ಮಸ್ಕಿ: ಸಮಾಜ ಕಲ್ಯಾಣ ಖಾತೆ ನೀಡುವ ಮೂಲಕ ಬಿಜೆಪಿ ಸರಕಾರ ಬಹುದೊಡ್ಡ ಜವಾಬ್ದಾರಿ ನನಗೆ ವಹಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲು ಪ್ರಮಾಣ ಹೆಚ್ಚಿಸಬೇಕು ಎನ್ನುವ ಬೇಡಿಕೆಯನ್ನು ನಾನು ಅಧಿಕಾರದಲ್ಲಿ ಇರುವ ಅವಧಿಯಲ್ಲಿಯೇ ಪೂರೈಸುವೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಪಟ್ಟಣದಲ್ಲಿ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿ ಒಬ್ಬ ಹಿಂದುಳಿದ ಸಮಾಜದಿಂದ ಬಂದ ಬಿ. ಶ್ರೀರಾಮುಲುಗೆ ಎಲ್ಲ ಕೊಟ್ಟಿತ್ತು. ಎರಡು ಕಡೆ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿದರು. ಪ್ರತ್ಯೇಕ ಹೆಲಿಕ್ಯಾಪ್ಟರ್ ಕೊಟ್ಟು ರಾಜ್ಯದಲ್ಲಿ ಪ್ರಚಾರ ನಡೆಸಲು ಅವಕಾಶ ನೀಡಿದರು. ಬಿಜೆಪಿ ಸರಕಾರಕ್ಕೆ ಬಂದರೆ ಡಿಸಿಎಂ ಹುದ್ದೆ ನೀಡಲು ತಯಾರಿತ್ತು.
ಆದರೆ, 2018ರ ಚುನಾವಣೆ ಫಲಿತಾಂಶ ಬಳಿಕ ಬಿಜೆಪಿಗೆ 104 ಸ್ಥಾನ ಮಾತ್ರ ಬಂತು. ಅಧಿಕಾರಕ್ಕೆ ಏರುವ ಅವಕಾಶ ಸ್ವಲ್ಪದರಲ್ಲೇ ತಪ್ಪಿತ್ತು. ಆದರೂ ವಲಸೆ ಬಂದ ಶಾಸಕರ ಮೂಲಕ ಅಧಿಕಾರ ಸಿಕ್ಕಿದೆ. ಸಮಾಜ ಕಲ್ಯಾಣ ಸಚಿವನನ್ನಾಗಿಯೂ ಮಾಡಿದ್ದು, ಹಿಂದುಳಿದ ವರ್ಗದ ಜನರ ಋಣ ತೀರಿಸುವ ಅವಕಾಶ ಸಿಕ್ಕಿದೆ. ಎಸ್ಟಿ ಜನಾಂಗದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸುವುದು, ಪರಿಶಿಷ್ಟ ಜಾತಿಯವರ ಮೀಸಲಾತಿ ಶೇ.15ರಿಂದ 17ರ ವರೆಗೆ ಹೆಚ್ಚಿಸುವ ಕುರಿತು ಈಗಾಗಲೇ ಗಂಭೀರ ಚಿಂತನೆ ನಡೆದಿದೆ. ಇದನ್ನು ಬಿಜೆಪಿ ಸರಕಾರದಲ್ಲಿ ಜಾರಿ ಮಾಡಿಯೇ ತೀರುತ್ತೇನೆ ಎಂದು ಬಿ.ಶ್ರೀರಾಮುಲು ಘೋಷಣೆ ಮಾಡಿದರು.
ಕಾಂಗ್ರೆಸ್ ಧೂಳಿಪಟ: ದೇಶದಲ್ಲೇ ಕಾಂಗ್ರೆಸ್ ಧೂಳಿಪಟವಾಗುತ್ತಿದೆ. ಬಿಜೆಪಿ ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್‌ಗೆ ನೆಲೆ ಇಲ್ಲದಾಗಿದೆ. ಮಸ್ಕಿಯಲ್ಲೂ ಕಾಂಗ್ರೆಸ್‌ಗೆ ನೆಲೆ ಇಲ್ಲದಂತೆ ಮಾಡಬೇಕು. ಮಸ್ಕಿ ವಿಧಾನಸಭೆ ಚುನಾವಣೆ ಫೈನಲ್ ಕ್ರಿಕೆಟ್ ಮ್ಯಾಚ್ ಇದ್ದಂತೆ. ಈಗ ಸೆಮಿಫೈನಲ್ (ಗ್ರಾಪಂ) ಎಲೆಕ್ಷನ್‌ನಲ್ಲಿ ಗೆದ್ದಾಗಿದೆ. 21 ಪಂಚಾಯಿತಿಯಲ್ಲಿ 16 ಬಿಜೆಪಿ ಪಾಲಾಗಿದ್ದು ಹೆಮ್ಮೆಯ ಸಂಗತಿ. ಈಗ ಬಾಕಿ ಉಳಿದಿರುವ ಫೈನಲ್ ಮ್ಯಾಚ್ (ಬೈ ಎಲೆಕ್ಷನ್) ಮಾತ್ರ. ಇಲ್ಲೂ ವಿನ್ ಆಗಲೇಬೇಕು. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಇಲ್ಲಿನ ಜನರು ಕೇವಲ ಒಬ್ಬ ಶಾಸಕನ ಆಯ್ಕೆಗೆ ಮತದಾನ ಮಾಡುತ್ತಿಲ್ಲ. ಒಬ್ಬ ಮಂತ್ರಿಯನ್ನು ಆಯ್ಕೆ ಮಾಡಲು ಮತ
ಹಾಕುತ್ತೀರಿ ಎನ್ನುವುದನ್ನು ಮರೆಯಬಾರದು ಎಂದು ಬಿ.ಶ್ರೀರಾಮುಲು ಹೇಳಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಕಳೆದ 12 ವರ್ಷದಲ್ಲಿ ಮಸ್ಕಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿರುವೆ. ಈಗ 5ಎ ಕಾಲುವೆ ಯೋಜನೆ ಜಾರಿ ಮಾಡಬೇಕು ಎಂದು ಬೇಡಿಕೆ ಇದೆ. ಇದಕ್ಕಾಗಿ ಹೋರಾಟವೂ ನಡೆಯುತ್ತಿದೆ. ಆದರೆ, ಇದು ಕಾರ್ಯಸಾಧುವಲ್ಲದ ಯೋಜನೆಯಾಗಿದ್ದು, ನದಿ ಜೋಡಣೆಗಳ ಬಳಿಕವಷ್ಟೇ ಇದು ಕಾರ್ಯ ಸಾಧ್ಯ. ಹೀಗಾಗಿ ಇದಕ್ಕೆ ಪರ್ಯಾಯವಾಗಿ ವಟಗಲ್ ಬಸವೇಶ್ವರ ಏತ ನೀರಾವರಿ ಮೂಲಕ ಈ ಭಾಗಕ್ಕೆ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ 1200 ಕೋಟಿ ರೂ. ಅನುದಾನವೂ ಮೀಸಲಿಡಲಾಗಿದೆ ಎಂದು ಹೇಳಿದರು.
ಸನ್ಮಾನ: ತಾಲೂಕಿನ 21 ಗ್ರಾಪಂಗಳ ಪೈಕಿ 16 ಗ್ರಾಪಂಗಳಿಗೆ ಹೊಸದಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರಿಗೆ ಪಕ್ಷದ ವತಿಯಿಂದ ಇದೇ ವೇಳೆ ಸನ್ಮಾನಿಸಲಾಯಿತು.