Advertisement

ರಣಜಿ ಟ್ರೋಫಿ ಕ್ರಿಕೆಟ್‌: ಗೆಲುವಿನ ಖಾತೆ ತೆರೆದ ಕರ್ನಾಟಕ

11:24 PM Feb 27, 2022 | Team Udayavani |

ಚೆನ್ನೈ: ಜಮ್ಮು ಕಾಶ್ಮೀರವನ್ನು 117 ರನ್ನುಗಳಿಂದ ಮಣಿಸಿದ ಕರ್ನಾಟಕ 2022ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

Advertisement

ಒಟ್ಟು 9 ಅಂಕಗಳೊಂದಿಗೆ “ಸಿ’ ವಿಭಾಗದ ಅಗ್ರಸ್ಥಾನ ಅಲಂಕರಿಸಿದೆ. ಗೆಲುವಿಗೆ 508 ರನ್ನುಗಳ ಕಠಿನ ಗುರಿ ಪಡೆದ ಜಮ್ಮು ಕಾಶ್ಮೀರ, ಪಂದ್ಯದ ಅಂತಿಮ ದಿನವಾದ ರವಿವಾರ 390ಕ್ಕೆ ಆಲೌಟ್‌ ಆಯಿತು.

ಕಾಶ್ಮೀರ ಕಪ್ತಾನನ ಶತಕ
ನಾಯಕ ಇಯಾನ್‌ ದೇವ್‌ ಸಿಂಗ್‌ ಅಮೋಘ ಹೋರಾಟವೊಂದನ್ನು ನಡೆಸಿ 110 ರನ್‌ ಬಾರಿಸಿದರು (118 ಎಸೆತ, 15 ಬೌಂಡರಿ, 2 ಸಿಕ್ಸರ್‌). ಅಬ್ದುಲ್‌ ಸಮದ್‌ ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿ 78 ಎಸೆತಗಳಿಂದ 70 ರನ್‌ ಹೊಡೆದರು. ಇದು 5 ಸಿಕ್ಸರ್‌, 6 ಬೌಂಡರಿಗಳನ್ನು ಒಳಗೊಂಡಿತ್ತು. ಸಿಂಗ್‌-ಸಮದ್‌ 5ನೇ ವಿಕೆಟಿಗೆ 143 ರನ್‌ ಪೇರಿಸಿ ಅಪಾಯಕಾರಿಯಾಗಿ ಗೋಚರಿಸಿದರು.

ಕೊನೆಯಲ್ಲಿ ಪರ್ವೇಜ್‌ ರಸೂಲ್‌ (46) ಮತ್ತು ಅಬಿದ್‌ ಮುಷ್ತಾಕ್‌ (43) ಕೂಡ ಹೋರಾಟ ನಡೆಸಿದರು. ಆದರೆ ಟಾರ್ಗೆಟ್‌ ದೊಡ್ಡದಿದ್ದುದರಿಂದ ಜಮ್ಮು ಕಾಶ್ಮೀರದ ಆಟ ನಡೆಯಲಿಲ್ಲ.

ದುಬಾರಿಯಾದ ಸ್ಪಿನ್ನರ್
ಕರ್ನಾಟಕದ ಸ್ಪಿನ್ನರ್‌ಗಳಾದ ಕೆ. ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಬಹಳ ದುಬಾರಿಯಾದರು. ಗೋಪಾಲ್‌ 4 ವಿಕೆಟ್‌ ಕೆಡವಿದರೂ ಇದಕ್ಕೆ 155 ರನ್‌ ಬಿಟ್ಟುಕೊಟ್ಟರು. ಗೌತಮ್‌ 122 ರನ್‌ ವೆಚ್ಚದಲ್ಲಿ ಇಬ್ಬರನ್ನು ಪೆವಿಲಿಯನ್ನಿಗೆ ಕಳುಹಿಸಿದರು. ಹೆಚ್ಚು ಪರಿಣಾಮಕಾರಿ ದಾಳಿ ಸಂಘಟಿಸಿದವರು ಪ್ರಸಿದ್ಧ್ ಕೃಷ್ಣ. ಅವರು 59 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು.

