Advertisement

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

11:44 PM Oct 28, 2020 | mahesh |

ಕುಂದಾಪುರ: ಗ್ರಾಮ ಪಂಚಾಯತ್‌ಗಳಲ್ಲಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಆಧಾರ್‌ ತಿದ್ದುಪಡಿ, ನೋಂದಣಿ ಸೌಲಭ್ಯ ಶೀಘ್ರದಲ್ಲಿ ಪುನರಾರಂಭಗೊಳ್ಳಲಿದೆ. ಈಗಾಗಲೇ ಸೈಬರ್‌ ಸೆಂಟರ್‌, ಝೆರಾಕ್ಸ್‌ ಅಂಗಡಿಗಳ ಸಹಿತ ಅನೇಕ ಕಡೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಬ್ಯಾಂಕ್‌, ಅಂಚೆ ಕಚೇರಿಗಳಲ್ಲೂ ಆಧಾರ್‌ ಸೌಲಭ್ಯ ಇದೆ. ಸೈಬರ್‌ ಸೆಂಟರ್‌ಗಳಲ್ಲಿ ದುರುಪಯೋಗದ ಹಿನ್ನೆಲೆಯಲ್ಲಿ ಸೇವೆಗೆ ಮಿತಿ ಹೇರಲಾಗಿದೆ.

Advertisement

ಆರಂಭ
2018ರ ಸೆ. 7ರಂದು ಗ್ರಾ.ಪಂ.ಗಳಲ್ಲಿ ಆಧಾರ್‌ ಪ್ರಕ್ರಿಯೆ ನಡೆಸಲು ಸರಕಾರ ತೀರ್ಮಾನಿಸಿತ್ತು. ತರಬೇತಿ ನೀಡಿ ಅಗತ್ಯ ವಸ್ತುಗಳನ್ನೂ ವಿತರಿಸಲಾಗಿತ್ತು. ಸಾಫ್ಟ್ವೇರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಸ್ಥಳೀಯವಾಗಿ ಸಾರ್ವಜನಿಕರ ಕೈಗೆಟಕುವಂತೆ ಗ್ರಾ.ಪಂ.ಗಳಲ್ಲಿ ನಡೆಯುತ್ತಿದ್ದ ಆಧಾರ್‌ ತಿದ್ದುಪಡಿ ಸರ್ವರ್‌ ಸಮಸ್ಯೆ ನೆಪದಲ್ಲಿ ಒಂದೊಂದೇ ಗ್ರಾ.ಪಂ.ಗಳಲ್ಲಿ ಸ್ಥಗಿತಗೊಂಡು ತಾಂತ್ರಿಕ ಕಾರಣದ ಗ್ರಹಣ ಬಡಿದು ಕಳೆದ ವರ್ಷ ಜೂನ್‌ನಿಂದ ಆಧಾರರಹಿತವಾಗಿದೆ. ಈ ವರ್ಷ ಮಾರ್ಚ್‌ ಕೊನೆಯಿಂದ ಕೊರೊನಾ ಕಾರಣದಿಂದ ಒಟ್ಟು ಆಧಾರ್‌ ಪ್ರಕ್ರಿಯೆಯನ್ನೇ ನಿಲ್ಲಿಸಲಾಗಿತ್ತು. ಲಾಕ್‌ಡೌನ್‌ ತೆರವಿನ ಅನ್‌ಲಾಕ್‌-5 ಮಾರ್ಗಸೂಚಿ ಬಳಿಕ ಆಧಾರ್‌ ಪ್ರಕ್ರಿಯೆ ಆರಂಭವಾಗಿದೆ.

ಗೊಂದಲ ಮಾಯ!
ಗೊಂದಲಮಯವಾಗಿದ್ದ ಆಧಾರ್‌ ಈಗ ಗೊಂದಲ ಮಾಯವಾಗಿದೆ. ಅನುಮತಿ ಪಡೆದ ಸೈಬರ್‌ ಸೆಂಟರ್‌ಗಳಲ್ಲೂ ತಿದ್ದುಪಡಿಗೆ ಅವಕಾಶ ಇದ್ದು ವಿಳಾಸ, ಜನ್ಮದಿನಾಂಕ, ಹೆಸರು ಮೊದಲಾದ ತಿದ್ದುಪಡಿ ಮಾಡಬಹುದು. ಇದಕ್ಕಾಗಿ ತಾಲೂಕು ಕಚೇರಿಯ ಆಧಾರ್‌ ಕೇಂದ್ರಕ್ಕೆ ಅಲೆದಾಡಬೇಕಿಲ್ಲ. ಆದರೆ ಹೊಸ ನೋಂದಣಿ, ಬೆರಳಚ್ಚು ಬದಲಾವಣೆ ಸೈಬರ್‌ಗಳಲ್ಲಿ ನಡೆಯುವುದಿಲ್ಲ. ಇವುಗಳಿಗೆ ತಾಲೂಕು ಕಚೇರಿ, ಅಂಚೆ ಇಲಾಖೆ, ಬ್ಯಾಂಕ್‌ಗಳಲ್ಲಿ ಇರುವ ಕೇಂದ್ರಗಳಿಗೇ ಹೋಗಬೇಕು.

