ನವದೆಹಲಿ: ಸುಮಾರು ನೂರು ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ಅಪರೂಪದ ವಿಗ್ರಹವನ್ನು ಇತ್ತೀಚೆಗಷ್ಟೇ ಕೆನಡಾ ಭಾರತಕ್ಕೆ ಹಸ್ತಾಂತರಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 15ರಂದು ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದಲ್ಲಿ ಅನ್ನಪೂರ್ಣದೇವಿಯ ವಿಗ್ರಹವನ್ನು ಮತ್ತೆ ಪ್ರತಿಷ್ಠಾಪಿಸಲಾಗುವುದು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮದಕರಿ ನಾಯಕನಿಗೆ ವಿಷ ಹಾಕಿಕೊಂದ ಟಿಪ್ಪುಜಯಂತಿ ಮಾಡಿದ್ದು ಸಿದ್ದರಾಮಯ್ಯ ಸಾಧನೆ:ಪ್ರತಾಪ್ ಸಿಂಹ
ಗುರುವಾರ(ನ.11) ಸಂಜೆ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಪ್ರತಿಮೆಯನ್ನು ಉತ್ತರಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸಲಿದೆ. ಇಂದು ಮಾತೆ ಅನ್ನಪೂರ್ಣದೇವಿಯ ವಿಗ್ರಹವನ್ನು ಕೇಂದ್ರ ಉತ್ತರಪ್ರದೇಶ ಸರ್ಕಾರಕ್ಕೆ ನೀಡಲಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಖಾತೆ ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.
ಮೀನಾಕ್ಷಿ ಲೇಖಿ ಇಂದು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಅನ್ನಪೂರ್ಣದೇವಿ ವಿಗ್ರಹಕ್ಕೆ ಪ್ರಾರ್ಥನೆ ಸಲ್ಲಿಸಲಿದ್ದು, ನಂತರ ವಿಗ್ರಹವನ್ನು ದೆಹಲಿಯಿಂದ ಅಲಿಘಡಕ್ಕೆ ಕೊಂಡೊಯ್ಯಲಾಗುವುದು ಎಂದು ವರದಿ ಹೇಳಿದೆ.
ನವೆಂಬರ್ 12ರಂದು ವಿಗ್ರಹವನ್ನು ಕನೌಜ್ ಗೆ ಕೊಂಡೊಯ್ಯಲಾಗುವುದು, ನಂತರ ನವೆಂಬರ್ 14ರಂದು ಅಯೋಧ್ಯೆಗೆ ತಲುಪಲಿದೆ ಎಂದು ವರದಿ ವಿವರಿಸಿದೆ. ಈ ವಿಗ್ರಹ 17 ಸೆಂಟಿ ಮೀಟರ್ ಎತ್ತರವಿದ್ದು, 9 ಸೆಂ. ಮೀಟರ್ ಅಗಲವಿದ್ದು, 4 ಸೆಂ. ಮೀಟರ್ ದಪ್ಪ ಹೊಂದಿದೆ ಎಂದು ವರದಿ ತಿಳಿಸಿದೆ.