Advertisement

ಹವ್ಯಾಸಿ ಕಲಾವಿದನ ಎಲೆಮರೆಯ ಅಪರೂಪದ ಕಲಾ ಸೇವೆ

05:54 PM Mar 02, 2022 | Team Udayavani |

ಹುಬ್ಬಳ್ಳಿ: ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿನ ಸದ್ಗುರು ಸಿದ್ಧಾರೂಢರು, ಗುರುನಾಥರೂಢರು, ಸಾಯಿಬಾಬಾ ಹಾಗೂ ಇನ್ನಿತರ ಮಹಾತ್ಮರ ಮೂರ್ತಿಗಳಿಗೆ ರೇಷ್ಮೆಬಟ್ಟೆ, ಮುತ್ತು, ಅರಳು, ರುದ್ರಾಕ್ಷಿಗಳಿಂದ ಪೇಟ ಹಾಗೂ ಕಿರೀಟಗಳನ್ನು ಇಲ್ಲಿನ ಹವ್ಯಾಸಿ ಕಲಾವಿದರು ಕಳೆದ 15 ವರ್ಷಗಳಿಂದ ಮಾಡುತ್ತಿದ್ದಾರೆ. ಯಾವುದೇ ಯಂತ್ರ, ಹೊಲಿಗೆ ಯಂತ್ರವನ್ನು ಬಳಸದೆ ಕೈಯಿಂದಲೇ ಸಂಪೂರ್ಣವಾಗಿ ಪೇಟ-ಕಿರೀಟ ತಯಾರಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

Advertisement

ಸದ್ಗುರು ಗುರುನಾಥರೂಢರ ಪೂರ್ವಾಶ್ರಮ ಸಂಬಂಧಿಯೂ ಆಗಿರುವ ಹವ್ಯಾಸಿ ಕಲಾವಿದ ಎಸ್‌. ಮನೋಹರ ಹಾಗೂ ಜ್ಯೋತಿ ಮನೋಹರ ದಂಪತಿ ಅಪರೂಪದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಪೇಟ-ಕಿರೀಟ ತಯಾರಿಸುವುದಷ್ಟೇ ಅಲ್ಲದೆ, ಸದ್ಗುರು ಸಿದ್ಧಾರೂಢ-ಸದ್ಗುರು ಗುರುನಾಥ ರೂಢ ಮಠದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ರಥ-ತೆಪ್ಪ ಹಾಗೂ ದೇವಸ್ಥಾನದ ಅಲಂಕಾರದಲ್ಲಿ ಮನೋಹರ ಹಾಗೂ ಅವರ ತಂಡದ ಕಾರ್ಯ
ಮಹತ್ವದ್ದಾಗಿದೆ.

ಮನೋಹರ ಅವರು ವೃತ್ತಿಪರ ಕಲಾವಿದರೇನು ಅಲ್ಲ. ಚಿಕ್ಕಂದಿನಿಂದಲೂ ಕ್ರಾಫ್ಟ್‌ನಲ್ಲಿ ಆಸಕ್ತಿ ಹೊಂದಿದ್ದರು. ಅದೇ ಆಸಕ್ತಿ ಮುಂದುವರಿಸಿದ್ದರು. ಸದ್ಗುರು ಸಿದ್ಧಾರೂಢರಿಗೆ ಪೇಟ ಮಾಡಬೇಕೆಂಬ ಬಯಕೆಯೊಂದಿಗೆ ಪೇಟ ತಯಾರಿಕೆಗೆ ಮುಂದಾಗಿದ್ದರು. ಅದು ಮುಂದುವರಿದು ಇದೀಗ ಹೊರರಾಜ್ಯಗಳಿಗೆ ಪೇಟ-ಕಿರೀಟ ಕಳುಹಿಸುವ ಕಾರ್ಯ ಮಾಡುತ್ತಿದ್ದಾರೆ. ಎಂಎ ಪದವೀಧರರಾದ ಮನೋಹರ ಅವರ ಪೇಟ-ಕಿರೀಟ ತಯಾರಿಕೆ ಹಾಗೂ ಮಠದಲ್ಲಿ ಅಲಂಕಾರ
ಕಾರ್ಯದಲ್ಲಿ ಅವರ ಪತ್ನಿ ಜ್ಯೋತಿ ಮನೋಹರ ಸಾಥ್‌ ನೀಡುತ್ತಿದ್ದಾರೆ.

