ಬೆಂಗಳೂರು: 2018ರಲ್ಲಿ ಬ್ರೇಕ್ ಅಪ್ ಮಾಡಿಕೊಂಡು ದೊಡ್ಡ ಸುದ್ದಿ ಮಾಡಿದ್ದ ಸ್ಟಾರ್ ಗಳಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ವರ್ಷದ ಸಮಯದಲ್ಲಿ ತನ್ನ ಹಳೆಯ ಗೆಳೆಯನನ್ನು ರಶ್ಮಿಕಾ ಮತ್ತೆ ನೆನಪಿಸಿಕೊಂಡಿದ್ದಾರೆ.
ಇತ್ತೀಚಿಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ 2018ರ ಹಲವಾರು ಫೋಟೋಗಳನ್ನು ಅಪ್ಲೋಡ್ ಮಾಡಿರುವ ರಶ್ಮಿಕಾ , ತನ್ನ ಎರಡು ವರ್ಷದ ನೆನಪುಗಳ ಬಗ್ಗೆ ಬರೆದುಕೊಂಡಿದ್ದಾರೆ. ಅದರಲ್ಲಿ ರಕ್ಷಿತ್ ಶೆಟ್ಟಿ ಜೊತೆಗಿನ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.
ನಾನು ಚಿತ್ರರಂಗಕ್ಕೆ ಬಂದು ಎರಡು ವರ್ಷವಾಯಿತು. ಸಮಯ ತುಂಬಾ ವೇಗವಾಗಿ ಸಾಗುತ್ತಿದೆ. ಜೀವನದಲ್ಲಿ ಇನ್ನೂ ಬ್ಯುಸಿಯಾಗಬೇಕು. ಹೆಮ್ಮೆ ಪಡುವಂತಹ ಕೆಲಸಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ತುಂಬಾ ಜನರನ್ನು ಭೇಟಿ ಮಾಡಬೇಕು ಎಲ್ಲರೊಂದಿಗೆ ನಗುತ್ತ ತನಗೆ ಖುಷಿ ಕೊಡುವ ಕೆಲಸಗಳನ್ನು ಮಾಡುಬೇಕು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ತನ್ನ ಜೀವನದ ಸಂತೋಷದ ಘಳಿಗೆಗಳಿಗೆ ಸಾಕ್ಷಿಯಾದ ಎಲ್ಲರಿಗೂ ಧನ್ಯವಾದ ಹೇಳಿರುವ ರಶ್ಮಿಕಾ, ಕಿರಿಕ್ ಪಾರ್ಟಿ ಚಿತ್ರ ಬಂದು ಎರಡು ವರ್ಷವಾಯಿತು. ಕಿರಿಕ್ ಪಾರ್ಟಿ ನಂಗೆ ಯಾವತ್ತೂ ಸ್ಪೆಷಲ್. ನನಗೆ ಕಿರಿಕ್ ಪಾರ್ಟಿ ಚಿತ್ರದ ಶೂಟಿಂಗ್ ದಿನಗಳು ಇನ್ನೂ ಸರಿಯಾಗಿ ನೆನಪಿದೆ. ಆ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ಇಷ್ಟ ಪಡುತ್ತೇನೆ. ಇನ್ಸ್ಟಾಗ್ರಾಮ್ ಟ್ವಿಟ್ಟರ್ ನಲ್ಲಿ ನನಗೆ ಪ್ರೋತ್ಸಾಹ ಮಾಡಿ, ಈ ಎರಡು ವರ್ಷಗಳನ್ನು ವಿಶೇಷವನ್ನಾಗಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದು ಕೊಂಡಿದ್ದಾರೆ.