Advertisement

ರಶೀದ್‌ ಖಾನ್‌ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ

06:20 AM May 27, 2018 | Team Udayavani |

ಮುಂಬಯಿ: ರಶೀದ್‌ ಖಾನ್‌ ಅವರ ಅಮೋಘ ಆಲ್‌ರೌಂಡ್‌ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಸೇರಿದಂತೆ ಕ್ರಿಕೆಟ್‌ ದಿಗ್ಗಜರಾದ ಶೇನ್‌ ವಾರ್ನ್, ರಾಹುಲ್‌ ದ್ರಾವಿಡ್‌ ಮೊದಲಾದವರೆಲ್ಲ ರಶೀದ್‌ ಸಾಹಸದ ಗುಣಗಾನ ಮಾಡಿದ್ದಾರೆ.

Advertisement

“ರಶೀದ್‌ ಖಾನ್‌ ಓರ್ವ ಉತ್ತಮ ಸ್ಪಿನ್ನರ್‌ ಎಂದು ನಾನು ಇಷ್ಟು ದಿನ ಭಾವಿಸಿಕೊಂಡಿದ್ದೆ. ಆದರೆ ಇನ್ನುಮುಂದೆ ಅವರನ್ನು ವಿಶ್ವ ಶ್ರೇಷ್ಠ ಸ್ಪಿನ್ನರ್‌ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ರಶೀದ್‌ ಅವರಲ್ಲಿ ಬ್ಯಾಟಿಂಗ್‌ ಕೌಶಲವೂ ಇದೆ ಎಂಬುದು ಸಾಬೀತಾಗಿದೆ. ಗ್ರೇಟ್‌ ಗೈ…’ ಎಂದು ಸಚಿನ್‌ ಟ್ವೀಟ್‌ ಮಾಡಿದ್ದಾರೆ.”ರಶೀದ್‌ ಖಾನ್‌ ಅವರನ್ನು ಎದುರಿಸಿ ನಿಲ್ಲುವುದು ಕಷ್ಟ. ಅನ್‌ಬೀಟೇಬಲ್‌…’ ಎಂಬುದು ರಾಹುಲ್‌ ದ್ರಾವಿಡ್‌ ಅಭಿಪ್ರಾಯ.

“ಓರ್ವ ಲೆಗ್‌ ಸ್ಪಿನ್ನರ್‌ ಆಗಿ ಎಲ್ಲ ರೀತಿಯ ಲೆಗ್‌ ಸ್ಪಿನ್ನರ್‌ಗಳನ್ನು ನಾನು ಐಪಿಎಲ್‌ನಲ್ಲಿ ಗಮನಿಸುತ್ತ ಬಂದಿದ್ದೇನೆ. ಇವರಲ್ಲಿ ರಶೀದ್‌ ಖಾನ್‌ ವಿಭಿನ್ನವಾಗಿ ನಿಲ್ಲುತ್ತಾರೆ. ಈ ಬಿಗ್‌ ಗೇಮ್‌ನಲ್ಲಿ ಅವರ ಪ್ರದರ್ಶನ ಕಂಡು ನಿಜಕ್ಕೂ ಹೆಮ್ಮೆಯಾಗಿದೆ’ ಎಂಬುದಾಗಿ ಲೆಗ್‌ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್ ಪ್ರಶಂಸಿಸಿದ್ದಾರೆ.

ಎಸಿಬಿ ಅಭಿನಂದನೆ
ಕೆಕೆಆರ್‌ ವಿರುದ್ಧ ಮಿಂಚಿ ಹೈದರಾಬಾದ್‌ನ ಗೆಲುವಿನ ರೂವಾರಿಯಾಗಿ ಮೂಡಿಬಂದ ರಶೀದ್‌ ಖಾನ್‌ ಅವರನ್ನು ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿ (ಎಸಿಬಿ) ಅಭಿನಂದಿಸಿದೆ.”ನಮ್ಮ ಗೂಗ್ಲಿ ಮಾಸ್ಟರ್‌ಗೆ ಅಭಿನಂದನೆಗಳು. ಎಲ್ಲ 3 ವಿಭಾಗಗಳಲ್ಲೂ ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದೀರಿ. ಫೈನಲ್‌ನಲ್ಲೂ ನಿಮಗೆ ಅದೃಷ್ಟ ಒಲಿಯಲಿ…’ ಎಂದು ಎಸಿಬಿ ಟ್ವೀಟ್‌ ಮಾಡಿದೆ.ಇದೇ ವೇಳೆ ಟಾಲಿವುಡ್‌ ಸೂಪರ್‌ಸ್ಟಾರ್‌ ಮಹೇಶ್‌ ಬಾಬು ಅವರು ವಿಜೇತ ಹೈದರಾಬಾದ್‌ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಹೀರೋ ರಶೀದ್‌ ಖಾನ್‌ ಸಾಹಸವನ್ನು ಕೊಂಡಾಡಿದ್ದಾರೆ.

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕೂಡ ರಶೀದ್‌ ಅವರನ್ನು ಅಭಿನಂದಿಸಿ ಟ್ವೀಟ್‌ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಶೀದ್‌, “ನಿಮ್ಮ ಅಭಿನಯದ ಬಾಜೀರಾವ್‌ ಮಸ್ತಾನಿ ನನ್ನ ನೆಚ್ಚಿನ ಚಿತ್ರ’ ಎಂದಿದ್ದಾರೆ.

Advertisement

ಭಾರತೀಯ ಪೌರತ್ವ!
ರಶೀದ್‌ ಖಾನ್‌ ಅವರ ಸಾಧನೆಗೆ ಭಾರತೀಯರೂ ಫಿದಾ ಆಗಿದ್ದಾರೆ. ಅವರಿಗೆ ಭಾರತೀಯ ಪೌರತ್ವ ನೀಡಿ ಎಂದು ಅನೇಕರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಸುಷ್ಮಾ ಸ್ವರಾಜ್‌ ಪ್ರತಿಕ್ರಿಯಿಸಿದ್ದು ವಿಶೇಷ. “ನಾನು ಎಲ್ಲ ಟ್ವೀಟ್‌ಗಳೂ° ಗಮನಿಸಿದ್ದೇನೆ. ಆದರೆ ಪೌರತ್ವದ ವಿಷಯ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತದೆ’ ಎಂದು ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next