Advertisement

Ranji ಟ್ರೋಫಿ ಕ್ರಿಕೆಟ್‌: ಕರ್ನಾಟಕ ಗೆಲುವಿಗೆ ಮನೀಷ್‌ ಪಾಂಡೆ ನೆರವು

11:00 PM Feb 04, 2024 | Team Udayavani |

ಸೂರತ್‌: ಅನುಭವಿ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ ಅವರ ಸಮಯೋಚಿತ ಬ್ಯಾಟಿಂಗ್‌ ಬಲದಿಂದಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿಯ “ಸಿ’ ಬಣದ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಒಂದು ವಿಕೆಟ್‌ ಅಂತರದ ರೋಚಕ ಗೆಲುವು ದಾಖಲಿಸಿದೆ.

Advertisement

ಗೆಲ್ಲಲು 226 ರನ್‌ ತೆಗೆಯುವ ಸವಾಲು ಪಡೆದ ಕರ್ನಾಟಕ ತಂಡವು ಮೂರನೇ ದಿನ ಪಾಂಡೆ ಅವರ ತಾಳ್ಮೆಯ ಆಟದಿಂದಾಗಿ 9 ವಿಕೆಟಿಗೆ 229 ರನ್‌ ಪೇರಿಸಿ ಜಯಭೇರಿ ಬಾರಿಸಿತು. 121 ಎಸೆತ ಎದುರಿಸಿದ ಪಾಂಡೆ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 67 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ಮೊದಲು ರೈಲ್ವೇಸ್‌ ತಂಡವು 8 ವಿಕೆಟಿಗೆ 209 ರನ್ನುಗಳಿಂದ ದಿನದಾಟ ಆರಂಭಿಸಿ 244 ರನ್ನಿಗೆ ಆಲೌಟಾಯಿತು. ರೈಲ್ವೇಸ್‌ ಕುಸಿತಕ್ಕೆ ಕಾರಣರಾದ ವೈಶಾಖ್‌ ವಿಜಯಕುಮಾರ್‌ 67 ರನ್ನಿಗೆ 5 ವಿಕೆಟ್‌ ಕಿತ್ತರು.

ಈ ಗೆಲುವಿನಿಂದ ಕರ್ನಾಟಕ ತಂಡವು “ಸಿ’ ಬಣದಲ್ಲಿ 21 ಅಂಕಗ ಳೊಂದಿಗೆ ಅಗ್ರಸ್ಥಾನದಲ್ಲಿದ್ದು ನಾಕೌಟ್‌ ಹಂತಕ್ಕೇರುವ ಸಾಧ್ಯತೆಯನ್ನು ಹೆಚ್ಚಿ ಕೊಂಡಿದೆ. ಲೀಗ್‌ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಉಳಿದಿದೆ. ಕರ್ನಾಟಕ ಮುಂದಿನೆರಡು ಪಂದ್ಯಗಳಲ್ಲಿ ತಮಿಳು ನಾಡು ಮತ್ತು ಚಂಡೀಗಢ ವಿರುದ್ಧœ ಆಡಬೇಕಾಗಿದೆ.
ಒಂದು ವಿಕೆಟಿಗೆ 70 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಕರ್ನಾಟಕ ತಂಡವು ಆಬಳಿಕ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ 99 ರನ್‌ ತಲಪುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆಬಳಿಕ ಪಾಂಡೆ ಸಹಿತ ಶರತ್‌ ಶ್ರೀನಿವಾಸ್‌ (23), ವೈಶಾಖ್‌ (38) ಅವರ ಉತ್ತಮ ಆಟದಿಂದಾಗಿ ಕರ್ನಾಟಕ ತಂಡ ರೋಚಕ ಗೆಲುವು ಕಾಣುವಂತಾಯಿತು.

ತ್ರಿಪುರಕ್ಕೆ ಜಯ
ಅಹ್ಮದಾಬಾದ್‌ನಲ್ಲಿ ನಡೆದ ಇನ್ನೊಂದು ಪಂದ್ಯದ್ಲಿ ತ್ರಿಪುರ ತಂಡವು ಗುಜರಾತ್‌ ತಂಡವನ್ನು 156 ರನ್ನು ಗಳಿಂದ ಸೋಲಿಸಿ ಅಚ್ಚರಿಗೊಳಿಸಿತು.
ಸಂಕ್ಷಿಪ್ತ ಸ್ಕೋರು: ರೈಲ್ವೇಸ್‌ 155 ಮತ್ತು 244; ಕರ್ನಾಟಕ 174 ಮತ್ತು 9 ವಿಕೆಟಿಗೆ 229 (ಮನೀಷ್‌ ಪಾಂಡೆ 67 ಔಟಾಗದೆ, ವೈಶಾಖ್‌ ವಿಜಯಕುಮಾರ್‌ 38, ಆರ್‌. ಸಮರ್ಥ್ 35, ಕೆವಿ ಅನೀಶ್‌ 35, ಆಕಾಶ್‌ ಪಾಂಡೆ 94ಕ್ಕೆ 5).

