Advertisement

Ranji Trophy; ವಿದರ್ಭಕ್ಕೆ 538 ರನ್ನುಗಳ ಕಠಿನ ಗುರಿ: ಗೆಲುವಿನ ಕ್ಷಣಗಣನೆಯಲ್ಲಿ ಮುಂಬಯಿ

12:00 AM Mar 13, 2024 | Team Udayavani |

ಮುಂಬಯಿ: ಯುವ ಬ್ಯಾಟರ್‌ ಮುಶೀರ್‌ ಖಾನ್‌ ಅವರ ಶತಕ, ಶ್ರೇಯಸ್‌ ಅಯ್ಯರ್‌ ಮತ್ತು ಅಜಿಂಕ್ಯ ರಹಾನೆ ಅವರ ಅಮೋಘ ಆಟದ ನೆರವಿನಿಂದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರನ್‌ ರಾಶಿ ಪೇರಿಸಿರುವ ಮುಂಬಯಿ ಪಡೆ ರಣಜಿ ಟ್ರೋಫಿ ಗೆಲುವಿನ ಕ್ಷಣಗಣನೆ ಆರಂಭಿಸಿದೆ.

Advertisement

ವಿದರ್ಭಕ್ಕೆ 538 ರನ್ನುಗಳ ಕಠಿನ ಗುರಿ ನೀಡಿದ್ದು, ಇದನ್ನು ತಲುಪುವುದು ಅಸಾಧ್ಯವೇ ಆಗಿರುವುದರಿಂದ ಮುಂಬಯಿಯ ರಣಜಿ ಗೆಲುವಿನ ದಾಖಲೆ 42ಕ್ಕೆ ವಿಸ್ತರಿಸಲ್ಪಡುವುದರಲ್ಲಿ ಅನುಮಾನವೇ ಇಲ್ಲ.

ಚೇಸಿಂಗ್‌ ಆರಂಭಿಸಿರುವ ವಿದರ್ಭ ವಿಕೆಟ್‌ ನಷ್ಟವಿಲ್ಲದೆ 10 ರನ್‌ ಮಾಡಿದೆ. ಧ್ರುವ ಶೋರಿ 7, ಅಥರ್ವ ತೈಡೆ 3 ರನ್‌ ಮಾಡಿ ಆಡುತ್ತಿದ್ದಾರೆ. ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದೆ.

ಮುಂಬಯಿ ಬ್ಯಾಟಿಂಗ್‌ ಅಭ್ಯಾಸ
ಮಂಗಳವಾರದ ಆಟವನ್ನು ಮುಂಬಯಿ ತನ್ನ ಬ್ಯಾಟಿಂಗ್‌ ಅಭ್ಯಾಸಕ್ಕೆ ಬಳಸಿಕೊಂಡಿತು. 2ಕ್ಕೆ 141 ರನ್‌ ಮಾಡಿದಲ್ಲಿಂದ ಆಟ ಮುಂದುವರಿಸಿ 418ಕ್ಕೆ ಆಲೌಟ್‌ ಆಯಿತು. ವನ್‌ಡೌನ್‌ ಆಟಗಾರ, ಸಫ‌ìರಾಜ್‌ ಖಾನ್‌ ಅವರ ಸಹೋದರ ಮುಶೀರ್‌ ಖಾನ್‌ 136 ರನ್‌, ಮೊದಲ ಇನ್ನಿಂಗ್ಸ್‌ನಲ್ಲಿ ಅಗ್ಗಕ್ಕೆ ಔಟಾಗಿದ್ದ ನಾಯಕ ಅಜಿಂಕ್ಯ ರಹಾನೆ 73, ಶ್ರೇಯಸ್‌ ಅಯ್ಯರ್‌ 85, ಶಮ್ಸ್‌ ಮುಲಾನಿ ಅಜೇಯ 50 ರನ್‌ ಮಾಡಿದರು.

ರಣಜಿ ನಾಕೌಟ್‌ ಪಂದ್ಯಗಳಲ್ಲಿ 203 ಹಾಗೂ 55 ರನ್‌ ಬಾರಿಸಿ ಮಿಂಚಿದ್ದ ಮುಶೀರ್‌ ಖಾನ್‌ ಫೈನಲ್‌ ಕಾಳಗದಲ್ಲಿ 326 ಎಸೆತ ನಿಭಾಯಿಸಿ 136 ರನ್‌ ಹೊಡೆದರು. ಬರೋಬ್ಬರಿ 474 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡರು. ಅವರ ಈ ನಿಧಾನ ಗತಿಯ, ಅಷ್ಟೇ ಜವಾಬ್ದಾರಿಯುತ ಆಟದಲ್ಲಿ ಹತ್ತೇ ಬೌಂಡರಿ ಒಳಗೊಂಡಿತ್ತು.

Advertisement

58 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಅಜಿಂಕ್ಯ ರಹಾನೆ 143 ಎಸೆತಗಳಿಂದ 73 ರನ್‌ ಕೊಡುಗೆ ಸಲ್ಲಿಸಿದರು (5 ಬೌಂಡರಿ, 1 ಸಿಕ್ಸರ್‌). ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಶ್ರೇಯಸ್‌ ಅಯ್ಯರ್‌ ಆಟ ಹೆಚ್ಚು ಆಕ್ರಮಣಕಾರಿ ಆಗಿತ್ತು. ಅವರು ಐದೇ ರನ್ನಿನಿಂದ ಶತಕ ವಂಚಿತರಾದರು. 95 ರನ್‌ ಕೇವಲ 111 ಎಸೆತಗಳಿಂದ ಬಂತು. ಸಿಡಿಸಿದ್ದು 10 ಫೋರ್‌ ಹಾಗೂ 3 ಸಿಕ್ಸರ್‌. ಶಮ್ಸ್‌ ಮುಲಾನಿ 85 ಎಸೆತ ಎದುರಿಸಿ 50 ರನ್‌ ಮಾಡಿದರು (6 ಬೌಂಡರಿ).

