ಚೆನ್ನೈ“ಎಲೈಟ್ ಸಿ’ ವಿಭಾಗದ ರಣಜಿ ಮುಖಾಮುಖಿಯ ದ್ವಿತೀಯ ದಿನದಾಟದಲ್ಲಿ ರೈಲ್ವೇಸ್ ತಂಡ ಕರ್ನಾಟಕಕ್ಕೆ ತಿರುಗೇಟು ನೀಡಿದೆ.
ಕರ್ನಾಟಕದ 481 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ 3 ವಿಕೆಟಿಗೆ 213 ರನ್ ಗಳಿಸಿದೆ.
ಕರ್ನಾಟಕ ಮೊದಲ ದಿನ 5 ವಿಕೆಟಿಗೆ 392 ರನ್ ಪೇರಿಸಿ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಶುಕ್ರವಾರದ ಆಟ ಮುಂದುವರಿಸಿ 89 ರನ್ ಅಂತರದಲ್ಲಿ ಉಳಿದ ಐದೂ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಧ್ಯಮ ವೇಗಿ ಯುವ್ರಾಜ್ ಸಿಂಗ್ 93 ರನ್ ವೆಚ್ಚದಲ್ಲಿ 5 ವಿಕೆಟ್ ಉಡಾಯಿಸಿ ಕರ್ನಾಟಕವನ್ನು ಕಾಡಿದರು.
140 ರನ್ ಮಾಡಿ ಆಡುತ್ತಿದ್ದ ಕೆ. ಸಿದ್ಧಾರ್ಥ್ ಈ ಮೊತ್ತಕ್ಕೆ ಆರೇ ರನ್ ಸೇರಿಸಿ ವಾಪಸಾದರು. 250 ಎಸೆತ ಎದುರಿಸಿದ ಸಿದ್ಧಾರ್ಥ್ 18 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ದ್ವಿತೀಯ ದಿನದಾಟದ ಆಕರ್ಷಣೆ ಎನಿಸಿತು. ಅವರು 32 ಎಸೆತಗಳಿಂದ 52 ರನ್ ಬಾರಿಸಿದರು. 4 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಇದು ಒಳಗೊಂಡಿತ್ತು.
ರೈಲ್ವೇಸ್ ಪರ ಓಪನರ್‌ಗಳಾದ ಮೃಣಾಲ್ ದೇವಧರ್ (56) ಮತ್ತು ವಿವೇಕ್ ಸಿಂಗ್ (59) 110 ರನ್ ಒಟ್ಟುಗೂಡಿಸಿ ಭದ್ರ ಬುನಾದಿ ನಿರ್ಮಿಸಿದರು. ಅರಿಂದಮ್ ಘೋಷ್ 78 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರೂ ವಿಕೆಟ್ ಕೆ. ಗೌತಮ್ ಪಾಲಾಯಿತು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-481 (ಪಾಂಡೆ 156, ಸಿದ್ಧಾರ್ಥ್ 146, ಗೌತಮ್ 52, ಯುವ್ರಾಜ್ 93ಕ್ಕೆ 5). ರೈಲ್ವೇಸ್-3 ವಿಕೆಟಿಗೆ 213 (ಅರಿಂದಮ್ ಬ್ಯಾಟಿಂಗ್ 78, ವಿವೇಕ್ 59, ದೇವಧರ್ 56, ಗೌತಮ್ 71ಕ್ಕೆ 3).