ಆಗ್ರಾ: ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಾಟದ ಸಂದರ್ಭದಲ್ಲಿ ಸೋಲು, ಗೆಲುವಿನ ವಿಚಾರದಲ್ಲಿ ಟಿವಿಯನ್ನು ಒಡೆದು ಹಾಕಿರುವ ಘಟನೆ ಬಗ್ಗೆ ಓದಿರುತ್ತೀರಿ. ಅದೇ ರೀತಿ ಲೋಕಸಭಾ ಚುನಾವಣ ಫಲಿತಾಂಶದ ಸಂದರ್ಭದಲ್ಲಿಯೂ ನಡೆದಿರುವುದು ವರದಿಯಾಗಿದೆ.
ಇದನ್ನೂ ಓದಿ:New parliament ಹೇಮಾ ಮಾಲಿನಿ, ಕಂಗನಾ…;ಸಂಸದರಾದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದ್ದರಿಂದ ಆಕ್ರೋಶಗೊಂಡ ರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಗೋವಿಂದ್ ಪರಾಶರ್ ಟಿವಿಯನ್ನೇ ಒಡೆದು ಹಾಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಮಂಗಳವಾರ ನಡೆದಿರುವುದಾಗಿ ವರದಿ ತಿಳಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 400ಕ್ಕೂ ಅಧಿಕ ಸ್ಥಾನಗಳು ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರು ಭವಿಷ್ಯ ನುಡಿದಿದ್ದರು.
ಹಲವು ಚುನಾವಣೋತ್ತರ ಸಮೀಕ್ಷೆಗಳು ಕೂಡಾ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 380ರಿಂದ 400ಕ್ಕೂ ಅಧಿಕ ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಈ ಬಾರಿ ಸಮೀಕ್ಷೆಯ ಲೆಕ್ಕಾಚಾರ ಬುಡಮೇಲಾಗಿತ್ತು. ಬಿಜೆಪಿ 292, ಇಂಡಿಯಾ ಮೈತ್ರಿಕೂಟ 232 ಸ್ಥಾನಗಳಲ್ಲಿ ಜಯ ಗಳಿಸಿತ್ತು.