ಕುಂದಾಪುರ: ಹಳ್ಳಿ ಹಳ್ಳಿಗಳಿಗೆ ತೆರಳಿ 50 ಲಕ್ಷ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಸರಕಾರಿ ಶಾಲೆಗಳ ಉಳಿವಿಗೆ ಹೋರಾಟದ ಮೂಲಕ ಸರಕಾರದ ಬಳಿ ತೆರಳಲಿದ್ದೇವೆ ಎಂದು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.
ಅವರು ಬುಧವಾರ ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿಯ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರಥಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು.
ಬಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಳೆದ 3 ವರ್ಷಗಳಿಂದ ಹೋರಾಡುತ್ತಿದ್ದು ದಡ್ಡಲಕಾಡು ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ 2.2 ಕೋ.ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿ ಸರಕಾರಿ ಶಾಲೆ ಉಳಿಸುವ ಪ್ರಯತ್ನ ನಡೆಯುತ್ತಿದೆ. ಸರಕಾರಿ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರಿದ್ದಾರೆ ಎಂದು ಅವರನ್ನು ವರ್ಗ ಮಾಡುವ ಬದಲು ಇನ್ನಷ್ಟು ಶಿಕ್ಷಕರ ನೇಮಕವಾಗಬೇಕು. 1ರಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ದೊರೆಯುವಂತಾಗಬೇಕು. ಶಿಕ್ಷಕರು, ಸರಕಾರಿ ನೌಕರರು ಕಡ್ಡಾಯವಾಗಿ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತಾಗಬೇಕು. ಶಾಲಾ ಕಟ್ಟಡದ ದುರಸ್ತಿ ಮಾಡಿಸಿ ಒಂದನೇ ತರಗತಿಯಿಂದಲೇ ಮಾತೃ ಭಾಷೆಯ ಜತೆಗೆ ಇಂಗ್ಲಿಷ್ ಶಿಕ್ಷಣ ಕೊಡಿಸಬೇಕು ಎಂದು ಆಗ್ರಹಿಸಿದರು.
ಸೆ.8ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ವಿಧಾನಸೌಧದವರೆಗೆ ಪ್ರಕಾಶ್ ಅಂಚನ್ ಮತ್ತು ಅನಿಲ್ ಶೆಟ್ಟಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಪುರಸಭೆ ಸದಸ್ಯರಾದ ಸಂತೋಷ್ ಶೆಟ್ಟಿ, ಸಂದೀಪ್ ಖಾರ್ವಿ, ಮಹೇಶ್ ಕುಮಾರ್ ಉಪಸ್ಥಿತರಿದ್ದರು.