ವಿಳಂಬ
ಒಂದು ಕಂಪ್ಯೂಟರ್‌ನಲ್ಲಿ 150 ಆಧಾರ್‌ ಪ್ರಕ್ರಿಯೆ ನಡೆಸಲಷ್ಟೇ ಅವಕಾಶ ಇರುವುದು. ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಹೆಚ್ಚು ಸಮಯ ಬೇಕಾಗುತ್ತದೆ. ಮಕ್ಕಳ ಬೆರಳಚ್ಚು ಪ್ರತಿ ಬೆರಳಿನದ್ದೂ 4 ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಸಣ್ಣ ಮಕ್ಕಳಿರುವಾಗ ಬೆರಳಚ್ಚು ನೀಡಿದರೆ ಕೆಲವು ವರ್ಷ ದಾಟಿದ ಬಳಿಕ ನವೀಕರಿಸಬೇಕಾಗುತ್ತದೆ. ಕಾರ್ಮಿಕರು, ಹಿರಿಯರ ಅನೇಕರ ಬೆರಳು ಸವೆದಿರುತ್ತದೆ. ಅರ್ಜಿಯಲ್ಲಿ ಗೊಂದಲ, ಅಸಮರ್ಪಕ ಮಾಹಿತಿ, ಯಂತ್ರ ಬೆರಳು ಗುರುತು ಸ್ವೀಕರಿಸದೇ ಇರುವುದು ಇತ್ಯಾದಿಗಳಿಂದಲೂ ಆಧಾರ್‌ ಪ್ರಕ್ರಿಯೆ ವಿಳಂಬವಾಗುತ್ತದೆ.

ಅಂಚೆ ಇಲಾಖೆ ಸೇವೆ
ಸಾರ್ವಜನಿಕರಿಗೆ ಆಧಾರ್‌ ಸೇವೆಯ ಅಗತ್ಯವನ್ನು ಅರಿತು ದ.ಕ. ಹಾಗೂ ಉಡುಪಿ ಅಂಚೆ ವಿಭಾಗವು ವಿವಿಧಅಂಚೆ ಕಚೇರಿಗಳಲ್ಲಿ ಅ. 6ರಂದು ಆಧಾರ್‌ ಮಹಾ ಅಭಿಯಾನ ಆಯೋಜಿಸಿತ್ತು. ಅವಶ್ಯಬಿದ್ದರೆ ಮತ್ತೆ ಅಭಿಯಾನ ನಡೆಸಲು ಇಲಾಖೆ ಸಿದ್ಧವಿದೆ ಎನ್ನುತ್ತಾರೆ ಕುಂದಾಪುರ ಸಹಾಯಕ ಅಂಚೆ ಅಧೀಕ್ಷಕ ಗಣಪತಿ ಮರ್ಡಿ.

Advertisement

ಶೀಘ್ರ ಅನುಷ್ಠಾನ
ಐದಾರು ಪಂಚಾಯತ್‌ಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ನಡೆಯಲಿದ್ದು ಅನಂತರ ಎಲ್ಲ ಪಂಚಾಯತ್‌ಗಳಲ್ಲಿ ವ್ಯವಸ್ಥೆ ಜಾರಿಯಾಗಲಿದೆ. ಈ ಕುರಿತು ಸರಕಾರದ ಆದೇಶದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು.

ತಾಲೂಕು ಕಚೇರಿ, ಅಂಚೆ ಕಚೇರಿಗಳಲ್ಲಿ ಹಾಗೂ ಅನುಮತಿ ಪಡೆದ ಸೈಬರ್‌ ಸೆಂಟರ್‌, ಖಾಸಗಿ ಸಂಸ್ಥೆಗಳಲ್ಲಿ ಆಧಾರ್‌ ಪ್ರಕ್ರಿಯೆಗೆ ಅನ್‌ಲಾಕ್‌ -5 ಬಳಿಕ ಅನುಮತಿ ನೀಡಲಾಗಿದ್ದು ಎಲ್ಲ ಕಡೆ ಆಧಾರ್‌ ಪ್ರಕ್ರಿಯೆ ನಡೆಯುತ್ತಿದೆ.
– ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next