ಹೊರ ರಾಜ್ಯಗಳಿಗೂ ರವಾನೆ
ಹುಬ್ಬಳ್ಳಿ ಸಿದ್ಧಾರೂಢ ಮಠ ಸೇರಿದಂತೆ ಬೀದರ, ಕಲಬುರಗಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ ಇನ್ನಿತರ ಜಿಲ್ಲೆಗಳಲ್ಲಿನ ಸಿದ್ಧಾರೂಢಸ್ವಾಮಿ ದೇವಸ್ಥಾನಗಳಲ್ಲಿನ ಮೂರ್ತಿಗಳಿಗೆ ಇವರು ತಯಾರಿಸುವ ಪೇಟಗಳೇ ಹೋಗುತ್ತವೆ. ಗೋವಾದಲ್ಲಿ ಪಣಜಿ ಸೇರಿದಂತೆ ವಿವಿಧೆಡೆಗಳಲ್ಲಿ ಸುಮಾರು 28 ಸಿದ್ಧಾರೂಢಸ್ವಾಮಿ ದೇವಸ್ಥಾನಗಳಿದ್ದು, ಅಲ್ಲಿನ ಮೂರ್ತಿಗಳಿಗೂ ಇಲ್ಲಿಯದ್ದೇ ಪೇಟ. ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ಕಡೆಯವರು ಪೇಟ-ಕಿರೀಟ ತೆಗೆದುಕೊಂಡು ಹೋಗಿದ್ದಾರೆ. ಹುಬ್ಬಳ್ಳಿ ಶಿರಡಿನಗರ, ಕೋರ್ಟ್‌ ವೃತ್ತದಲ್ಲಿನ ಶಿರಡಿ ಸಾಯಿಬಾಬಾ ಮೂರ್ತಿಗಳಿಗೂ ಇವರು ತಯಾರಿಸಿದ ಪೇಟ-ಕಿರೀಟ ಬಳಸಲಾಗುತ್ತಿದೆ. ವರ್ಷಕ್ಕೆ ಸುಮಾರು 300-350 ಪೇಟ-ಕಿರೀಟ ಮಾರಾಟವಾಗುತ್ತಿವೆ. ಇವರು ತಯಾರಿಸುವ ಪೇಟ ಸುಮಾರು 10 ವರ್ಷಗಳವರೆಗೂ ಏನು ಆಗುವುದಿಲ್ಲವಂತೆ.

3ರಿಂದ 35 ಇಂಚ್‌ವರೆಗೆ
ಮನೋಹರ ಅವರು ಪೇಟ-ಕಿರೀಟಗಳನ್ನು ಬಟ್ಟೆ, ಮುತ್ತು, ಅರಳು, ರುದ್ರಾಕ್ಷಿ ಬಳಸಿ ತಯಾರಿಸುತ್ತಿದ್ದು, ಯಾವುದೇ ಪ್ಲಾಸ್ಟಿಕ್‌ ಹಾಗೂ ರಟ್ಟು ಬಳಸುವುದಿಲ್ಲ. ಪೇಟವನ್ನು ಮುದುಡಿದರೂ ಏನು ಆಗದ ರೀತಿಯಲ್ಲಿ ತಯಾರಿಸಲಾಗುತ್ತದೆ. ಪೇಟವನ್ನು 3 ಇಂಚ್‌ನಿಂದ 30-35 ಇಂಚ್‌ವರೆಗೂ ತಯಾರಿಸುತ್ತಿದ್ದಾರೆ. ಬಟ್ಟೆಯ ಪೇಟ ತಯಾರಿಸಲು ಒಂದು ದಿನ ತಗುಲುತ್ತದೆ. ಆದರೆ, ಮುತ್ತು, ಅರಳು ಹಾಗೂ ರುದ್ರಾಕ್ಷಿಯಿಂದ ತಯಾರಿಸುವ ಪೇಟ-ಕಿರೀಟ ತಯಾರಿಸಲು ಎಂಟರಿಂದ ಹತ್ತು ದಿನ ಬೇಕಾಗುತ್ತದೆ. ಬಟ್ಟೆಯಿಂದ ತಯಾರಿಸುವ ಪೇಟಕ್ಕೆ ಒಂದೂವರೆ ಮೀಟರ್‌ನಷ್ಟು ರೇಷ್ಮೆ ಬಟ್ಟೆ ಬಳಸಲಾಗುತ್ತಿದ್ದು, ಮುತ್ತು, ಪಡೆಂಟ್‌ ಇನ್ನಿತರ
ಅಲಂಕಾರ ಮಾಡಲಾಗುತ್ತದೆ. ಪೇಟ ಹಾಗೂ ಕಿರೀಟಗಳು 50 ರೂ.ನಿಂದ 10 ಸಾವಿರ ರೂ. ವರೆಗಿನ ಬೆಲೆಯಲ್ಲಿ ದೊರೆಯುತ್ತಿವೆ.

