Advertisement

ಕೊಡಿಯಾಲಬೈಲ್‌ : ನವಸ್ಪರ್ಶ ಪಡೆದ ರಾಷ್ಟ್ರಕವಿಯ ವೃತ್ತ

03:40 PM Mar 16, 2022 | Team Udayavani |

ಕೊಡಿಯಾಲಬೈಲ್‌ : ಪ್ರಥಮ ಬಾರಿಗೆ ಕನ್ನಡಕ್ಕೆ ರಾಷ್ಟ್ರಕವಿ ಗೌರವವನ್ನು ತಂದುಕೊಟ್ಟ, ಗಡಿನಾಡು ಮಂಜೇಶ್ವರದಲ್ಲಿ ಹುಟ್ಟಿದರೂ ಶಿಕ್ಷಣವನ್ನು ಮಂಗಳೂರಿನಲ್ಲಿ ಮಾಡಿ ಇಡೀ ರಾಷ್ಟ್ರವೇ ಬೆರಗಾಗುವಂತಹ ಕೃತಿಗಳನ್ನು ಬರೆದವರು ಮಂಜೇಶ್ವರ ಗೋವಿಂದ ಪೈ. ಅವರ ಹೆಸರಿನಲ್ಲಿರುವ ನಗರದ ಕೊಡಿಯಾಲಬೈಲ್‌ನ ವೃತ್ತ ಹೊಸ ರೂಪದೊಂದಿಗೆ ಮೈದಳೆದುಕೊಂಡಿದೆ.

Advertisement

ರಾಷ್ಟ್ರಕವಿ ಗೋವಿಂದ ಪೈಗಳು ಕೈಯಲ್ಲಿ “ನವಭಾರತ ಪತ್ರಿಕೆ’ಯನ್ನು ಹಿಡಿದು ಓದುತ್ತಾ ಕುಳಿತಿರುವ ಭಂಗಿಯಲ್ಲಿರುವ ಕಂಚಿನ ಪುತ್ಥಳಿಯನ್ನು ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಅದರ ನಿರ್ಮಾಣವನ್ನು ಕಾರ್ಕಳದ ಶಿಲ್ಪಿ ಕೃಷ್ಣ ಆಚಾರಿಯವರ ತಂಡದವರು ಮಾಡಿದ್ದಾರೆ.

ಆಕರ್ಷಕ ವೃತ್ತ ನಿರ್ಮಾಣಕ್ಕೆ ಯೋಜನೆ
ವೃತ್ತದ ಒಳಗಿರುವ ಪುರಾತನ ಕಾಲದ ಬಾವಿಯನ್ನು ಯಥಾವತ್‌ ಉಳಿಸಲಾಗಿದ್ದು, ಅದರ ನೀರನ್ನೇ ಕಾರಂಜಿಯಂತೆ ವೃತ್ತದಲ್ಲಿ ಚಿಮ್ಮಿಸಿ ಇನ್ನಷ್ಟು ಆಕರ್ಷಣೀಯವಾಗಿಸುವ ಯೋಜನೆ ಮಾಡಲಾಗಿದೆ. ವೃತ್ತದೊಳಗೆ ಹೂಗಳನ್ನು ಮತ್ತು ಹಚ್ಚಹಸುರಿನ ಹುಲ್ಲು ಬೆಳೆಸಲಾಗುತ್ತಿದ್ದು, ಅದಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಸೌಂದರ್ಯ ವಿನ್ಯಾಸಕಾರರಾದ ಸುಜಯ್‌ ಲೋಬೋ ಅವರು ಗುರುತಿಸಿ ಅಭಿವೃದ್ಧಿಪಡಿಸಿದ್ದಾರೆ. ವೃತ್ತದ ಸುತ್ತಲೂ ಕೆತ್ತನೆಯ ಕಬ್ಬಿಣದ ಗ್ರಿಲ್‌ಗ‌ಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಸಾಂಪ್ರದಾಯಿಕ ಕುಸುರಿ ಕೆಲಸ ಮಾಡಲಾಗಿದೆ. ಕಾರಂಜಿ ಮತ್ತಿತರ ವಿದ್ಯುತ್‌ ಅಲಂಕಾರಿಕ ವಸ್ತುಗಳ ಅಳವಡಿಕೆಯನ್ನು ಸೀತಾರಾಂ ಅವರು ವಹಿಸಿಕೊಂಡಿದ್ದಾರೆ. ಗೋವಿಂದ ಪೈಯವರ ಕಂಚಿನ ಮೂರ್ತಿಯ ನಿರ್ಮಾಣ ರಥಬೀದಿಯ ಗೋವರ್ಧನ್‌ ಮೆಟಲ್ಸ್‌ನವರು ಮಾಡಿದ್ದಾರೆ.

ಇದನ್ನೂ ಓದಿ : ನೇತ್ರಾವತಿ: “ಐಲ್ಯಾಂಡ್‌’ ಅಭಿವೃದ್ಧಿಗೆ ಕಾನೂನಾತ್ಮಕ ತೊಡಕು!

ಇದರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ಗಿರಿಧರ್‌ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿ, ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ಈ ವೃತ್ತದ ಪುನರ್‌ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಟ್ರಸ್ಟ್‌ನ ಅಧ್ಯಕ್ಷ ಶಾಸಕ ವೇದವ್ಯಾಸ ಕಾಮತ್‌ ಅವರ ಅಪೇಕ್ಷೆಯಂತೆ ಈ ವೃತ್ತ ನಿರ್ಮಾಣವಾಗಿದೆ. ಉದ್ಯಮಿ ಮಂಗಲ್ಪಾಡಿ ನರೇಶ್‌ ಶೆಣೈ ಇದಕ್ಕೆ ಸಲಹೆ ಸೂಚನೆ ನೀಡಿದ್ದಾರೆ.

Advertisement

ಫುಜ್ಲಾನಾ ಗ್ರೂಪಿನಿಂದ ಈ ವೃತ್ತದ ನವೀಕರಣದ ಯೋಜನೆ ಮಾಡಲಾಗಿದ್ದು, ವನಿತಾ ಅಚ್ಯುತ್‌ ಪೈ ಅವರ ಸ್ಮರಣಾರ್ಥ ಅವರ ಮಕ್ಕಳ ಕೊಡುಗೆಯಾಗಿ ಈ ವೃತ್ತ ರಚನೆಯಾಗಿದೆ.
ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ಈ ವೃತ್ತದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆ ಅದಕ್ಕೆ ಅಧಿಕೃತವಾಗಿ ಲಿಖೀತ ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next