Advertisement

ದರ ಏರಿಕೆ: ನಾಳೆ ಭಾರತ ಬಂದ್‌

06:00 AM Sep 09, 2018 | |

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕರೆ ನೀಡಿರುವ ಸೋಮವಾರ “ಭಾರತ ಬಂದ್‌’ಗೆ ಹಲವು ಸಂಘಟನೆಗಳು ಕೈಜೋಡಿಸಿದ್ದು, ಇದರ ಬಿಸಿ ರಾಜ್ಯಕ್ಕೂ ತಕ್ಕಮಟ್ಟಿಗೆ ತಟ್ಟುವ ಸಾಧ್ಯತೆ ಇದೆ.
ಬಂದ್‌ಗೆ ಪ್ರಮುಖವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸ್ಟಾಫ್ ಆಂಡ್‌ ವರ್ಕರ್ ಫೆಡರೇಷನ್‌ ಬೆಂಬಲ ಸೂಚಿಸಿದೆ. ನೌಕರರು ಮತ್ತು ಚಾಲಕರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ. 

Advertisement

ಆದರೆ ಆಟೋ ಮಾಲೀಕರು ಮತ್ತು ಚಾಲಕರ ಸಂಘ, ಕೈಗಾರಿಕಾ ಸಂಘ, ಪೆಟ್ರೋಲ್‌ ಡೀಲರ್ ಅಸೋಸಿಯೇಷನ್‌, ಪ್ರವಾಸಿ ವಾಹನಗಳ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಉಳಿದೆಲ್ಲ ಸಂಘಟನೆಗಳು ಕೇವಲ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಅವುಗಳ ಕಾರ್ಯಾಚರಣೆ ಎಂದಿನಂತೆ ಇರಲಿವೆ ಎಂದು ಸ್ಪಷ್ಟಪಡಿಸಿವೆ.

ಬಸ್‌ ಸೇವೆ ವ್ಯತ್ಯಯ?:
ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ದರ ಏರಿಕೆ ಕ್ರಮವನ್ನು ಖಂಡಿಸಿ ನಡೆಸುತ್ತಿರುವ ಬಂದ್‌ ನ್ಯಾಯಯುತವಾಗಿದ್ದು, ಇದಕ್ಕೆ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಹಾಗಾಗಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬುÉ ಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳ ನೌಕರರು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್‌ ವರ್ಕರ್ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್‌ ತಿಳಿಸಿದ್ದಾರೆ.

ಬಂದ್‌ಗೆ ನೌಕರರ ಸಂಘಟನೆ ಕರೆನೀಡಿದ್ದರೂ, ಬಸ್‌ಗಳ ಕಾರ್ಯಾಚರಣೆ ಎಂದಿನಂತೆ ಇರಲಿದೆ. ಆಯಾ ವಿಭಾಗೀಯ ನಿಯಂತ್ರಕರಿಗೆ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ ತಿಳಿಸಿದರು. ಖಾಸಗಿ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.

ಆಟೋ ಸಂಘ ನೈತಿಕ ಬೆಂಬಲ:
ಬಂದ್‌ಗೆ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಬೆಂಬಲ ಇದ್ದು, ಅಂದು ಬೆಳಗ್ಗೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಂತರ ಎಂದಿನಂತೆ ಸೇವೆ ಮುಂದುವರಿಯಲಿದೆ ಎಂದು ಸಂಘದ ಕಾರ್ಯದರ್ಶಿ ರುದ್ರಮೂರ್ತಿ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ರುಗಳ ಸಂಘದ ಒಕ್ಕೂಟ ತಟಸ್ಥವಾಗಿರಲು ನಿರ್ಧರಿಸಿದೆ.

Advertisement

ದರ ಏರಿಕೆಯಿಂದ ಸರಕು ಸಾಗಣೆ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಳೆದ ತಿಂಗಳು ತೈಲ ದರ ಏರಿಕೆಯೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 8 ದಿನ ಮುಷ್ಕರ ನಡೆಸಿ, ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ದೆವು. ಇದಕ್ಕೆ ಸ್ಪಂದನೆ ದೊರಕಿಲ್ಲ. ಪ್ರಮುಖವಾಗಿ ತೈಲವನ್ನೂ ಜಿಎಸ್‌ಟಿ ಅಡಿ ತರಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆ ಎಂದು ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಒತ್ತಾಯಿಸಿದರು.

ಭಾರತ ಬಂದ್‌ಗೆ ಸಂಪೂರ್ಣ ಬೆಂಬಲವಿದೆ. ಓಲಾ, ಉಬರ್‌ ಕಂಪನಿಗಳಿಗೆ ನೋಟಿಸ್‌ ನೀಡಲಾಗಿದೆ. ಐಟಿ-ಬಿಟಿ ಕಂಪೆನಿಗಳಿಗೂ ಈ ಬಗ್ಗೆ ಗಮನಕ್ಕೆ ತರಲಾಗಿದೆ. ಯಾವುದೇ ವಾಹನಗಳು ಅಂದು ಕಾರ್ಯಾಚರಣೆ ಮಾಡುವುದಿಲ್ಲ.
– ಗಂಡಸಿ ಸದಾನಂದಸ್ವಾಮಿ, ಅಧ್ಯಕ್ಷ, ರಾಷ್ಟ್ರೀಯ ಚಾಲಕರ ಒಕ್ಕೂಟ

ಬಂದ್‌ಗೆ ಸಂಪೂರ್ಣ ಬೆಂಬಲ ಇದ್ದು, ಅಂದು ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಕೇಂದ್ರ ಸರ್ಕಾರ ಕೋಡಲೇ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಮತ್ತು ಕೂಡಲೇ ತೈಲ ದರ ಕಡಿಮೆ ಮಾಡಬೇಕು.
– ತನ್ವೀರ್‌ ಪಾಷ, ಅಧ್ಯಕ್ಷ, ಒಲಾ-ಉಬರ್‌ ಚಾಲಕರು ಮತ್ತು ಮಾಲೀಕರ ಸಂಘ.

ಜನಸಾಮಾನ್ಯರಿಗೆ ತೊಂದರೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಚಿತ್ರ ಮಂದಿರಗಳ ಬಂದ್‌ ಮಾಡುವ ಬಗ್ಗೆ ದಿಢೀರ್‌ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಬಂದ್‌ಗೆ ನೈತಿಕ ಬೆಂಬಲ ನೀಡಲಾಗಿದೆ.
– ಚಿನ್ನೇಗೌಡ, ಅಧ್ಯಕ್ಷ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ

ಸೇವೆ ಬಂದ್‌ ಮಾಡಲು ಆಗುವುದಿಲ್ಲ. ಯಾಕೆಂದರೆ, ಮುಂಚಿತವಾಗಿ ಗುತ್ತಿಗೆ ನೀಡಲಾಗಿರುತ್ತದೆ. ಹಬ್ಬದ ಸೀಜನ್‌ ಕೂಡ ಇರುವುದರಿಂದ ಕಷ್ಟ. ಆದರೆ, ಬಂದ್‌ಗೆ ನಮ್ಮ ಬೆಂಬಲ ಇರಲಿದೆ.
– ರಮೇಶ್‌, ಖಾಸಗಿ ಬಸ್‌ ಮಾಲಿಕರ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next