ಶಿವಮೊಗ್ಗ: ಸಂಘಟಿತ ಹೋರಾಟ ನಡೆಸಿದ ಆತಿಥೇಯ ಕರ್ನಾಟಕ ತಂಡ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 59 ರನ್‌ಗಳಿಂದ ಸೋಲಿಸಿದೆ. ಪೂರ್ಣ 6 ಅಂಕದೊಂದಿಗೆ ಸತತ 2ನೇ ಗೆಲುವು ಸಾಧಿಸಿದೆ.
ನಗರದ ನವುಲೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 380 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡ ಗುರುವಾರ 2 ವಿಕೆಟ್ ನಷ್ಟಕ್ಕೆ 92ರನ್ ಗಳಿಸಿ ದಿನದಾಟ ಮುಗಿಸಿತ್ತು. ಶುಕ್ರವಾರ 2ನೇ ಇನಿಂಗ್ಸ್ ಆಟ ಮುಂದುವರೆಸಿದ ಹೈದರಾಬಾದ್, ಆತಿಥೇಯರ ಪ್ರಬಲ ಬೌಲಿಂಗ್ ದಾಳಿಗೆ ಉತ್ತರ ನೀಡಲಾಗದೆ 320 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನೊಪ್ಪಿಕೊಂಡಿತು. ಆಕಾಶ್ ರೆಡ್ಡಿ (ಅಜೇಯ 57ರನ್) ಹಾಗೂ ಬಿ. ಸಂದೀಪ್ (80ರನ್) ಪ್ರತಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ.
ಮತ್ತೆ ಮಿಂಚಿದ ಶ್ರೇಯಸ್: ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ಸ್ಪಿನ್ನರ್ ಶ್ರೇಯಸ್ ಗೋಪಾಲ್, 2ನೇ ಇನಿಂಗ್ಸ್‌ನಲ್ಲೂ 4 ವಿಕೆಟ್ ಕಬಳಿಸುವ ಮೂಲಕ ಹೈದರಾಬಾದ್ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.
3ನೇ ದಿನದಾಟದ ಅಂತ್ಯಕ್ಕೆ 43ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ತನ್ಮಯ್ ಅಗರವಾಲ್ ಅಂತಿಮ ದಿನದಾಟದಲ್ಲಿ 18 ಎಸೆತ ಎದುರಿಸಿ ಕೇವಲ 1ರನ್‌ಗಳಿಸಿ ಕೆ. ಗೌತಮ್ ಎಸೆತದಲ್ಲಿ ಎಲ್‌ಬಿ ಬಲೆಗೆ ಸಿಲುಕಿದರು. ಫಾರ್¾ ಕಂಡುಕೊಳ್ಳುತ್ತಿದ್ದ ತಂಡದ ನಾಯಕ ಅಂಬಾಟಿ ರಾಯುಡು (31 ರನ್)ಗೆ ಸ್ಟುವರ್ಟ್ ಬಿನ್ನಿ ಬೌಲಿಂಗ್‌ನಲ್ಲಿ ಕೆ.ಎಲ್. ರಾಹುಲ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಕೇವಲ 117 ರನ್‌ಗಳಿಗೆ 4 ಪ್ರಮುಖ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದ ಸಂದೀಪ್ ಮತ್ತು ಆಶೀಶ್ ರೆಡ್ಡಿ ಆಸರೆಯಾದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಆಶೀಶ್‌ರೆಡ್ಡಿ 18 ರನ್ ಗಳಿಸಿದ್ದಾಗ ಗಾಯಗೊಂಡು ಪೆವಿಲಿಯನ್‌ಗೆ ತೆರಳಿದರು. ನಂತರ ಸಂದೀಪ್ ಜತೆಗೂಡಿದ ಆಕಾಶ್ ಭಂಡಾರಿ ಕರ್ನಾಟಕದ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡತೊಡಗಿದರು. ಜತೆಯಾಟದಲ್ಲಿ ಅರ್ಧ ಶತಕ ದಾಖಲಾಯಿತು. ಉತ್ತಮವಾಗಿ ಆಡುತ್ತಿದ್ದ ಆಕಾಶ್ ಭಂಡಾರಿ (28 ರನ್) ಕೆ.ಗೌತಮ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದರು. ನಂತರ ಬಂದ ಮೆಹದಿ ಹಸನ್ (4 ರನ್ ) ಕರಣ್ ನಾಯರ್ ಬೌಲಿಂಗ್‌ನಲ್ಲಿ ಬೋಲ್ಡ್ ಆದರು. ಪ್ರಗ್ಯಾನ್ ಓಜಾ (4 ರನ್) ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಾಗದೆ ಶ್ರೇಯಸ್ ಗೋಪಾಲ್ ಬೌಲಿಂಗ್‌ನಲ್ಲಿ ಎಲ್‌ಬಿ ಆದರು.
