ಮುಳಗುಂದ: ಮಧ್ಯ ಹಾಗೂ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ಗೋವಿನಜೋಳದ ದರವು ಹಲವು ಕಾರಣಗಳಿಂದ ತೀವ್ರ ಕುಸಿತ ಕಂಡಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ 2000 ರೂ.ಗಳಷ್ಟಿದ್ದ ದರ ಈಗ ಹಂತ ಹಂತವಾಗಿ ಕುಸಿದಿದ್ದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.
ಉತ್ತಮ ದರ ಹಾಗೂ ಬೇಸಾಯಕ್ಕೂ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಗೋವಿನಜೋಳ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆಯುತ್ತಿರುವುದರಿಂದ ಇದೊಂದು ವಾಣಿಜ್ಯಬೆಳೆಯಾಗಿದ್ದು, ಯುಗಾದಿ ಸಂದರ್ಭದಲ್ಲಿ ಒಕ್ಕಣೆ ಪ್ರಾರಂಭ ಮಾಡುವ ಈ ಹಂತದಲ್ಲಿ ದರ ಕುಸಿತವಾಗಿದೆ. ಹೀಗಾಗಿ ರೈತರು ಮಾಡಿದ ಖರ್ಚು ಬಾರದಂತಾಗಿದೆ.
ಹಾವೇರಿ, ಗದಗ ಹಾಗೂ ಇತರೆ ಜಿಲ್ಲೆಗಳಲ್ಲಿ ಯುಗಾದಿ ಪಾಡ್ಯದಂದು ರಾಶಿ ಪೂಜೆ ಮಾಡುವ ಪದ್ಧತಿಯಿದ್ದು, ಈ ಕಾರಣಕ್ಕಾಗಿಯೇ ಒಕ್ಕಣೆ ಮಾಡುವ ತಯಾರಿಯಲ್ಲಿದ್ದ ರೈತರಿಗೆ ಇತ್ತ ಮಾರಲಿಕ್ಕೂ ಆಗದೆ ಸಂಗ್ರಹಣೆ ಮಾಡಲಿಕ್ಕೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸುಗ್ಗಿ ಸಂಭ್ರಮಕ್ಕೆ ಮಂಕು ಬಂದಂತಾಗಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 1850 ರೂ.ಗಳ ಬೆಲೆ ಘೋಷಣೆ ಮಾಡಿದ್ದರು. ಇದುವರೆಗೂ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡದಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ. ರೈತರ ಮಾಲು ಕಟಾವು ಮಾಡುವ ಹಂತದಲ್ಲಿ ಬೆಂಬಲ ಬೆಲೆ ಕೇಂದ್ರ ಸ್ಥಾಪನೆ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಂತಾಗಿದೆ. 2000 ರೂ.ಗಳಿದ್ದ ಬೆಲೆ ಈಗ ಕೊರೊನಾ, ರೋಗಬಾಧೆ ಸೇರಿದಂತೆ ಹಲವು ಕಾರಣಗಳಿಗಾಗಿ 1200 ರೂ.ಗಳಿಗೆ ಇಳಿದಿದ್ದು, ಮಾರುಕಟ್ಟೆಯಲ್ಲಿ ಖರೀದಿದಾರರು ಟೆಂಡರ್ ಹಾಕಲು ಹಿಂದೆ ಮುಂದೆ ನೋಡುವಂತಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಕಾಟಾಚರಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದರೆ ಸಾಲದು. ರೈತರು ಬೆಳೆ ಖರೀದಿಸಲು ಶೀಘ್ರವೆ ಕಾರ್ಯಪ್ರವೃತ್ತರಾಗಬೇಕು ಎನ್ನುವುದು ರೈತರ ಒತ್ತಾಯವಾಗಿದೆ.