Advertisement

Ranji Trophy 2023-24: ಕರ್ನಾಟಕ ಬೌಲಿಂಗ್‌ ಮಿಂಚು; ಗುಜರಾತ್‌ 264

10:42 PM Jan 12, 2024 | Team Udayavani |

ಅಹ್ಮದಾಬಾದ್‌: ಎಲೈಟ್‌ “ಸಿ’ ವಿಭಾಗದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ತನ್ನ 2ನೇ ಮುಖಾ ಮುಖೀಯಲ್ಲಿ ಮಿಂಚಿನ ಬೌಲಿಂಗ್‌ ಪ್ರದರ್ಶಿಸಿದ ಕರ್ನಾಟಕ, ಆತಿಥೇಯ ಗುಜರಾತ್‌ ಮೊತ್ತವನ್ನು 264ಕ್ಕೆ ತಡೆದು ನಿಲ್ಲಿಸಿದೆ. ವಾಸುಕಿ ಕೌಶಿಕ್‌, ಪ್ರಸಿದ್ಧ್ ಕೃಷ್ಣ, ವಿಜಯ್‌ಕುಮಾರ್‌ ವೈಶಾಖ್‌ ಮತ್ತು ರೋಹಿತ್‌ ಕುಮಾರ್‌ ಬೌಲಿಂಗ್‌ನಲ್ಲಿ ಮಿಂಚಿದರು.

Advertisement

“ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಕರ್ನಾಟಕ ಇದರಲ್ಲಿ ಭರಪೂರ ಯಶಸ್ಸು ಕಂಡಿತು. ಗುಜರಾತ್‌ನ 4 ವಿಕೆಟ್‌ಗಳನ್ನು ಬರೀ 45 ರನ್ನಿಗೆ ಉಡಾಯಿಸಿತು. ಹೆಟ್‌ ಪಟೇಲ್‌ (4), ಸನ್‌ಪ್ರೀತ್‌ ಸಿಂಗ್‌ ಬಗ್ಗಾ (0), ಮನನ್‌ ಹಿಂಗ್ರಾಜಿಯಾ (4) ಮತ್ತು ಪ್ರಿಯಾಂಕ್‌ ಪಾಂಚಾಲ್‌ (24) ಪೆವಿಲಿಯನ್‌ ಸೇರಿಕೊಂಡರು. ಇವರಲ್ಲಿ ಬಗ್ಗಾ ಅವರದು ಗೋಲ್ಡನ್‌ ಡಕ್‌ ಆಗಿತ್ತು.

ಕ್ಷಿತಿಜ್‌-ಉಮಂಗ್‌ ಆಸರೆ
5ನೇ ವಿಕೆಟಿಗೆ ಜತೆಗೂಡಿದ ಕ್ಷಿತಿಜ್‌ ಪಟೇಲ್‌ ಮತ್ತು ಉಮಂಗ್‌ ಕುಮಾರ್‌ ಕ್ರೀಸ್‌ ಆಕ್ರಮಿಸಿಕೊಳ್ಳುವುದರೊಂದಿಗೆ ಗುಜರಾತ್‌ ಭಾರೀ ಕುಸಿತದಿಂದ ಪಾರಾಯಿತು. ಇವರು 157 ರನ್‌ ಪೇರಿಸಿ ತಂಡವನ್ನು ಮೇಲೆತ್ತಿದರು. ಶತಕದತ್ತ ದೌಡಾಯಿಸಿದ್ದ ಕ್ಷಿತಿಜ್‌ ಪಟೇಲ್‌ ಕೇವಲ 5 ರನ್‌ ಕೊರತೆಯಿಂದ ಈ ಅವಕಾಶವನ್ನು ಕಳೆದುಕೊಂಡರು. ಕ್ಷಿತಿಜ್‌ ಕೊಡುಗೆ 161 ಎಸೆತಗಳಿಂದ 95 ರನ್‌. ಇದರಲ್ಲಿ 11 ಬೌಂಡರಿ ಸೇರಿತ್ತು. ಉಮಂಗ್‌ ಕುಮಾರ್‌ 143 ಎಸೆತಗಳಿಂದ 72 ರನ್‌ ಕೊಡುಗೆ ಸಲ್ಲಿಸಿದರು (12 ಬೌಂಡರಿ).

ಸ್ಕೋರ್‌ 202ಕ್ಕೆ ಏರಿತು. ಆಗ ವೈಶಾಖ್‌ ಈ ಜೋಡಿಯನ್ನು ಬೇರ್ಪಡಿಸಿದರು. ಗುಜರಾತ್‌ ಮತ್ತೂಂದು ಸುತ್ತಿನ ಕುಸಿತಕ್ಕೆ ಸಿಲುಕಿತು. 62 ರನ್‌ ಅಂತರದಲ್ಲಿ ಗುಜರಾತ್‌ನ ಉಳಿದ ಆರೂ ವಿಕೆಟ್‌ ಹಾರಿ ಹೋಯಿತು. ಆಗ ನಾಯಕ ಚಿಂತನ್‌ ಗಜ 45 ರನ್‌ ಮಾಡಿ ಅಜೇಯರಾಗಿದ್ದರು (92 ಎಸೆತ, 1 ಬೌಂಡರಿ, 3 ಸಿಕ್ಸರ್‌).

