ಬೆಂಗಳೂರು: ಪರಿಚಿತ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಮಹಿಳಾ ಪೇದೆಯೊಬ್ಬರು ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ಸಂಚಾರ ಠಾಣೆಯೊಂದರಲ್ಲಿ ಪೇದೆಯಾಗಿರುವ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವಿಜಯಪುರ ಜಿಲ್ಲೆಯ ಅಮೀನ್ ಸಾಬ್, ಆತನ ತಾಯಿ ಕಾತು ನಬೀ, ಸಹೋದರಿ ಮುಮ್ತಾಜ್ ಹಾಗೂ ಸಹೋದರ ಬುದ್ದೆಸಾಬ್ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಚೂರಿನ ಸಿಂಧನೂರು ತಾಲೂಕು ಮೂಲದ ಸಂತ್ರಸ್ತೆ ಬೆಂಗಳೂರಿನ ಸಂಚಾರ ಠಾಣೆಯೊಂದರಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2015ರ ನವೆಂಬರ್‌ನಲ್ಲಿ ಪಿಎಸ್‌ಐ ಮತ್ತು ಕೆಎಎಸ್ ಪರೀಕ್ಷೆ ತರಬೇತಿಗಾಗಿ ವಿಜಯಪುರಕ್ಕೆ ತೆರಳಿದ್ದರು. ಈ ವೇಳೆ ಆರೋಪಿಯ ಪರಿಚಯವಾಗಿದ್ದು, ಗ್ರೂಪ್ ಸ್ಟಡಿ ನೆಪದಲ್ಲಿ ಆಗ್ಗಾಗ್ಗೆ ಸಂತ್ರಸ್ತೆಯನ್ನು ಭೇಟಿಯಾಗುತ್ತಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.
ಈ ವೇಳೆ ಸಂತ್ರಸ್ತೆ ಎದುರು ಪ್ರೇಮ ನಿವೇದನೆ ಮಾಡಿಕೊಂಡಿದ್ದ ಆರೋಪಿ, ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ಇಬ್ಬರೂ ಮೊಬೈಲ್‌ನಲ್ಲಿ ನಿತ್ಯ ಮಾತನಾಡುತ್ತಿದ್ದರು. ಆಗ ಸಂತ್ರಸ್ತೆ ಮದುವೆಗೆ ಧರ್ಮ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಆರೋಪಿ, ಮನೆಯವರನ್ನು ಒಪ್ಪಿಸುವ ಭರವಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದರು.
ಸಂತ್ರಸ್ತೆ ಮೇಲೆ ಹಲ್ಲೆ: 2016ರಲ್ಲಿ ಸಂತ್ರಸ್ತೆ ತನ್ನ ಸಹೋದರಿಯ ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ಆರೋಪಿ, ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಹಲ್ಲೆ ನಡೆಸಿದ್ದಾನೆ. ಬಳಿಕ ಯುವತಿ ಕೆಲಸಕ್ಕೆಂದು ವಾಪಸ್ ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನ ಲಾಡ್ಜ್ನಲ್ಲಿದ್ದ ಆರೋಪಿ,
ಬಲವಂತವಾಗಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಅಲ್ಲದೆ, ಆಕೆಯಿಂದಲೇ ಖರ್ಚಿಗೆಂದು ಹಣ ಪಡೆದಿದ್ದಾನೆ. ಇದೀಗ ವಿವಾಹವಾಗುವಂತೆ ಕೇಳಿದರೆ ಜಾತಿ, ಧರ್ಮ ಅಡ್ಡಿಯಾಗುತ್ತಿದೆ ಎಂದು ನಿರಾಕರಿಸುತ್ತಿದ್ದಾನೆ. ಆತನ ಮನೆಯವರು ಕೂಡ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.