Advertisement

Ranji ಟ್ರೋಫಿ ಕ್ರಿಕೆಟ್‌:ಕರ್ನಾಟಕಕ್ಕೆ ಬಲಿಷ್ಠ ತಮಿಳುನಾಡು ಸವಾಲು

11:33 PM Feb 08, 2024 | Team Udayavani |

ಚೆನ್ನೈ:  ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ “ಸಿ’ ಬಣದ ಮೊದಲೆರಡು ಸ್ಥಾನದಲ್ಲಿರುವ ತಮಿಳುನಾಡು ಮತ್ತು ಕರ್ನಾಟಕ ತಂಡಗಳು ಶುಕ್ರವಾರದಿಂದ ನಡೆಯುವ ಆರನೇ ಸುತ್ತಿನ ಹೋರಾಟದಲ್ಲಿ ಪರಸ್ಪರ ಮುಖಾಮುಖೀಯಾಗಲಿವೆ.

Advertisement

ಆಡಿದ ಐದು ಪಂದ್ಯಗಳಿಂದ ತಲಾ ಮೂರರಲ್ಲಿ ಗೆದ್ದಿರುವ ತಮಿಳುನಾಡು ಮತ್ತು ಕರ್ನಾಟಕ ಸದ್ಯ ತಲಾ 21 ಅಂಕಗಳನ್ನು ಹೊಂದಿದೆ. ಆದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ತಮಿಳುನಾಡು ಅಗ್ರಸ್ಥಾನ ದಲ್ಲಿದೆ. ಮೂರನೇ ಸ್ಥಾನದಲ್ಲಿರುವ ತ್ರಿಪುರ 14 ಅಂಕ ಹೊಂದಿದೆ.

ಚಂಡೀಗಢ ಎದುರಾಳಿ
ಇನ್ನೆರಡು ಸುತ್ತಿನ ಪಂದ್ಯಗಳು ಬಾಕಿ ಉಳಿದಿದ್ದು ಪ್ರತಿ ಬಣದ ಅಗ್ರ ಎರಡು ತಂಡ ಗಳು ಕ್ವಾರ್ಟರ್‌ಫೈನಲಿಗೇರಲಿವೆ. ಕರ್ನಾಟಕ ಅಂತಿಮ ಸುತ್ತಿನಲ್ಲಿ ಚಂಡೀ ಗಢ ತಂಡವನ್ನು ಹುಬ್ಬಳ್ಳಿಯಲ್ಲಿ ಎದುರಿಸಲಿದೆ.
ಆರೋಗ್ಯ ಸಮಸ್ಯೆಯಿಂದ ಗುಣಮುಖರಾಗಿರುವ ನಾಯಕ ಮಯಾಂಕ್‌ ಅಗರ್ವಾಲ್‌ ಮತ್ತೆ ತಂಡಕ್ಕೆ ಮರಳಿದ್ದು ತಮಿಳು ನಾಡು ವಿರುದ್ಧ ತಂಡವನ್ನು ಮುನ್ನಡೆಸ ಲಿದ್ದಾರೆ. ಅವರ ಆಗಮನದಿಂದ ತಂಡದ ಬ್ಯಾಟಿಂಗ್‌ ಶಕ್ತಿ ಬಲ ಗೊಂಡಿದೆ. ತಮಿಳುನಾಡು ವಿರುದ್ಧ ಕನಿಷ್ಠ ಪಕ್ಷ ಡ್ರಾ ಸಾಧಿಸಿದರೂ ಕರ್ನಾಟಕ ಮುಂದಿನ ಸುತ್ತಿಗೇರುವ ಸಾಧ್ಯತೆಯಿದೆ. ತಮಿಳುನಾಡು ಅಂತಿಮ ಸುತ್ತಿನಲ್ಲಿ ಪಂಜಾಬ್‌ ತಂಡ ವನ್ನು ಎದುರಿಸಲಿದೆ. ಪಂಜಾಮ್‌ ಇಷ್ಟರವರೆಗೆ ಒಂದೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಶಿವಂ ದುಬೆಗೆ ವಿಶ್ರಾಂತಿ
ಆಡಿದ ಐದು ಪಂದ್ಯಗಳಿಂದ ನಾಲ್ಕರಲ್ಲಿ ಗೆಲುವು ಸಾಧಿಸಿ 27 ಅಂಕ ಹೊಂದಿರುವ ಮುಂಬಯಿ ತಂಡವು “ಬಿ’ ಬಣದಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬಯಿ ಮುಂದಿನ ಪಂದ್ಯದಲ್ಲಿ ಛತ್ತೀಸ್‌ಗಢ ತಂಡವನ್ನು ಎದುರಿಸಲಿದ್ದು ಗೆಲ್ಲುವ ವಿಶ್ವಾಸದಲ್ಲಿದೆ.

ಈಗಾಗಲೇ ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸಿಕೊಂಡಿರುವ ಮುಂಬಯಿ ಈ ಪಂದ್ಯಕ್ಕಾಗಿ ಅನುಭವಿ ಶಿವಂ ದುಬೆ ಅವರಿಗೆ ವಿಶ್ರಾಂತಿ ನೀಡಿದೆ. ಕಾಲಿನ ಸ್ನಾಯು ಬಿಗಿತದ ಸಮಸ್ಯೆಯಿಂದ ಬಳಲುತ್ತಿರುವ ಅವರು ಈ ಪಂದ್ಯದಲ್ಲಿ ಆಡುವುದಿಲ್ಲ. ಆದರೆ ಅಂತಿಮ ಲೀಗ್‌ ಮತ್ತು ಮುಂದಿನ ನಾಕೌಟ್‌ ಪಂದ್ಯಗಳಿಗಾಗಿ ತಂಡಕ್ಕೆ ಮರಳಲಿದ್ದಾರೆ.

Advertisement

ಗಾಯದ ಸಮಸ್ಯೆಯಿಂದಾಗಿ ಬಂಗಾಲ ವಿರುದ್ಧದ ಪಂದ್ಯವನ್ನು ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ ಇದೀಗ ತಂಡಕ್ಕೆ ಮರಳಿದ್ದಾರೆ. ರಹಾನೆ ಅನುಪಸ್ಥಿತಿಯಲ್ಲಿ ದುಬೆ ಬಂಗಾಲ ವಿರುದ್ಧದ ಪಂದ್ಯದ ವೇಳೆ ತಂಡವನ್ನು ಮುನ್ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next