“ಸಾಧನ ಸಂಗಮ’ ನೃತ್ಯಸಂಸ್ಥೆಯು ಪ್ರತಿವರ್ಷ ಅರ್ಥಪೂರ್ಣವಾಗಿ ದಸರಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ದಸರಾ ಪ್ರಯುಕ್ತ ಮೂರು ದಿನಗಳ “ರಸೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶುಭಾರಂಭದಲ್ಲಿ “ಪ್ರಣವಾಕಾರ ಸಿದ್ಧಿವಿನಾಯಕ’ನಿಗೆ, ಕಿರಿಯ ವಿದ್ಯಾರ್ಥಿಗಳು ಸರಳ-ಸ್ಪುಟ ಆಂಗಿಕಗಳಿಂದ ಮುದವಾದ ನೃತ್ಯದ ಮೂಲಕ ವಂದಿಸಿದರು.
ನಾಟ್ಯಗುರು ಜ್ಯೋತಿಯವರ ಪರಿಕಲ್ಪನೆ- ನೃತ್ಯ ಸಂಯೋಜನೆಯ “ನವವಿಧ ಭಕ್ತಿ’- ನೃತ್ಯರೂಪಕದ ಮುನ್ನುಡಿ ಭಾಗವನ್ನು ಹಿರಿಯ ವಿದ್ಯಾರ್ಥಿಗಳು ಮನ ಸೆಳೆವ ಸ್ವರಮಾಧುರ್ಯದ ನೃತ್ಯಗಳಿಂದ ನವವಿಧ ಭಕ್ತಿಗೆ ಹೊನ್ನ ಕಳಶವಿಟ್ಟರು. ಖ್ಯಾತ ಕಲಾವಿದೆಯರಾದ ಶಮಾಕೃಷ್ಣ ಮತ್ತು ಅನುರಾಧಾ ವಿಕ್ರಾಂತ್, ಕೂಚಿಪುಡಿ ಮತ್ತು ಭರತನಾಟ್ಯದ ಜುಗಲ್‌ಬಂದಿ “ನೃತ್ಯಮಿಲನ’ವನ್ನು ನಾಟ್ಯಶಾಸ್ತ್ರದ ಚಲನೆಗಳನ್ನಾಧರಿಸಿ ಸಾಮರಸ್ಯದಿಂದ ನಡೆಸಿಕೊಟ್ಟರು.
“ಸ್ವರಾಂಜಲಿ’ಯಲ್ಲಿ ಗಣಪತಿಯ ಮಹಿಮೆಯನ್ನು ಮನೋಹರವಾಗಿ ಸಾದರಪಡಿಸಿ, “ನಾದಾ ತನುಮನಿಷಂಶಂಕರಂ’- ಕೃತಿಯಲ್ಲಿ ರಾವಣ, ಕಠಿಣತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆಯುವ ಪ್ರಸಂಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ಕನಕದಾಸರ, “ಬಾರೋ ಕೃಷ್ಣಯ್ಯ’ ದೇವರನಾಮದಲ್ಲಿ ಪೂರಕ ಪಾತ್ರಾಭಿನಯಗಳಿಂದ ರಮ್ಯ ನೃತ್ಯ ಲಾಸ್ಯಗಳಿಂದ ರಸಾನುಭವ ನೀಡಿದರು.
ಪ್ರೌಢ ಅಭಿನಯಕ್ಕೆ ಹೆಸರಾದ ಖ್ಯಾತ ಭರತನಾಟ್ಯ ಕಲಾವಿದೆ ಐಶ್ವರ್ಯ ನಿತ್ಯಾನಂದ, ಏಕವ್ಯಕ್ತಿ ಪ್ರದರ್ಶನದಲ್ಲಿ ಮನೋಜ್ಞವಾಗಿ ನರ್ತಿಸಿ ಹೃದಯ ಸ್ಪರ್ಶಿಸಿದರು. ರುದ್ರನರ್ತನದ “ಶಿವಕೃತಿ’ಯಲ್ಲಿ ದೈವೀಕತೆ ತಾಂಡವವಾಡಿತು. ಆಕಾಶಚಾರಿ, ಮಂಡಿ ಅಡವುಗಳಿಂದ ಕೂಡಿದ ಲೀಲಾಜಾಲ ಸಮರ್ಥ ನರ್ತನ ವಿಸ್ಮಯಗೊಳಿಸಿತು.
“ಸದ್ದು ಮಾಡಬೇಡವೋ ರಂಗಯ್ಯ’- ಶ್ರೀಪಾದರಾಜರ ಕೀರ್ತನೆಗೆ ಜೀವತುಂಬಿ ತನ್ನ ಸೂಕ್ಷ್ಮಾಭಿನಯದ ನೆಲೆಗಳಲ್ಲಿ ರಸಿಕರನ್ನು ಪರಾಕಾಷ್ಟತೆಗೊಯ್ದಳು. “ಯಮನೆಲ್ಲಿ ಕಾಣನೆಂದುಹೇಳಬೇಡ’- ಪುರಂದರದಾಸರ “ಅದ್ವೆ„ತ’ ಭಾವದಧ್ವನ್ಯಾರ್ಥದ ಕೃತಿಯ ಸಾರಸರ್ವಸ್ವವನ್ನು ಕಲಾವಿದೆ, ತನ್ನ ಪಕ್ವಾಭಿನಯದ ತಾದಾತ್ಮದಿಂದ ಪಾತ್ರಗಳಲ್ಲಿ “ಪರಕಾಯ ಪ್ರವೇಶ’ ಮಾಡಿ ದಿವ್ಯಾನುಭವ ನೀಡಿದಳು.
* ವೈ.ಕೆ. ಸಂಧ್ಯಾ ಶರ್ಮ