ರೆಡ್ಡಿ-ಸಂದೀಪ್ ಪ್ರತಿ ಹೋರಾಟ: ಹೈದರಾಬಾದ್ 231ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಗಾಯಗೊಂಡು ಹೊರನಡೆದಿದ್ದ ಅಶೀಶ್ ರೆಡ್ಡಿ ಮತ್ತೆ ಮೈದಾನಕ್ಕಿಳಿದರು. ಅಶಿಶ್ ರೆಡ್ಡಿ ಮತ್ತು ಸಂದೀಪ್ ಕರ್ನಾಟಕದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರಲ್ಲದೆ ತಂಡದ ಮೊತ್ತವನ್ನು 300 ರನ್ ಗಡಿ ದಾಟಿಸಿದರು. ಇಬ್ಬರು ಜತೆಯಾಟದಲ್ಲಿ 73 ರನ್ ಹರಿದುಬಂತು. ಆಕರ್ಷಕವಾಗಿ ಆಡುತ್ತಿದ್ದ ಸಂದೀಪ್ (80 ರನ್) ಗಳಿಸಿ ವಿನಯ್‌ಕುಮಾರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುತ್ತಿದ್ದಂತೆ ಪಂದ್ಯ ಸಂಪೂರ್ಣ ಕರ್ನಾಟಕದತ್ತ ವಾಲಿತು. ರವಿಕಿರಣ್ (8 ರನ್) ಶ್ರೇಯಸ್ ಗೋಪಾಲ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮೊಹಮದ್ ಸಿರಾಜ್ 0(1) ಮೊದಲ ಎಸೆತದಲ್ಲೇ ಔಟ್ ಆಗುತ್ತಿದ್ದಂತೆ ಕರ್ನಾಟಕ ತಂಡ ಗೆಲುವಿನ ಸಿಹಿ ಅನುಭವಿಸಿತು.
ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಿದ ಆಶೀಶ್ ರೆಡ್ಡಿ (57 ರನ್) ಅಜೇಯರಾಗಿ ಉಳಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕರ್ನಾಟಕದ ಪರ ಕೆ. ಗೌತಮ್ 3, ಶ್ರೇಯಸ್ ಗೋಪಾಲ್ 4, ವಿನಯ್‌ಕುಮಾರ್ 1, ಕರುಣ್ ನಾಯರ್ 1, ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು.
ಸತತ ಎರಡನೇ ಗೆಲುವು: ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಸತತ ಎರಡನೇ ಜಯ ದಾಖಲಿಸಿದೆ. ಇದಕ್ಕು ಮೊದಲು ಅಸ್ಸಾಂ ವಿರುದ್ಧ ಜಯ ಗಳಿಸಿತ್ತು. ಮುಂದಿನ ಪಂದ್ಯ ನವೆಂಬರ್ 1ರಿಂದ ಮಹಾರಾಷ್ಟ್ರ ವಿರುದ್ಧ ಪುಣೆಯಲ್ಲಿ ನಡೆಯಲಿದೆ.