Advertisement

ಕೆಎಂಸಿ ಆಸ್ಪತ್ರೆಯಲ್ಲೂ ಶೀಘ್ರ ಪ್ಲಾಸ್ಮಾ ಚಿಕಿತ್ಸೆ; ತಿಂಗಳಾಂತ್ಯಕ್ಕೆ ಅನುಮತಿ ಸಾಧ್ಯತೆ

11:23 PM Aug 14, 2020 | mahesh |

ಉಡುಪಿ: ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಹಾಯಕವಾಗಲು ಹಲವು ರಾಜ್ಯ, ಜಿಲ್ಲೆಗಳು ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆ ಮಾಡಿವೆ. ಈಗ ಉಡುಪಿ ಜಿಲ್ಲೆಯ ಕಸ್ತೂರ್ಬಾ ಆಸ್ಪತ್ರೆಯಲ್ಲಿಯೂ ಪ್ಲಾಸ್ಮಾ ಚಿಕಿತ್ಸೆ ನಡೆಸಲು ಎಲ್ಲ ರೀತೀಯ ಸಿದ್ಧತೆಗಳು ನಡೆಯುತ್ತಿವೆ.

Advertisement

ಮೂರು ತಿಂಗಳ ಹಿಂದೆಯೇ ಪರವಾನಿಗೆಗಾಗಿ ಡಿಸಿಜಿಐ (ಡ್ರಗ್‌ ಕಂಟ್ರೋಲರ್‌ ಜನರಲ್‌ ಆಫ್ ಇಂಡಿಯಾ) ಅವರಿಗೆ ಅರ್ಜಿ ಸಲ್ಲಿಸಲಾಗಿದೆ. ಈ ಬಗೆಗಿನ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಈ ತಿಂಗಳಾಂತ್ಯದೊಳಗೆ ಅನುಮತಿ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪ್ಲಾಸ್ಮಾ ಚಿಕಿತ್ಸೆಗೆ ಬೇಕಿರುವ ಎಲ್ಲ ಪರಿಕರಗಳು ಆಸ್ಪತ್ರೆಯಲ್ಲಿ ಸಿದ್ಧವಾಗಿವೆ. ಅಪ್ರಸಿಸ್‌ ಇಕ್ವಿಪ್‌ಮೆಂಟ್‌, ಟೆಸ್ಟಿಂಗ್‌ ಸೌಲಭ್ಯಗಳು, ತರಬೇತಿ ಹೊಂದಿದ ಸಿಬಂದಿ ಕೂಡ ಇದ್ದಾರೆ.

ಎಷ್ಟು ಪರಿಣಾಮಕಾರಿ?
ಮುಂಬಯಿಯ ಧಾರಾವಿಯಲ್ಲಿ ಶೇ.80ರಷ್ಟು ಮಂದಿ ಪ್ಲಾಸ್ಮಾ ಚಿಕಿತ್ಸೆ ಯಿಂದ ಗುಣಮುಖರಾಗಿದ್ದಾರೆ. ದಿಲ್ಲಿಯಲ್ಲಿಯೂ ಈ ಚಿಕಿತ್ಸೆ ಯಶಸ್ವಿಯಾಗಿತ್ತು. ಕೋವಿಡ್ ಪಾಸಿಟಿವ್‌ ಬಂದು ಗುಣಮುಖರಾದ ಹಲವು ಪೊಲೀಸ್‌ ಸಿಬಂದಿ ಪ್ಲಾಸ್ಮಾ ನೀಡಲು ಈಗಾಗಲೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನುತ್ತಾರೆ ಡಾ| ಟಿಎಂಎ ಪೈ ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ| ಶಶಿಕಿರಣ್‌ ಉಮಾಕಾಂತ್‌.

ಎಲ್ಲರೂ ಪ್ಲಾಸ್ಮಾ ದಾನ ಮಾಡುವಂತಿಲ್ಲ
ಒಪ್ಪಿಗೆ ಇದ್ದರಷ್ಟೇ ಪ್ಲಾಸ್ಮಾ ದಾನ ಮಾಡಬಹುದು. ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ 14ರಿಂದ 28 ದಿನಗಳ ಒಳಗೆ ಪ್ಲಾಸ್ಮಾ ದಾನ ಮಾಡಬಹುದು. 18ರಿಂದ 60 ವರ್ಷದವರಾಗಿದ್ದರೆ ಪ್ಲಾಸ್ಮಾ ದಾನ ಮಾಡಲು ಸೂಕ್ತ. ಮಗುವಿಗೆ ಜನ್ಮ ನೀಡಿರುವ ಮಹಿಳೆಯರು ಪ್ಲಾಸ್ಮಾ ದಾನ ಮಾಡುವಂತಿಲ್ಲ.

ಪ್ಲಾಸ್ಮಾ ಎಂದರೆ ಏನು?
ಬಿಳಿ ರಕ್ತಕಣ, ಕೆಂಪು ರಕ್ತಕಣ, ಪ್ಲೇಟ್‌ಲೆಟ್‌ಗಳಂತೆ ಪ್ಲಾಸ್ಮಾಕ್ಕೆ ಕೂಡ ಪ್ರಮುಖ ಪಾತ್ರವಿದೆ. ಈ ದ್ರವ (ಪ್ಲಾಸ್ಮಾ) ದೇಹದಲ್ಲಿ ರಕ್ತದ ಘಟಕಗಳನ್ನು ಕೊಂಡೊಯ್ಯುತ್ತದೆ. ರಕ್ತದ ಅತೀ ದೊಡ್ಡ ಭಾಗ ಪ್ಲಾಸ್ಮಾ. ಇದು ಶೇ.55ರಷ್ಟಿದೆ. ಇದನ್ನು ರಕ್ತದಿಂದ ತೆಗೆದರೆ ತಿಳಿ ಹಳದಿ ಬಣ್ಣ ಇದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶ, ಪ್ರೋಟೀನುಗಳನ್ನು ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತದೆ.

Advertisement

ಪ್ಲಾಸ್ಮಾ ಚಿಕಿತ್ಸೆ ಪರಿಕರಗಳು ಹಾಗೂ ಪರಿಣತಿ ಹೊಂದಿದ ಸಿಬಂದಿ ವರ್ಗ ಇದ್ದಾರೆ. ಅನುಮತಿ ಸಿಕ್ಕಿದ ತತ್‌ಕ್ಷಣ ಕಾರ್ಯಪ್ರವೃತರಾಗಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಈ ಮೂಲಕ ಕೋವಿಡ್‌-19 ಸೋಂಕಿತರನ್ನು ಗುಣಮುಖರಾಗಿಸುವ ಉದ್ದೇಶ ಹೊಂದಲಾಗಿದೆ.
-ಡಾ| ಶಮಿ ಶಾಸ್ತ್ರಿ ಬ್ಲಿಡ್‌ ಸೆಂಟರ್‌ ಮುಖ್ಯಸ್ಥರು, ಮಣಿಪಾಲ ಆಸ್ಪತ್ರೆ

ಅನುಮತಿಯೊಂದೇ ಬಾಕಿ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಆರಂಭಿಸುವ ಬಗ್ಗೆ ಎಲ್ಲ ರೀತಿಯ ಸಿದ್ಧತೆಗಳೂ ನಡೆದಿವೆ. ಈ ತಿಂಗಳಾಂತ್ಯದೊಳಗೆ ಅನುಮತಿ ಸಿಗುವ ನಿರೀಕ್ಷೆ ಹೊಂದಲಾಗಿದೆ.
-ಡಾ| ಅವಿನಾಶ್‌ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು,  ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next