Advertisement

ಶಿಕ್ಷಣ ಕ್ಷೇತ್ರಕ್ಕಾಗಿ ಶೀಘ್ರ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ನೀತಿ ಜಾರಿ: ಸಿಎಂ

11:43 PM Jun 06, 2022 | Team Udayavani |

ಬೆಂಗಳೂರು: ರಾಜ್ಯದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗಾಗಿ ಸರಕಾರ ಶೀಘ್ರದಲ್ಲೇ ಸಂಶೋಧನೆ ಮತ್ತು ಅಭಿವೃದ್ಧಿ (ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌) ನೀತಿಯನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಬಸವನಗುಡಿಯ ದಿ ನ್ಯಾಷನಲ್‌ ಹೈಸ್ಕೂಲ್‌ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಣ ತಜ್ಞ ಡಾ| ಎಚ್‌. ನರಸಿಂಹಯ್ಯ ಅವರ 102ನೇ ಹುಟ್ಟುಹಬ್ಬದ ಸಮಾರಂಭ ಮತ್ತು ಎಚ್‌.ನರಸಿಂಹಯ್ಯ ಅವರ ಆತ್ಮ ಕಥನ “ಹೋರಾಟದ ಹಾದಿ’ಯ ಇಂಗ್ಲಿಷ್‌ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕೆ ಹಂತದಲ್ಲೆ ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ಅಟಲ್‌ ಲ್ಯಾಬ್‌ಗಳನ್ನು ಪರಿಚಯಿಸಿದೆ. ಮಕ್ಕಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಜ್ಞಾನ ತಿಳಿಯಲಿ ಎಂಬುದು ಕೇಂದ್ರ ಸರಕಾರದ ಆಶಯವಾಗಿದೆ ಎಂದು ತಿಳಿಸಿದರು.

ನಾಡಿನ ಶಿಕ್ಷಣ ಕ್ಷೇತ್ರಕ್ಕೆ ನರಸಿಂಹಯ್ಯ ಕೊಡುಗೆ ಅಪಾರ. ಈ ದೇಶದ ಸನಾತನ ಮೌಲ್ಯಗಳನ್ನು ಉಳಿಸಿಕೊಂಡು ಆಧುನಿಕ ಭಾರತ ನಿರ್ಮಾಣ ಮಾಡುವ ಕೆಲಸ ಮಾಡಿದರು. ಮೂಢನಂಬಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಕರ್ನಾಟಕವನ್ನು ವಿಜ್ಞಾನ ಸಂಸ್ಥೆಯನ್ನಾಗಿ ಕಟ್ಟಿದ ಶ್ರೇಯಸ್ಸು ಕೂಡ ಅವರಿಗೆ ಸಲ್ಲುತ್ತದೆ ಎಂದರು.

ನಾನು ಸಿಎಂ ಆಗಿ ಬಂದಿಲ್ಲ
ಮಕ್ಕಳು ಸಮೂಹಗಾನದಲ್ಲಿ ಹಾಡಿದ ಕವಿ ದ.ರಾ.ಬೇಂದ್ರೆ ಅವರ “ಬಾರೋ ಸಾಧನ ಕೇರಿಗೆ’ ಎಂಬ ಕವಿತೆಗೆ ಮುಖ್ಯಮಂತ್ರಿ ತಲೆದೂಗಿದರು. ಮಕ್ಕಳ ಬಳಿಗೆ ತೆರಳಿ ಅವರನ್ನು ಮಾತನಾಡಿಸಿದರು. ನಾನು ಇಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ನಿಮ್ಮಂತೆ ವಿದ್ಯಾರ್ಥಿಯಾಗಿಯೇ ಬಂದಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next