Advertisement

ರಣಜಿ ಸೆಮಿಫೈನಲ್‌ಗೆ ವೇದಿಕೆ ಸಜ್ಜು​​​​​​​

12:30 AM Jan 20, 2019 | Team Udayavani |

ಬೆಂಗಳೂರು: ಪ್ರಸಕ್ತ ಋತುವಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ ಸಮರಕ್ಕೆ ವೇದಿಕೆ ಸಜ್ಜುಗೊಂಡಿದೆ. ಮೊದಲ ಸೆಮಿಫೈನಲ್‌ನಲ್ಲಿ ವಿದರ್ಭ-ಕೇರಳ ಮುಖಾಮುಖೀಯಾಗಲಿದ್ದು, ಇನ್ನೊಂದು ಉಪಾಂತ್ಯ ಕರ್ನಾಟಕ-ಸೌರಾಷ್ಟ್ರ ನಡುವೆ ನಡೆಯಲಿದೆ. ಎರಡೂ ಪಂದ್ಯಗಳು ಜ. 24ರಿಂದ ಆರಂಭವಾಗಲಿವೆ. ತಾಣಗಳನ್ನು ಶೀಘ್ರವೇ ನಿರ್ಧರಿಸಲಾಗುವುದು.

Advertisement

ತವರಿನ ಎಂ. ಚಿನ್ನಸ್ವಾಮಿ ಅಂಗಳದಲ್ಲಿ ರಾಜಸ್ಥಾನವನ್ನು ಮಣಿಸಿದ ಕರ್ನಾಟಕ ಶುಕ್ರವಾರವೇ ಸೆಮಿಫೈನಲ್‌ಗೆ ನೆಗೆದಿತ್ತು. ಇದಕ್ಕೂ ಮುನ್ನ ವಯನಾಡ್‌ನ‌ಲ್ಲಿ ಬಲಿಷ್ಠ ಗುಜರಾತ್‌ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಿದ ಕೇರಳ ಮೊದಲ ಸಲ ರಣಜಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿ ಇತಿಹಾಸ ನಿರ್ಮಿಸಿತ್ತು. ಶನಿವಾರ ವಿದರ್ಭ ಮತ್ತು ಸೌರಾಷ್ಟ್ರ ತಂಡಗಳು ಜಯಭೇರಿ ಮೊಳಗಿಸಿ ಮುನ್ನಡೆ ಸಾಧಿಸಿದವು.

ಸೌರಾಷ್ಟ್ರ ಭರ್ಜರಿ ಚೇಸಿಂಗ್‌
ಲಕ್ನೊ:
ಆತಿಥೇಯ ಉತ್ತರಪ್ರದೇಶ ನೀಡಿದ 372 ರನ್ನುಗಳ ಗೆಲುವಿನ ಗುರಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಸೌರಾಷ್ಟ್ರ 6 ವಿಕೆಟ್‌ಗಳ ಜಯಭೇರಿ ಮೊಳಗಿಸಿತು. 4ನೇ ದಿನದ ಅಂತ್ಯಕ್ಕೆ 2 ವಿಕೆಟಿಗೆ 195 ರನ್‌ ಗಳಿಸಿದಾಗಲೇ ಸೌರಾಷ್ಟ್ರ ಸಿಡಿದು ನಿಲ್ಲುವ ಸೂಚನೆ ಲಭಿಸಿತ್ತು. ಇದು ನಿಜವಾಯಿತು.