Advertisement

ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಪುದುಚೇರಿ ವಿರುದ್ಧ ಆಡಲಿದೆ. ಮಾ. 3ರಿಂದ 6ರ ತನಕ ಈ ಪಂದ್ಯ ನಡೆಯಲಿದೆ. ಜಮ್ಮು ಕಾಶ್ಮೀರ ತನ್ನ ಮೊದಲ ಪಂದ್ಯದಲ್ಲಿ ಪುದುಚೇರಿಯನ್ನು 8 ವಿಕೆಟ್‌ಗಳಿಂದ ಮಣಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-302 ಮತ್ತು 3 ವಿಕೆಟಿಗೆ 298 ಡಿಕ್ಲೇರ್‌. ಜಮ್ಮು ಕಾಶ್ಮೀರ-93 ಮತ್ತು 390 (ಇಯಾನ್‌ ದೇವ್‌ ಸಿಂಗ್‌ 110, ಸಮದ್‌ 70, ರಶೀದ್‌ 65, ರಸೂಲ್‌ 46, ಮುಷ್ತಾಕ್‌ 43, ಪ್ರಸಿದ್ಧ್ ಕೃಷ್ಣ 59ಕ್ಕೆ 4, ಶ್ರೇಯಸ್‌ ಗೋಪಾಲ್‌ 155ಕ್ಕೆ 4).
ಪಂದ್ಯಶ್ರೇಷ್ಠ: ಕರುಣ್‌ ನಾಯರ್‌.

ಇದನ್ನೂ ಓದಿ:ಎಫ್ಐಎಚ್‌ ಪ್ರೊ ಲೀಗ್‌ ಹಾಕಿ: ಸ್ಪೇನ್‌ ವಿರುದ್ಧ ಅಮೋಘ ಜಯ

ಗೋವಾವನ್ನು ಮಣಿಸಿದ ಮುಂಬಯಿ
ಅಹ್ಮದಾಬಾದ್‌: “ಡಿ’ ವಿಭಾಗದ ರಣಜಿ ಪಂದ್ಯದಲ್ಲಿ ಗೋವಾ ವಿರುದ್ಧ 164 ರನ್ನುಗಳ ಹಿನ್ನಡೆ ಕಂಡ ಹೊರತಾಗಿಯೂ ಮುಂಬಯಿ 119 ರನ್ನುಗಳ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ. 232 ರನ್‌ ಗುರಿ ಪಡೆದ ಗೋವಾ, ಕೊನೆಯ ದಿನದಾಟದಲ್ಲಿ 112ಕ್ಕೆ ಕುಸಿಯಿತು.

ಮುಂಬಯಿ ತನ್ನ ದ್ವಿತೀಯ ಸರದಿಯಲ್ಲಿ 9ಕ್ಕೆ 395 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತು. ತನುಷ್‌ ಕೋಟ್ಯಾನ್‌ ಅಮೋಘ ಆಲ್‌ರೌಂಡ್‌ ಪ್ರದರ್ಶನ ನೀಡಿದರು; ಎರಡೇ ರನ್ನಿನಿಂದ ಶತಕ ವಂಚಿತರಾದರು (163 ಎಸೆತ, 98 ರನ್‌, 8 ಬೌಂಡರಿ, 1 ಸಿಕ್ಸರ್‌). ಶಮ್ಸ್‌ ಮುಲಾನಿ 50, ಟೆಸ್ಟ್‌ ತಂಡದಿಂದ ಬೇರ್ಪಟ್ಟಿರುವ ಅಜಿಂಕ್ಯ ರಹಾನೆ 56 ರನ್‌ ಮಾಡಿದರು.

ಬಳಿಕ ಶಮ್ಸ್‌ ಮುಲಾನಿ (60ಕ್ಕೆ 5), ತನುಷ್‌ ಕೋಟ್ಯಾನ್‌ (29ಕ್ಕೆ 3) ಬೌಲಿಂಗ್‌ನಲ್ಲೂ ಮಿಂಚು ಹರಿಸಿದರು; ಗೋವಾ ಕತೆ ಮುಗಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-163 ಮತ್ತು 9 ವಿಕೆಟಿಗೆ 395 ಡಿಕ್ಲೇರ್‌ (ಕೋಟ್ಯಾನ್‌ 98, ರಹಾನೆ 56, ಮುಲಾನಿ 50, ಸಫ‌ìರಾಜ್‌ 48, ಶಾ 44, ದರ್ಶನ್‌ 102ಕ್ಕೆ 3, ಅಮಿತ್‌ ಯಾದವ್‌ 130ಕ್ಕೆ 2). ಗೋವಾ-327 ಮತ್ತು 112 (ಪಂಡ್ರೇಕರ್‌ ಔಟಾಗದೆ 23, ಅಮಿತ್‌ ಯಾದವ್‌ 19, ಮುಲಾನಿ 60ಕ್ಕೆ 5, ಕೋಟ್ಯಾನ್‌ 29ಕ್ಕೆ 3, ಕುಲಕರ್ಣಿ 12ಕ್ಕೆ 2). ಪಂದ್ಯಶ್ರೇಷ್ಠ: ಶಮ್ಸ್‌ ಮುಲಾನಿ.

Advertisement

Udayavani is now on Telegram. Click here to join our channel and stay updated with the latest news.

Next