ಬೆಂಗಳೂರು: 2023ರ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರೋತ್ಥಾನದ ಸಾಧನಾ ಯೋಜನೆಯಡಿಯಲ್ಲಿ ಉಚಿತ ಶಿಕ್ಷಣ ಪಡೆದಿರುವ ಎಲ್ಲ 45 ವಿದ್ಯಾರ್ಥಿನಿಯರೂ ನೀಟ್ ಅರ್ಹತಾ ಅಂಕಗಳನ್ನು ಪಡೆದಿದ್ದಾರೆ.
ಸಾಧನಾ 5ನೇ ಬ್ಯಾಚಿನಲ್ಲಿ ಓದಿದ ಮಂಡ್ಯದ ರಿತ್ವಿಜಾ ದೇವೇಗೌಡ 720ಕ್ಕೆ 670 ಅಂಕ (ಅಖಿಲ ಭಾರತ ರ್‍ಯಾಂಕ್ 3027), ಕೊಟ್ಟೂರಿನ ಎಸ್.ಜೆ.ಯಶಸ್ವಿನಿ 645 ಅಂಕ (8266ನೇ ರ್‍ಯಾಂಕ್) ಹಾಗೂ ಚಿತ್ರದುರ್ಗದ ವರ್ಷಾ ಎಸ್. 627 ಅಂಕ (14896ನೇ ರ್‍ಯಾಂಕ್) ಪಡೆದಿದ್ದಾರೆ.
ರ್‍ಯಾಂಕ್ ವಿಜೇತರು ಮತ್ತು ಅರ್ಹತೆ ಪಡೆದವರೆಲ್ಲರೂ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ಬಾಲಕಿಯರು ಎಂದು ಸಾಧನಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೋತ್ಥಾನ ಪರಿಷತ್‌ನ ಸಾಧನಾ ಯೋಜನೆಯಲ್ಲಿ ಆರ್ಥಿಕ ಅನಾನುಕೂಲತೆ ಹೊಂದಿರುವ, ಗ್ರಾಮೀಣ ಪ್ರದೇಶದ ಹಾಗೂ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಇಚ್ಛೆ ಹೊಂದಿರುವ ಪ್ರತಿಭಾವಂತ ಹೆಣ್ಣುಮಕ್ಕಳನ್ನು ಹಲವು ಹಂತಗಳ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆ ಹೆಣ್ಣು ಮಕ್ಕಳಿಗೆ ಎರಡು ವರ್ಷ ಪದವಿಪೂರ್ವ ಶಿಕ್ಷಣ, ವೈದ್ಯಕೀಯ ಪ್ರವೇಶ ಪರೀಕ್ಷೆಗಳ ತರಬೇತಿ ಹಾಗೂ ಉಚಿತ ಊಟ-ವಸತಿಗಳ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
2017ರಿಂದ ಪ್ರಾರಂಭವಾಗಿರುವ ಸಾಧನಾಗೆ ಬೇಸ್ ಸಂಸ್ಥೆಯವರ ಶೈಕ್ಷಣಿಕ ಸಹಕಾರವಿದೆ. ಇಲ್ಲಿಯವರೆಗೆ 4 ಬ್ಯಾಚುಗಳಲ್ಲಿ ಒಟ್ಟು 200 ವಿದ್ಯಾರ್ಥಿನಿಯರು ಈ ಯೋಜನೆಯ ಪ್ರಯೋಜನ ಪಡೆದಿದ್ದು, 54 ಮಂದಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.