ಆರಂಭಕಾರ ಹಾರ್ವಿಕ್‌ ದೇಸಾಯಿ 116 ರನ್‌ ಬಾರಿಸಿದರೆ, ಜತೆಗಾರ ಸ್ನೆಲ್‌ ಪಟೇಲ್‌ 72 ರನ್‌ ಹೊಡೆದರು. ಮಧ್ಯಮ ಕ್ರಮಾಂಕದ ಆಟಗಾರರಾದ ವಿಶ್ವರಾಜ್‌ ಜಡೇಜ 35, ಕಮಲೇಶ್‌ ಮಕ್ವಾನಾ 7 ರನ್‌ ಮಾಡಿ ನಿರ್ಗಮಿಸಿದರು.ಮುಂದಿನದು ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಮತ್ತು ಶೆಲ್ಡನ್‌ ಜಾಕ್ಸನ್‌ ಅವರ ಬ್ಯಾಟಿಂಗ್‌ ಪರಾಕ್ರಮ. ಮುರಿಯದ 5ನೇ ವಿಕೆಟಿಗೆ 136 ರನ್‌ ಪೇರಿಸುವ ಮೂಲಕ ತಂಡದ ಗೆಲುವನ್ನು ಸಾರಿದರು. ಆಗ ಪೂಜಾರ 67 ರನ್‌ (110 ಎಸೆತ, 9 ಬೌಂಡರಿ) ಮತ್ತು ಜಾಕ್ಸನ್‌ 73 ರನ್‌ ಮಾಡಿ (109 ಎಸೆತ, 11 ಬೌಂಡರಿ, 1 ಸಿಕ್ಸರ್‌) ಅಜೇಯರಾಗಿ ಉಳಿದಿದ್ದರು.

ಸಂಕ್ಷಿಪ್ತ ಸ್ಕೋರ್‌: ಉತ್ತರಪ್ರದೇಶ-385 ಮತ್ತು 194. ಸೌರಾಷ್ಟ್ರ-208 ಮತ್ತು 4 ವಿಕೆಟಿಗೆ 372. ಪಂದ್ಯಶ್ರೇಷ್ಠ: ಹಾರ್ವಿಕ್‌ ದೇಸಾಯಿ.

Advertisement

ವಿದರ್ಭ ಇನ್ನಿಂಗ್ಸ್‌ ವಿಕ್ಟರಿ
ನಾಗಪುರ
: ನಿರೀಕ್ಷೆಯಂತೆ ಹಾಲಿ ಚಾಂಪಿಯನ್‌ ವಿದರ್ಭ ದುರ್ಬಲ ಉತ್ತರಖಂಡ್‌ ವಿರುದ್ಧ ಇನ್ನಿಂಗ್ಸ್‌ ಜಯಭೇರಿ ಮೊಳಗಿಸಿತು. ಉತ್ತರಖಂಡ್‌ನ‌ 355ಕ್ಕೆ ಉತ್ತರವಾಗಿ ವಿದರ್ಭ 629 ರನ್‌ ಪೇರಿಸಿತ್ತು. ವಾಸಿಮ್‌ ಜಾಫ‌ರ್‌ ಅಮೋಘ ದ್ವಿಶತಕ ಬಾರಿಸಿದರೆ (206), ಸಂಜಯ್‌ ರಾಮಸ್ವಾಮಿ (141) ಮತ್ತು ಆದಿತ್ಯ ಸರ್ವಟೆ (102) ಶತಕ ಹೊಡೆದು ಮಿಂಚಿದ್ದರು.

ಭಾರೀ ಹಿನ್ನಡೆಗೆ ಸಿಲುಕಿದ ಉತ್ತರಖಂಡ್‌ ದ್ವಿತೀಯ ಸರದಿಯಲ್ಲಿ 159 ರನ್ನಿಗೆ ಕುಸಿದು ಇನ್ನಿಂಗ್ಸ್‌ ಹಾಗೂ 115 ರನ್ನುಗಳ ಸೋಲಿಗೆ ತುತ್ತಾಯಿತು. ಆದಿತ್ಯ ಸರ್ವಟೆ ಮತ್ತು ಉಮೇಶ್‌ ಯಾದವ್‌ ತಲಾ 5 ವಿಕೆಟ್‌ ಕಿತ್ತು ಉತ್ತರಖಂಡ್‌ ತತ್ತರಿಸುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಉತ್ತರಖಂಡ್‌-355 ಮತ್ತು 159. ವಿದರ್ಭ-629. ಪಂದ್ಯಶ್ರೇಷ್ಠ: ಉಮೇಶ್‌ ಯಾದವ್‌.

Advertisement

Udayavani is now on Telegram. Click here to join our channel and stay updated with the latest news.

Next