Advertisement
ಮುಂಬಯಿಯ 374 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ 3ನೇ ದಿನದಾಟದ ಅಂತ್ಯಕ್ಕೆ ಮಧ್ಯ ಪ್ರದೇಶ ಮೂರೇ ವಿಕೆಟಿಗೆ 368 ರನ್ ಪೇರಿಸಿದೆ. ಆರಂಭಕಾರ ಯಶ್ ದುಬೆ 133 ಮತ್ತು ವನ್‌ಡೌನ್ ಬ್ಯಾಟರ್ ಶುಭಂ ಶರ್ಮ 116 ರನ್ ಬಾರಿಸಿ ತಂಡದ ಮೇಲುಗೈಯಲ್ಲಿ ಮಹತ್ತರ ಪಾತ್ರ ನಿಭಾಯಿಸಿದರು. ಇಬ್ಬರಿಂದ 2ನೇ ವಿಕೆಟಿಗೆ 222 ರನ್ ಒಟ್ಟುಗೂಡಿತು.
Related Articles
Advertisement
ಯಶ್-ಶುಭಂ ಬ್ಯಾಟಿಂಗ್ ಶೌರ್ಯಯಶ್ ದುಬೆ ಮತ್ತು ಶುಭಂ ಶರ್ಮ ಸಾಹಸ ದಿಂದಲೇ ಮಧ್ಯ ಪ್ರದೇಶ ಫೈನಲ್ ತನಕ ಅಭಿಯಾನ ಮುಂದುವರಿಸಿದ್ದನ್ನು ಮರೆಯುವಂತಿಲ್ಲ. ಇಬ್ಬರ ಬ್ಯಾಟ್‌ನಿಂದಲೂ ಕ್ರಮವಾಗಿ 613 ರನ್ ಹಾಗೂ 578 ರನ್ ಹರಿದು ಬಂದಿದೆ. ಫೈನಲ್‌ನಲ್ಲೂ ಇವರು ಪರಿಣಮಿಸಿದರು. ದುಬೆ-ಶರ್ಮ ಅವರ ಜತೆಯಾಟ 73 ಓವರ್ ತನಕ ವಿಸ್ತರಿಸಲ್ಪಟ್ಟಿತು. ಎಚ್ಚರಿಕೆ ಹಾಗೂ ಅತ್ಯಂತ ತಾಳ್ಮೆಯ ಆಟವಾಡಿದ ದುಬೆ 336 ಎಸೆತ ನಿಭಾಯಿಸಿ 133 ರನ್ನುಗಳ ಅಮೋಘ ಕೊಡುಗೆ ಸಲ್ಲಿಸಿದರು. ಹೊಡೆದದ್ದು 14 ಬೌಂಡರಿ. ಶುಭಂ ಶರ್ಮ 116 ರನ್ನಿಗೆ 215 ಎಸೆತ ಎದುರಿಸಿದರು. 15 ಬೌಂಡರಿ ಜತೆಗೆ ಒಂದು ಸಿಕ್ಸರ್ ಬಾರಿಸಿದರು.
ಸ್ಕೋರ್ 269ಕ್ಕೆ ಏರಿದಾಗ ಮೋಹಿತ್ ಅವಸ್ಥಿ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಶುಭಂ ಶರ್ಮ ಕೀಪರ್ ತಮೋರೆಗೆ ಕ್ಯಾಚ್ ನೀಡಿ ವಾಪಸಾದರು. ದಿನದ ಇನ್ನೊಂದು ಯಶಸ್ಸು ಶಮ್ಸ್ ಮುಲಾನಿ ಪಾಲಾಯಿತು. ಮೊತ್ತ 341ಕ್ಕೆ ತಲುಪಿದಾಗ ದುಬೆ ವಿಕೆಟ್ ಉರುಳಿತು. ಅವರೂ ಕೀಪರ್ ತಮೋರೆಗೆ ಕ್ಯಾಚಿತ್ತರು. ಇಬ್ಬರೂ ದೊಡ್ಡ ಹೊಡೆತಗಳಿಗೆ ಮುಂದಾಗದೆ ಇನ್ನಿಂಗ್ಸ್ ಕಟ್ಟಿದ್ದು ವಿಶೇಷ. 222 ರನ್ ಜತೆಯಾಟದಲ್ಲಿ 76 ಸಿಂಗಲ್ಸ್ ಒಳಗೊಂಡಿತ್ತು. ರಜತ್ ಪಾಟೀದಾರ್ ಅವರ ಅಜೇಯ 67 ರನ್ 106 ಎಸೆತಗಳಿಂದ ದಾಖಲಾಗಿದೆ. ಬೀಸಿದ್ದು 13 ಫೋರ್. ಇವರೊಂದಿಗೆ 11 ರನ್ ಮಾಡಿರುವ ನಾಯಕ ಆದಿತ್ಯ ಶ್ರೀವಾಸ್ತವ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸಂಕ್ಷಿಪ್ತ ಸ್ಕೋರ್: ಮುಂಬಯಿ-374. ಮಧ್ಯ ಪ್ರದೇಶ-3 ವಿಕೆಟಿಗೆ 368 (ಯಶ್ ದುಬೆ 133, ಶುಭಂ ಶರ್ಮ 116, ರಜತ್ ಪಾಟೀದಾರ್ ಬ್ಯಾಟಿಂಗ್ 67, ಹಿಮಾಂಶು ಮಂತ್ರಿ 31, ಶ್ರೀವಾಸ್ತವ ಬ್ಯಾಟಿಂಗ್ 11, ಅವಸ್ಥಿ 53ಕ್ಕೆ 1, ದೇಶಪಾಂಡೆ 73ಕ್ಕೆ 1, ಮುಲಾನಿ 117ಕ್ಕೆ 1).