ಹಟ್ಟಿ ಚಿನ್ನದ ಗಣಿ: ಪಟ್ಟಣದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಪ್ರತಿಭಟನೆಯನ್ನು ಪಪಂ ಮುಖ್ಯಾಧಿಕಾರಿ ಲಿಖೀತ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಮೂರು ದಿನ ಮುಂದೂಡಲಾಗಿದೆ.
ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಪಂ ಮುಖ್ಯಾಧಿಕಾರಿ ದುರಗಪ್ಪ ಹಗೆದಾಳ, ಪಟ್ಟಣ ಪಂಚಾಯ್ತಿಗೆ ಸದ್ಯದಲ್ಲಿಯೇ 9.80 ಕೋಟಿ ರೂ. ಅನುದಾನ ಬಿಡುಗಡೆ ಆಗಲಿದೆ. ಇದರಲ್ಲಿ ಶೇ.85ರಷ್ಟು ಹಣವನ್ನು ಮೂಲ ಸೌಕರ್ಯಕ್ಕೆ ಮೀಸಲಿಡಲಾಗುವುದು. ಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಸಾರ್ವಜನಿಕರು, ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿರುವ ಪಪಂ ಕಾರ್ಯಾಲಾಯಕ್ಕೆ ಮುತ್ತಿಗೆಯನ್ನು ಕೈಬಿಡಬೇಕೆಂದು ವಿನಂತಿಸಿದರು.
ಎರಡು ಮೋಟಾರ್ ಹಾಗೂ 2 ಸ್ಟಾರ್ಟರ್ ಸೇರಿದಂತೆ ಟಿಸಿ ದುರಸ್ತಿಯಲ್ಲಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರ ನಿರ್ದೇಶನದಂತೆ ಅವುಗಳನ್ನು ಸಿಂಧನೂರಿಗೆ ದುರಸ್ತಿಗೆ ಕಳಿಸಲಾಗಿದೆ. ಮೋಟಾರ್ ರಿಪೇರಿ ಮುಗಿಯುವ ಹಂತದಲ್ಲಿದ್ದು, ಶೀಘ್ರವೇ ತಂದು ಕುಡಿಯುವ ನೀರಿನ ಘಟಕದಲ್ಲಿ ಅಳವಡಿಸಲಾಗುವುದು. ಡಿ.3ರಂದು ಸೋಮವಾರ ಸಂಜೆ ಹಟ್ಟಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಟ್ಟಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಗುಂಡಪ್ಪಗೌಡ ಪೊಲೀಸ್ ಪಾಟೀಲ ಮಾತನಾಡಿ, ಕುಡಿಯುವ ನೀರಿಗಾಗಿ ಮಹಿಳೆಯರು, ಮಕ್ಕಳು ಕೊಡ ಹಿಡಿದುಕೊಂಡು ಬೀದಿ ಬೀದಿ ಅಲೆಯುತ್ತಿದ್ದಾರೆ. 18 ಕೋಟಿ ವೆಚ್ಚದಲ್ಲಿ ಕೈಗೊಂಡ ಶಾಶ್ವತ ಕುಡಿಯುವ ನೀರಿನ ಯೋಜನೆ ವಿಫಲವಾಗಿದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ.
ಪದೇ ಪದೇ ಮೋಟಾರ್ ದುರಸ್ತಿಗೀಡಾಗುತ್ತಿದ್ದು, ಗುಣಮಟ್ಟದ ಮೋಟಾರ್ ಅಳವಡಿಸಿ ನೀರಿನ ಬವಣೆ ನೀಗಿಸಬೇಕು. ಪಪಂ ಅಧಿಕಾರಿ ಹಾಗೂ ಮೇಲಾಧಿಕಾರಿಗಳು ಮೂರು ದಿನ ಕಾಲಾವಕಾಶ ಕೇಳಿದ್ದಾರೆ. ಅಷ್ಟರಲ್ಲಿ ಮೋಟಾರ್ ಅಳವಡಿಸಿ ನೀರು ಪೂರೈಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು. ಶುಕ್ರವಾರ ಹಮ್ಮಿಕೊಂಡ ಧರಣಿಯನ್ನು ತಾತ್ಕಾಲಿಕವಾಗಿ ಮೂರು ದಿನಗಳ ಕಾಲ ಮುಂದೂಡಲಾಗಿದೆ ಎಂದು ಹೇಳಿದರು.
ಹಟ್ಟಿ ಠಾಣೆ ಪಿಎಸ್‌ಐ ಪಿಎಸ್‌ಐ ಗಂಗಪ್ಪ ಬುರ್ಲಿ, ಮೌನೇಶ ಕಾಕಾನಗರ, ಶ್ರೀನಿವಾಸ, ಕರವೇ ಶಿವರಾಮೇಗೌಡ ಬಣ ಪದಾಧಿಕಾರಿಗಳು, ಸಾರ್ವಜನಿಕರು, ಪಪಂ ಸಿಬ್ಬಂದಿ ಇದ್ದರು.