ಸೌರಾಷ್ಟ್ರಕ್ಕೆ ಗೆಲುವು
ಸೋಲಾಪುರ: ಎಡಗೈ ಸ್ಪಿನ್ನರ್‌ ಪರ್ತ್‌ ಭುತ್‌ ಅವರ ಅಮೋಘ ಬೌಲಿಂಗ್‌ನಿಂದಾಗಿ ಸೌರಾಷ್ಟ್ರ ತಂಡವು ರಣಜಿ “ಎ’ ಬಣದ ಪಂದ್ಯದಲ್ಲಿ ಮಹಾರಾಷ್ಟ್ರವನ್ನು 48 ರನ್ನುಗಳಿಂದ ಸೋಲಿಸಿದೆ.
ಗೆಲ್ಲಲು 208 ರನ್‌ ಗಳಿಸುವ ಗುರಿ ಪಡೆದ ಮಹಾರಾಷ್ಟ್ರ ತಂಡವು ಪರ್ತ್‌ ಭುತ್‌ ಅವರ ದಾಳಿಗೆ ಕುಸಿದು 164 ರನ್ನಿಗೆ ಆಲೌಟಾಗಿ ಶರಣಾಯಿತು. 44 ರನ್ನಿಗೆ 7 ವಿಕೆಟ್‌ ಕಿತ್ತ ಭುತ್‌ ಅವರು ಮಹಾರಾಷ್ಟ್ರದ ಕುಸಿತಕ್ಕೆ ಕಾರಣರಾದರು. ಭುತ್‌ ಅವರಿಗೆ ನೆರವು ನೀಡಿದ ಯುವರಾಜ್‌ಸಿನ್‌Ø ದೊಡಿಯ ಎರಡು ವಿಕೆಟ್‌ ಕಿತ್ತರು.
ಸಂಕ್ಷಿಪ್ತ ಸ್ಕೋರು: ಸೌರಾಷ್ಟ್ರ 202 ಮತ್ತು 164; ಮಹಾರಾಷ್ಟ್ರ 159 ಮತ್ತು 164 (ತರಣ್‌ಜಿತ್‌ ಸಿಂಗ್‌ ದಿಲ್ಲೋನ್‌ 28, ಪರ್ತ್‌ ಭುತ್‌ 44ಕ್ಕೆ 7).

Advertisement

ಮುಂಬಯಿಗೆ ಇನ್ನಿಂಗ್ಸ್‌  ಗೆಲುವು
ಕೋಲ್ಕತಾ: ಮೋಹಿತ್‌ ಅವಸ್ಥಿ ಅವರ ಅಮೋಘ ದಾಳಿಯ ನೆರವಿನಿಂದ ಮುಂಬಯಿ ತಂಡವು ರಣಜಿ ಟ್ರೋಫಿಯ “ಬಿ’ ಬಣದ ಪಂದ್ಯದಲ್ಲಿ ಬೆಂಗಾಲ್‌ ವಿರುದ್ಧ ಇನ್ನಿಂಗ್ಸ್‌ ಮತ್ತು ನಾಲ್ಕು ರನ್ನುಗಳಿಂದ ಜಯ ಸಾಧಿಸಿದೆ.
ಫಾಲೋ ಆನ್‌ ಪಡೆದಿದ್ದ ಬೆಂಗಾಲ್‌ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅವಸ್ಥಿ ಅವರ ದಾಳಿಗೆ ಕುಸಿದು 209 ರನ್ನಿಗೆ ಆಲೌಟಾಯಿತು. ಅವಸ್ಥಿ 52 ರನ್ನಿಗೆ 7 ವಿಕೆಟ್‌ ಕಿತ್ತು ಬೆಂಗಾಲ್‌ ತಂಡದ ಕುಸಿತಕ್ಕೆ ಕಾರಣರಾದರು. ಅವಸ್ಥಿ ಈ ಪಂದ್ಯದಲ್ಲಿ 10 ವಿಕೆಟ್‌ ಕಿತ್ತು ಸಂಭ್ರಮಿಸಿದ್ದಾರೆ. ಈ ಸಾಧನೆಗಾಗಿ ಅವಸ್ಥಿ ರಣಜಿಯಲ್ಲಿ ಮೂರನೇ ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದರು.

ಬೆಂಗಾಲ್‌ ಮೊದಲ ಇನ್ನಿಂಗ್ಸ್‌ನಲ್ಲಿ 199 ರನ್ನಿಗೆ ಆಲೌಟಾಗಿತ್ತು. ಅನುಸ್ತುಪ್‌ ಮಜುಂದಾರ್‌ 109 ರನ್‌ ಹೊಡೆದಿದ್ದರು. ಇದರಿಂದಾಗಿ ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ ಮುನ್ನಡೆ ಗಳಿಸುವಂತಾಯಿತು. ಈ ಮೊದಲು ಮುಂಬಯಿ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 412 ರನ್‌ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next