ಹೊಸದಿಲ್ಲಿ: ಪ್ರತಿಷ್ಠಿತ ದೇಶಿ ಪಂದ್ಯಾವಳಿ “ರಣಜಿ ಟ್ರೋಫಿ ಕ್ರಿಕೆಟ್’ ಶುಕ್ರವಾರದಿಂದ ಆರಂಭವಾಗಲಿದೆ. ಇದು ರಣಜಿ ಇತಿಹಾಸದ 84ನೇ ಆವೃತ್ತಿ. ಭಾರತ ತಂಡದ ಬಹುತೇಕ ಆಟಗಾರರು ಈ ಬಾರಿ ಕಣಕ್ಕಿಳಿಯುವುದು ಈ ಕೂಟದ ವೈಶಿಷ್ಟé. ಹಾಗೆಯೇ “ತಟಸ್ಥ ಮಾದರಿ’ಯನ್ನು ಕೈಬಿಟ್ಟು ತವರಿನಂಗಳದಲ್ಲಿ ಪಂದ್ಯಗಳನ್ನು ಆಡಿಸುವ ಹಳೆಯ ಪದ್ಧತಿಗೆ ತೆರೆದುಕೊಂಡದ್ದು ಕೂಡ ಈ ಸಲದ ರಣಜಿ ವಿಶೇಷವಾಗಿದೆ.ಒಟ್ಟು 28 ತಂಡಗಳು 4 ವಿಭಾಗಗಳಲ್ಲಿ ಸೆಣಸಲಿವೆ.
ಕರ್ನಾಟಕ “ಎ’ ವಿಭಾಗದಲ್ಲಿದ್ದು, ತನ್ನ ಮೊದಲ ಪಂದ್ಯವನ್ನು ಅ. 14ರಿಂದ ಅಸ್ಸಾಮ್ ವಿರುದ್ಧ ಮೈಸೂರಿನಲ್ಲಿ ಆಡಲಿದೆ. ಅ. 6ರಿಂದ 9ರ ತನಕ ಒಟ್ಟು 12 ಪಂದ್ಯಗಳು ದೇಶದ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ.
ಭಾರತ ಏಕದಿನ ತಂಡದಿಂದ ಬೇರ್ಪಟ್ಟಿರುವ, ಟೆಸ್ಟ್ ಪಂದ್ಯಗಳಿಗಷ್ಟೇ ಮೀಸಲಾಗಿರುವ ಬಹುತೇಕ ಆಟಗಾರರು ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲಿ ಸ್ವಿನ್‌ದ್ವಯರಾದ ಆರ್. ಅಶ್ವಿನ್-ರವೀಂದ್ರ ಜಡೇಜ ಅವರದು ಪ್ರಮುಖ ಹೆಸರು. ಇವರಲ್ಲಿ ಅಶ್ವಿನ್ ತಮಿಳುನಾಡನ್ನು, ಜಡೇಜ ಸೌರಾಷ್ಟ್ರವನ್ನು ಪ್ರತಿನಿಧಿಸುವರು. ಆದರೆ ಕಾರಣಾಂತರಗಳಿಂದ ಜಡೇಜ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಟೆಸ್ಟ್ ಆರಂಭಕಾರ ಮುರಳಿ ವಿಜಯ್ ಕೂಡ ತಮಿಳುನಾಡು ಪರ ಆಡಲಿದ್ದಾರೆ.
ಸೌರಾಷ್ಟ್ರ ತಂಡವನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮುನ್ನಡೆಸಲಿದ್ದಾರೆ. ಕರ್ನಾಟಕವನ್ನು ಬಿಟ್ಟು ಹೋದ ರಾಬಿನ್ ಉತ್ತಪ್ಪ ಕೂಡ ಈ ತಂಡದಲ್ಲಿದ್ದಾರೆ. ಸೌರಾಷ್ಟ್ರದ ಮೊದಲ ಎದುರಾಳಿ ಹರಿಯಾಣ. ಈ ಪಂದ್ಯ ರೋಹrಕ್‌ನಲ್ಲಿ ನಡೆಯಲಿದೆ.
ಪೇಸ್ ಬೌಲರ್ ಮೊಹಮ್ಮದ್ ಶಮಿ, ಟೆಸ್ಟ್ ಕೀಪರ್ ವೃದ್ಧಿಮಾನ್ ಸಾಹಾ ತವರು ತಂಡವಾದ ಬಂಗಾಲವನ್ನು ಪ್ರತಿನಿಧಿಸಲಿದ್ದಾರೆ. ಭಾರತ ತಂಡದಿಂದ ಬೇರ್ಪಟ್ಟಿರುವ ಗೌತಮ್ ಗಂಭೀರ್, ಸುರೇಶ್ ರೈನಾ, ಅಮಿತ್ ಮಿಶ್ರಾ, ಇಶಾಂತ್ ಶರ್ಮ ಕೂಡ ರಣಜಿ ಆಡಲಿದ್ದಾರೆ. ಇಶಾಂತ್ ಅವರನ್ನು ದಿಲ್ಲಿ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಅಂಕ ಪದ್ಧತಿ ಹೀಗಿದೆ…
ಇನ್ನಿಂಗ್ಸ್ ಅಂತರದಿಂದ ಅಥವಾ 10 ವಿಕೆಟ್‌ಗಳಿಂದ ಗೆದ್ದರೆ 7 ಅಂಕ, ಇತರ ಗೆಲುವಿಗೆ 6 ಅಂಕ, ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದರೆ 3 ಅಂಕ, ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಡ್ರಾ ಮಾಡಿಕೊಂಡರೆ ಒಂದು ಅಂಕ ನೀಡಲಾಗುವುದು.