೋರೆಬುರುಡೆಯ ಪಾತ್ರೆಯಲ್ಲಿ ಎಳ್ಳೆಣ್ಣೆ ದೀಪ ಒಂದನ್ನು ಇರಿಸಿಕೊಂಡು ಸ್ನಾನ ಮಾಡಬೇಕು. ನಂತರ ಆ ದೀಪವನ್ನು ಅದೇ ನದಿ ಅಥವಾ ಸಮುದ್ರದಲ್ಲಿ ತೇಲಿಬಿಡಬೇಕು. ಸ್ನಾನದ ಸಮಯದಲ್ಲಿ ಸಮಾಧಾನ ಚಿತ್ತದಿಂದ ಈ ಸ್ತೋತ್ರವನ್ನು ಮನನ ಮಾಡುತ್ತಾ ಸೂರ್ಯನಾರಾಯಣನನ್ನು ಧ್ಯಾನಿಸಬೇಕು…

ಸಪ್ತಾಶ್ವ ಸಪ್ತಲೋಕಾಶ್ಚ
ಸಪ್ತದ್ವೀಪಾ ವಸುಂಧರಾ
ಸಪ್ತಾರ್ಕಪರ್ಣಾನ್ಯಾದಾಯ
ಸಪ್ತಮ್ಯಾಂ ಸ್ನಾನಮಾಚರೇತ್‌

Advertisement

“ಆತ್ಮಸಾಧನೆಗೆ ಅತ್ಯಂತ ಅನುಕೂಲವಾದ ದಿನ, ರಥಸಪ್ತಮಿ. ಬಲವಂತದ ಮಾಘಸ್ನಾನದಿಂದ ಫ‌ಲವಿಲ್ಲ, ಕರ್ಮವನ್ನು ಮರ್ಮವರಿತು ಆಚರಿಸಿ’ ಎಂಬುದು ಶ್ರೀರಂಗ ಮಹಾಗುರುಗಳ ಮಾತು. ಮಾಘಮಾಸದಲ್ಲಿ ನಿತ್ಯವೂ ಅರುಣೋದಯ ಸಮಯದಲ್ಲಿ ಸ್ನಾನ ಮಾಡಬೇಕು. ಆಗದಿದ್ದಲ್ಲಿ 3 ದಿನ ಸಂಕ್ರಾಂತಿ, ರಥಸಪ್ತಮಿ ಹಾಗು ಮಾಘೀ ದಿನಗಳಲ್ಲಾದರೂ ಮಾಡಲೇಬೇಕು. ಅದರಲ್ಲೂ ರಥಸಪ್ತಮಿಯು ಸೂರ್ಯಗ್ರಹಣಕ್ಕೆ ಸಮ ಹಾಗೂ ಪ್ರಯಾಗತೀರ್ಥದಲ್ಲಿ ಸ್ನಾನಮಾಡಿದರಂತೂ ಇನ್ನೂ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತದೆ.

* ಸುಮೇಧಾ ಎಂ.ಎ.

Advertisement

Udayavani is now on Telegram. Click here to join our channel and stay updated with the latest news.

Next