ಸಿಂಧನೂರು: ರೈತರು ಕೃಷಿ ಜತೆಗೆ ಇತರೆ ಬೆಳೆ ಬೆಳೆಯಲು ಮುಂದಾದಲ್ಲಿ ಕೃಷಿಯಲ್ಲಿ ಲಾಭ ಕಂಡುಕೊಳ್ಳಲು ಸಾಧ್ಯ. ರೈತರು ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಲು ಮುಂದಾಗಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಗುರುವಾರ ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 2 ಕೋಟಿ 50 ಲಕ್ಷ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಬರೀ ಮಳೆ ಅವಲಂಬಿತ ಕೃಷಿಯಲ್ಲಿ ತೊಡಗಿದರೆ ಕಷ್ಟ ಎದುರಿಸಬೇಕಾಗುತ್ತದೆ. ಅದಕ್ಕಾಗಿ ರೈತರು ಕೃಷಿ ಬೆಳೆ ಜತೆಗೆ ಇತರೆ ಬೆಳೆಯನ್ನು ಬೆಳೆಯುವುದು ಅವಶ್ಯ.
ಜಪಾನ್ ಹಾಗೂ ಇಸ್ರೇಲ್ ಸಣ್ಣ ದೇಶಗಳಾದರೂ ಕೃಷಿ ಬೆಳೆ ಜತೆಗೆ ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರ ಹಾಗೆ ನಮ್ಮ ರೈತರು ಮುನ್ನುಗ್ಗುವಪ್ರಯತ್ನ ಮಾಡಬೇಕು. ಆಗ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದರು.
ಕಷ್ಟದಲ್ಲಿರುವ ರೈತರನ್ನು ಮೇಲೆತ್ತುವ ಕೆಲಸವನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ಮಾಡಬೇಕು. ಪ್ರಸ್ತುತ ಸಹಕಾರಿ ಬ್ಯಾಂಕ್‌ಗಳ ಆದಾಯ ಕಡಿಮೆ ಆಗುತ್ತಿದೆ. ಆದರೆ ಸಾಲ ಮರುಪಾವತಿ ಆಗದ ಕಾರಣ ಸಹಕಾರಿ ಬ್ಯಾಂಕ್‌ಗಳ ಪ್ರಗತಿಗೆ ಹಿನ್ನಡೆ ಆಗುತ್ತಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಸಾಲ
ಮರುಪಾವತಿಸಿದರೆ ಸಹಕಾರಿ ಬ್ಯಾಂಕ್ ಗಳ ಪ್ರಗತಿ ಸಾಧ್ಯ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡಬಸವರಾಜ ಮಾತನಾಡಿದರು.ಬ್ಯಾಂಕಿನ ನಿರ್ದೇಶಕರಾದ ರಾಯನಗೌಡ, ಮಲ್ಲಪ್ಪ, ಚೌಡಪ್ಪ, ಸಿದ್ಧನಗೌಡ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ರಂಗನಗೌಡ ಗೊರೇಬಾಳ, ಟಿ.ರಮೇಶಪ್ಪ ದಿದ್ದಿಗಿ, ಹನುಮಂತಪ್ಪ, ಹಂಪಯ್ಯಸ್ವಾಮಿ ರಾವಿಹಾಳ, ಅಮರೇಶ ಅಂಗಡಿ, ನಲ್ಲ ವೆಂಕಟೇಶ್ವರ ರಾವ್ ಇತರರು ಇದ್ದರು.