Advertisement

ಅಲಂಕಾರ ಸೇವೆ
ಎಸ್‌.ಮನೋಹರ ಅವರು ಎಲ್ಲಿಯೂ ತರಬೇತಿ ಪಡೆಯದಿದ್ದರೂ ವೃತ್ತಿಪರರಿಗೆ ಕಿಂಚಿತ್‌ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಅಂದವಾಗಿ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಾರೂಢ ಮಠದ ಆವರಣದಲ್ಲಿಯೇ ನೆಲೆಸಿದ್ದು, ಶ್ರೀಮಠದ ವಿವಿಧ ಸೇವಾ ಕಾರ್ಯದಲ್ಲಿ ಮನೋಹರ-ಜ್ಯೋತಿ ತೊಡಗಿಕೊಂಡಿದ್ದಾರೆ. ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅಲಂಕಾರ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವ ವೇಳೆ ಸಿದ್ಧಾರೂಢ ಸ್ವಾಮಿ ಹಾಗೂ ಗುರುನಾಥರೂಢ ಸ್ವಾಮಿಗಳ ಗದ್ದುಗೆ ಇರುವ ಮಂದಿರ, ರಥ ಹಾಗೂ ತೆಪ್ಪೋತ್ಸವದ ರಥ ಅಲಂಕಾರ ಸೇವೆಯಲ್ಲಿ ಮನೋಹರ ನೇತೃತ್ವದ ಸುಮಾರು 50 ಜನರ ತಂಡ ಪ್ರತಿ ವರ್ಷ ತೊಡಗಿಸಿಕೊಳ್ಳುತ್ತಿದೆ.

ಪಿಎಚ್‌ಡಿ ಮಾಡಬೇಕೆಂದಾಗ ಕಲಬುರಗಿಯಲ್ಲಿ ಅವಕಾಶ ಸಿಕ್ಕಾಗ ಹೋಗಲಾಗಲಿಲ್ಲ. ಪೇಟ-ಕಿರೀಟ ತಯಾರಿಸುವ ಯಾವುದೇ ತರಬೇತಿ ಪಡೆದಿಲ್ಲ. ಸ್ವಯಂ ಚಿಂತನೆ, ಕಲಿಕೆಯಲ್ಲೇ ಆರಂಭಿಸಿದೆ. ಮೊದಮೊದಲು ಸಿದ್ಧಾರೂಢಸ್ವಾಮಿ ಮಠದಲ್ಲಿನ ಸಿದ್ಧಾರೂಢಸ್ವಾಮಿ, ಗುರುನಾಥರೂಢಸ್ವಾಮಿ ಮೂರ್ತಿಗಳಿಗೆ ಇದನ್ನು ನೀಡುತ್ತಿದ್ದೆ. ಅದನ್ನು ನೋಡಿದ ನಂತರ ಮಹಾರಾಷ್ಟ್ರ-ಗೋವಾ ಸೇರಿದಂತೆ ವಿವಿಧೆಡೆಯಿಂದ ಬೇಡಿಕೆ ಬಂತು.  ಯಾವುದೇ ಮಳಿಗೆ, ಪ್ರಚಾರಕ್ಕೆ ಮುಂದಾಗಿಲ್ಲ. ಮನೆಯಲ್ಲಿಯೇ ದೈವಿಚ್ಛೆಯ ಸೇವೆ ರೂಪದಲ್ಲಿ ಕೈಗೊಳ್ಳುತ್ತಿದ್ದೇನೆ. ಮಾಹಿತಿ ಇದ್ದವರು ಬಂದು ಪೇಟ-ಕಿರೀಟ ತೆಗೆದುಕೊಂಡು ಹೋಗುತ್ತಾರೆ.
ಎಸ್‌.ಮನೋಹರ, ಹವ್ಯಾಸಿ ಕಲಾವಿದ

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next