ಮುಂಬಯಿ: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (India captain Rohit Sharma) ಕಳಪೆ ಫಾರ್ಮ್‌ನಲ್ಲಿದ್ದಾರೆ. ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಲು ಹಿಟ್ ಮ್ಯಾನ್ ದೇಶಿಯ ಟೂರ್ನಿಯತ್ತ ಮುಖಮಾಡಲಿದ್ದಾರೆ ಎಂದು ವರದಿಯಾಗಿದೆ.
ಸ್ಫೋಟಕ ಆಟಕ್ಕೆ ಹೆಸರಾಗಿರುವ ರೋಹಿತ್ ಶರ್ಮಾ ಕಳೆದ ಕೆಲ ಸಮಯದಿಂದ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇತ್ತೀಚೆಗೆ ಮುಕ್ತಾಯ ಕಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5 ಇನಿಂಗ್ಸ್ ನಲ್ಲಿ ರೋಹಿತ್ ಕಲೆಹಾಕಿದ್ದು ಕೇವಲ 31 ರನ್ಗಳು ಮಾತ್ರ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ತಂಡದ ಹಿರಿಯ ಆಟಗಾರರು ಲಯ ಕಂಡುಕೊಳ್ಳಲು ದೇಶೀಯ ಟೂರ್ನಿಯಲ್ಲಿ ಆಡಬೇಕೆಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ (Gautam Gambhir) ಇತ್ತೀಚೆಗೆ ಹೇಳಿದ್ದರು. ಸುನೀಲ್ ಗಾವಸ್ಕರ್ ಕೂಡ ಇದೇ ಮಾತನ್ನು ಹೇಳಿದ್ದರು.
ಆಸ್ಟ್ರೇಲಿಯಾದಿಂದ ಹಿಂದಿರುಗಿದ ನಂತರ ರೋಹಿತ್ ಶರ್ಮಾ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ರೋಹಿತ್ ಮತ್ತು ಕೋಚ್ ಗೌತಮ್ ಗಂಭೀರ್ ಇಬ್ಬರಿಗೂ ಟೆಸ್ಟ್ ಸರಣಿಯಲ್ಲಿ ತಂಡದ ಪ್ರದರ್ಶನಗಳ ಬಗ್ಗೆ ಕೇಳಲಾಗಿದ್ದು, ತಂಡದ ಪ್ರದರ್ಶನವನ್ನು ಉತ್ತಮಗೊಳಿಸುವ ಮಾರ್ಗದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಲು ಮುಂಬೈ ರಣಜಿ (Ranji Trophy) ತಂಡದೊಂದಿಗೆ ಅಭ್ಯಾಸ ನಡೆಸಲು ಆಸಕ್ತಿ ತೋರಿಸಿದ್ದಾರೆ. ಇದಕ್ಕಾಗಿ ರೋಹಿತ್ ಮುಖ್ಯ ಕೋಚ್ ಓಂಕಾರ್ ಸಲವಿ ಅವರನ್ನು ಭೇಟಿಯಾಗಿ ಅಭ್ಯಾಸ ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮುಂಬೈ ರಣಜಿ ತಂಡದೊಂದಿಗೆ ರೋಹಿತ್ ಅಭ್ಯಾಸ ನಡೆಸುವ ಬಗ್ಗೆ ಹಿಟ್ ಮ್ಯಾನ್ ಮುಂಬೈ ಕ್ರಿಕೆಟ್ ಅಸೋಷಿಯೇಷನ್ನಿಂದ ಅನುಮತಿ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಕಳಪೆ ಫಾರ್ಮ್‌ನಲ್ಲಿರುವ ರೋಹಿತ್ ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸ ನಡೆಸಲಿದ್ದಾರೆ. ಆದರೆ ಅವರು ಅಭ್ಯಾಸದ ಜತೆಗೆ ಮುಂಬೈ ರಣಜಿ ತಂಡದ ಭಾಗವಾಗಿ ಪಂದ್ಯವನ್ನು ಆಡುತ್ತಾರೋ ಇಲ್ವೋ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯದ ಮಾಹಿತಿ ಪ್ರಕಾರ ರೋಹಿತ್ ಅಭ್ಯಾಸದಲ್ಲಿ ಮಾತ್ರ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರಣಜಿ ಟ್ರೋಫಿಯ ಮುಂದಿನ ಸುತ್ತು ಜನವರಿ 23 ರಿಂದ ಪ್ರಾರಂಭವಾಗಲಿದೆ. ಮುಂಬೈ ಮುಂದಿನ ಪಂದ್ಯವನ್ನು ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಲಿದೆ.
ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತ ಇಂಗ್ಲೆಂಡ್ ವಿರುದ್ಧ 5 ಟಿ-20 ಹಾಗೂ 3 ಏಕದಿನ ಸರಣಿಯನ್ನು ಆಡಲಿದೆ. ಏಕದಿನ ಸರಣಿಯಲ್ಲಿ ರೋಹಿತ್, ಕೊಹ್ಲಿ ಇಬ್ಬರು ಕಾಣಿಸಿಕೊಳ್ಳಲಿದ್ದಾರೆ.