ಹುಬ್ಬಳ್ಳಿ: ನಗರದ ವಿವಿಧೆಡೆ ಜಿಲ್ಲಾಡಳಿತದಿಂದ ಆರಂಭಿಸಿರುವ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಶನಿವಾರವೂ ಮುಂದುವರಿದಿದ್ದು, ನಗರದ ವಿವಿಧ ಮಾರುಕಟ್ಟೆ ಪ್ರದೇಶ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್-19 ಟೆಸ್ಟ್ ಮಾಡಲಾಯಿತು.
ಗುರುವಾರದಿಂದ ಜಿಲ್ಲಾದ್ಯಂತ ಆರಂಭವಾಗಿರುವ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಶನಿವಾರ ನಗರದ ಬಮ್ಮಾಪುರ ಓಣಿ, ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪುರ ಚೌಕ್, ಹಳೇಹುಬ್ಬಳ್ಳಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ನಡೆಯಿತು.
ಮುಂದುವರಿದ ಅಂಗಡಿ ಬಂದ್: ಶನಿವಾರ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ ವಾಹನ ಬರುತ್ತದೆ, ಬಂದಿದೆ ಎಂದು ಹಲವು ಅಂಗಡಿಕಾರರು ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ಹೋದರೆ ಇನ್ನು ಕೆಲವರು ಸ್ವಯಂ ಪ್ರೇರಿತವಾಗಿ ಬಂದು ತಪಾಸಣೆ ಮಾಡಿಸಿಕೊಂಡರು. ಕೋವಿಡ್ ತಪಾಸಣೆ ವಾಹನ ಸ್ಥಳದಿಂದ ಹೋಗುತ್ತಿದ್ದಂತೆ ಮತ್ತೆ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ್ದು ಕಂಡು ಬಂದಿತು.
ಮಾಸ್ಕ್ ಧರಿಸಿರಲಿಲ್ಲ: ಕೋವಿಡ್ ತಪಾಸಣೆಗೆ ಆಗಮಿಸಿದ ಸಿಬ್ಬಂದಿ ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ, ಕೋವಿಡ್ ಟೆಸ್ಟ್ ಮಾಡುವವರು ಮಾತ್ರ ಪಿಪಿಇ ಕಿಟ್ ಧರಿಸಿದ್ದು, ವಾಹನದಲ್ಲಿದ್ದ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರೂ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸಾರ್ವಜನಿಕರ ಮಾಹಿತಿ ಪಡೆಯುತ್ತಿದ್ದರು. ಇದರಿಂದ ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು, ಕೋವಿಡ್ ಯಾರನ್ನು ಬಿಡುವುದಿಲ್ಲ. ಆದರೆ ತಪಾಸಣೆಗೆ ಆಗಮಿಸಿದ ಸಿಬ್ಬಂದಿ ಕೋವಿಡ್ ಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದರು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಅಂಗಡಿಕಾರರ ಮನವೊಲಿಸಿದ ಸಿಬ್ಬಂದಿ: ಎಲ್ಲೆಡೆ ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಜನನಿಬಿಡಿ ಪ್ರದೇಶಗಳಲ್ಲಿರುವ ಅಂಗಡಿಕಾರರನ್ನು ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ವೈರಸ್ ಕುರಿತು ಅವರಲ್ಲಿ ಜಾಗೃತಿ ಮೂಡಿಸಿ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳುತ್ತಿರುವುದು ಕಂಡು ಬಂದಿತು.