ಶತಕದ ಜತೆಯಾಟಗಳು
ಮುಶೀರ್‌-ರಹಾನೆ ಜತೆಯಾ ಟದಲ್ಲಿ 3ನೇ ವಿಕೆಟಿಗೆ 130 ರನ್‌ ಒಟ್ಟುಗೂಡಿತು. ಬಳಿಕ ಅಯ್ಯರ್‌ ಅವರನ್ನು ಕೂಡಿಕೊಂಡ ಮುಶೀರ್‌ 4ನೇ ವಿಕೆಟಿಗೆ 168 ರನ್‌ ರಾಶಿ ಹಾಕಿದರು. 7ನೇ ಓವರ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಮುಶೀರ್‌ 110ನೇ ಓವರ್‌ ತನಕ ಕ್ರೀಸ್‌ನಲ್ಲಿ ಉಳಿದರು. ಮೊದಲ ಸರದಿಯಲ್ಲಿ 75 ರನ್‌ ಹೊಡೆದು ಮುಂಬಯಿಯ ಟಾಪ್‌ ಸ್ಕೋರರ್‌ ಆಗಿದ್ದ ಶಾರ್ದೂಲ್ ಠಾಕೂರ್‌ ಇಲ್ಲಿ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದರು.

ವಿದರ್ಭ ಪರ ಹರ್ಷ ದುಬೆ 5 ವಿಕೆಟ್‌ ಕೆಡವಿದರು. ಆದರೆ 144 ರನ್‌ ನೀಡಿ ದುಬಾರಿಯಾದರು. ಯಶ್‌ ಠಾಕೂರ್‌ 3 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-224 ಮತ್ತು 418 (ಮುಶೀರ್‌ ಖಾನ್‌ 136, ಶ್ರೇಯಸ್‌ ಅಯ್ಯರ್‌ 95, ಅಜಿಂಕ್ಯ ರಹಾನೆ 73, ಶಮ್ಸ್‌ ಮುಲಾನಿ ಔಟಾಗದೆ 50, ಹರ್ಷ ದುಬೆ 144ಕ್ಕೆ 5, ಯಶ್‌ ಠಾಕೂರ್‌ 79ಕ್ಕೆ 3). ವಿದರ್ಭ-105 ಮತ್ತು ವಿಕೆಟ್‌ ನಷ್ಟವಿಲ್ಲದೆ 10.

ಸಚಿನ್‌ ಎದುರಲ್ಲೇ ಸಚಿನ್‌
ದಾಖಲೆ ಮುರಿದ ಮುಶೀರ್‌!
ರಣಜಿ ಫೈನಲ್‌ ಪಂದ್ಯದ 3ನೇ ದಿನದಾಟಕ್ಕೆ ಇಬ್ಬರು ಮುಖ್ಯ ಅತಿಥಿಗಳು ಸಾಕ್ಷಿಯಾದರು. ಇವರೆಂದರೆ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ ಮತ್ತು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ.

ಈ ಸಂದರ್ಭದಲ್ಲಿ ಸಚಿನ್‌ ತೆಂಡುಲ್ಕರ್‌ ಸಮ್ಮುಖದಲ್ಲೇ ಅವರ 29 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುಶೀರ್‌ ಖಾನ್‌ ಮುರಿದದ್ದು ವಿಶೇಷವಾಗಿತ್ತು. ರಣಜಿ ಫೈನಲ್‌ನಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ದಾಖಲೆಯನ್ನು ಮುಶೀರ್‌ ತಮ್ಮ ಹೆಸರಿಗೆ ಬರೆಸಿಕೊಂಡರು. ವಿದರ್ಭ ವಿರುದ್ಧದ ಮಂಗಳವಾರದ ಆಟದಲ್ಲಿ ಸೆಂಚುರಿ ಪೂರೈಸುವಾಗ ಮುಶೀರ್‌ ವಯಸ್ಸು 19 ವರ್ಷ, 14 ದಿನ.

ಸಚಿನ್‌ ತೆಂಡುಲ್ಕರ್‌ ತಮ್ಮ 21ನೇ ವರ್ಷದಲ್ಲಿ ಈ ದಾಖಲೆ ಬರೆದಿದ್ದರು. 1994-95ರ ಪಂಜಾಬ್‌ ಎದುರಿನ ರಣಜಿ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 140 ರನ್‌ ಮಾಡಿದ್ದರು. ಈ ಪಂದ್ಯ ಕೂಡ ವಾಂಖೇಡೆ ಸ್ಟೇಡಿಯಂನಲ್ಲೇ ನಡೆದಿತ್ತು.

“ಸಚಿನ್‌ ಸರ್‌ ಅವರನ್ನು ಬಿಗ್‌ ಸ್ಕ್ರೀನ್‌ನಲ್ಲಿ ಕಂಡು ಬಹಳ ಖುಷಿಯಾಯಿತು. 60 ರನ್‌ ಮಾಡಿದ್ದಾಗ ಅವರು ಆಗಮಿಸಿದ ವಿಷಯ ತಿಳಿಯಿತು. ಅವರೇ ನನ್ನ ಆಟಕ್ಕೆ ಸ್ಫೂರ್ತಿಯಾದರು’ ಎಂಬುದಾಗಿ ಮುಶೀರ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next