Advertisement

ರಾಷ್ಟ್ರಕೂಟರ ಉತ್ಸವ: ಕ್ಷಣಗಣನೆ ಆರಂಭ

11:12 AM Mar 04, 2018 | |

ಕಲಬುರಗಿ: ಸೇಡಂ ತಾಲೂಕು ಮಳಖೇಡನಲ್ಲಿ ಮಾರ್ಚ್‌ 4 ಮತ್ತು 5ರಂದು ನಡೆಯಲಿರುವ ರಾಷ್ಟ್ರಕೂಟ ಉತ್ಸವದ ಪೂರ್ವಸಿದ್ದತಾ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಕ್ಷಣಗಣನೆ ಆರಂಭವಾಗಿದೆ.

Advertisement

ಇದೇ ವೇಳೆ ಉತ್ಸವವನ್ನು ಆಕರ್ಷಣೀಯಗೊಳಿಸಲು ಮಳಖೇಡ ಕೋಟೆಯಲ್ಲಿ ಕನ್ನಡದ ಪ್ರಥಮ ಉಪಲಬ್ಧ ಗ್ರಂಥ ಶ್ರೀ ವಿಜಯ ರಚಿಸಿದ ಕವಿರಾಜ ಮಾರ್ಗ ಪುಸ್ತಕದ ಪ್ರತಿರೂಪವನ್ನು ಗ್ರಾನೈಟ್‌ ಸೃಷ್ಟಿಸಲಾಗಿದೆ. ಇದು ಕೋಟೆಯಲ್ಲಿ ಅತ್ಯಾಕರ್ಷಣೆ ಕೇಂದ್ರವಾಗಿದೆ. ಎರಡು ದಿನಗಳ ಕಾಲ ಕೋಟೆ ದೀಪಾಲಂಕಾರದಿಂದ ಕಂಗೊಳಿಸಲಿದೆ. ಇದು ನೋಡುಗರ ಗಮನ ಸೆಳೆಯಲಿದೆ. 

ಉತ್ಸವ ನಡೆಯುವ ಕಲಬುರಗಿ-ಸೇಡಂ ರಸ್ತೆಯಲ್ಲಿರುವ ಆವರಣ ಮತ್ತು ಕೋಟೆಯಲ್ಲಿ ಕಾರ್ಮಿಕರಿಂದ ಸ್ವತ್ಛತಾ ಕಾರ್ಯ ಭರದಿಂದ ಸಾಗಿದೆ. ಹೈದರಾಬಾದಿನ ಸಂಸ್ಥೆ ಉತ್ಸವದ ಮುಖ್ಯ ವೇದಿಕೆಯನ್ನು 80*40 ಅಡಿಯಲ್ಲಿ ಹಾಗೂ ಸಾರ್ವಜನಿಕರ ಕುಳಿತುಕೊಳ್ಳುವ ಪ್ರತ್ಯೇಕ ವಾಟರ್‌ ಪ್ರೂಫ್‌ ಟೆಂಟ್‌ ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವತ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಕ್ಕೆ
ವ್ಯವಸ್ಥೆ ಕಲ್ಪಿಸಲಾಗಿದೆ. ಕರಕುಶಲ ವಸ್ತುಗಳು, ಸಿರಿಧಾನ್ಯ, ಕಲೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ದರ್ಶನಕ್ಕಾಗಿ ಮಳಿಗೆ ಸ್ಥಾಪಿಸಲಾಗಿದೆ.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಉತ್ಸವದ ಸಂಘಟನಾ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಅವರು, ಮಾರ್ಚ್‌ 4ರಂದು ಬೆಳಗ್ಗೆ 9:00ಕ್ಕೆ ಮಳಖೇಡ ಕೋಟೆಯಿಂದ ಉತ್ಸವದ ಮೆರವಣಿಗೆ ಪ್ರಾರಂಭಗೊಂಡು ವೇದಿಕೆಗೆ ಸಂಪನ್ನಗೊಳ್ಳಲಿದೆ. 

ನಂತರ 11:00ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಉತ್ಸವದ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಉತ್ಸವಕ್ಕೆ ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಸೇಡಂ ತಾಲೂಕು ಮತ್ತು ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ಮತ್ತು ಸಾರ್ವಜನಿಕರನ್ನು ಮುಕ್ತ ಆಹ್ವಾನ
ನೀಡಿಲಾಗಿದ್ದು, ಸುಮಾರು 10 ರಿಂದ 15 ಸಾವಿರ ಜನ ಬರುವ ನಿರೀಕ್ಷೆಯಿದೆ. ಸಾರ್ವಜನಿಕರಿಗಾಗಿ 8000 ಆಸನದ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಸಹ ಮಾಡಲಾಗಿದೆ. ಎರಡು ದಿನಗಳ ಕಾಲ ವರೆಗೆ ಕವಿ ಗೋಷ್ಠಿ, ಗೀತ ಗಾಯನ, ನಾಟಕ ಕಾರ್ಯಕ್ರಮಗಳು ಸ್ಥಳೀಯ ಹಾಗೂ ನಾಡಿನ ವಿವಿಧ ಕಲಾವಿದರಿಂದ ನಡೆಯಲಿದ್ದು, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಖ್ಯಾತ ಸಂಗೀತ ನಿರ್ದೇಶಕರಾದ ನವೀನ ಸಜ್ಜು, ಅನೂಪ ಸಿಳೀನ್‌, ಅರ್ಜುನ ಜನ್ಯ, ನಿರೂಪಣೆ ಖ್ಯಾತಿಯ ಅನುಶ್ರೀ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ ಎಂದರು. ಆಹಾರ ಇಲಾಖೆ ಉಪನಿರ್ದೇಶಕ ಅರುಣ ಕುಮಾರ, ಗ್ರಾಮದ ಮುಖಂಡ ಕಲ್ಯಾಣಪ್ಪ ಪಾಟೀಲ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next