49ಕ್ಕೆ 4 ವಿಕೆಟ್‌ ಉರುಳಿಸಿದ ವಾಸುಕಿ ಕೌಶಿಕ್‌ ಮತ್ತೂಮ್ಮೆ ಬೌಲಿಂಗ್‌ ಹೀರೋ ಎನಿಸಿದರು. ಪಂಜಾಬ್‌ ಎದುರಿನ ಕಳೆದ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ ಅವರು 41ಕ್ಕೆ 7 ವಿಕೆಟ್‌ ಕೆಡವಿದ್ದರು. ಪ್ರಸಿದ್ಧ್ ಕೃಷ್ಣ, ವಿಜಯ್‌ಕುಮಾರ್‌ ವೈಶಾಖ್‌ ಮತ್ತು ರೋಹಿತ್‌ ಕುಮಾರ್‌ ತಲಾ 2 ವಿಕೆಟ್‌ ಉರುಳಿಸಿದರು. ವಿದ್ವತ್‌ ಕಾವೇರಪ್ಪ ಬದಲು ಪ್ರಸಿದ್ಧ್ ಕೃಷ್ಣ ಅವಕಾಶ ಪಡೆದಿದ್ದರು.

Advertisement

ಅಹ್ಮದಾಬಾದ್‌ ಪಿಚ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದು, ಕರ್ನಾಟಕ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿ ಮೊದಲ ಇನ್ನಿಂಗ್ಸ್‌ ಮುನ್ನಡೆಗೆ ಪ್ರಯತ್ನಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್‌: ಗುಜರಾತ್‌-264 (ಕ್ಷಿತಿಜ್‌ ಪಟೇಲ್‌ 95, ಉಮಂಗ್‌ ಕುಮಾರ್‌ 72, ಚಿಂತನ್‌ ಗಜ ಔಟಾಗದೆ 45, ಪ್ರಿಯಾಂಕ್‌ ಪಾಂಚಾಲ್‌ 24, ವಾಸುಕಿ ಕೌಶಿಕ್‌ 48ಕ್ಕೆ 4, ವಿಜಯ್‌ಕುಮಾರ್‌ ವೈಶಾಖ್‌ 42ಕ್ಕೆ 2, ಪ್ರಸಿದ್ಧ್ ಕೃಷ್ಣ 62ಕ್ಕೆ 2, ರೋಹಿತ್‌ ಕುಮಾರ್‌ 70ಕ್ಕೆ 2).

ರಹಾನೆ ಗೋಲ್ಡನ್‌ ಡಕ್‌!
ಮುಂಬಯಿ: ಶುಕ್ರವಾರ ಮೊದಲ್ಗೊಂಡ ಆಂಧ್ರಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಆತಿಥೇಯ ಮುಂಬಯಿ 6 ವಿಕೆಟಿಗೆ 281 ರನ್‌ ಗಳಿಸಿದೆ. ಆದರೆ ಪ್ರಸಕ್ತ ಋತುವಿನಲ್ಲಿ ಮೊದಲ ಸಲ ತಂಡವನ್ನು ಮುನ್ನಡೆಸಿದ ಅಜಿಂಕ್ಯ ರಹಾನೆ ಮೊದಲ ಎಸೆತದಲ್ಲೇ ವಿಕೆಟ್‌ ಕೈಚೆಲ್ಲಿ ನಿರಾಸೆ ಮೂಡಿಸಿದರು. ಅವರು ನಿತೀಶ್‌ ರೆಡ್ಡಿ ಎಸೆತದಲ್ಲಿ ಲೆಗ್‌ ಬಿಫೋರ್‌ ಆದರು.

ಮುಂಬಯಿಗೆ ಜಾಯ್‌ ಗೋಕುಲ್‌ ಬಿಷ್ಟಾ (39) ಮತ್ತು ಭೂಪೇನ್‌ ಲಾಲ್ವಾನಿ (61) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟಿಗೆ 69 ರನ್‌ ಒಟ್ಟುಗೂಡಿಸಿದರು. ಆದರೆ 22ನೇ ಓವರ್‌ನ ಸತತ ಎಸೆತಗಳಲ್ಲಿ ಬಿಷ್ಟಾ ಮತ್ತು ರಹಾನೆ ವಿಕೆಟ್‌ ಉಡಾಯಿಸಿದ ನಿತೀಶ್‌ ರೆಡ್ಡಿ ಆಂಧ್ರಕ್ಕೆ ಮೇಲುಗೈ ಒದಗಿಸಿದರು.

ಅನಂತರ ಸುವೇದ್‌ ಪಾರ್ಕರ್‌ (41), ಶ್ರೇಯಸ್‌ ಅಯ್ಯರ್‌ (48) ಸೇರಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದರು. 30 ರನ್‌ ಮಾಡಿರುವ ಶಮ್ಸ್‌ ಮುಲಾನಿ ಮತ್ತು 31 ರನ್‌ ಗಳಿಸಿರುವ ತನುಷ್‌ ಕೋಟ್ಯಾನ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮುರಿಯದ 7ನೇ ವಿಕೆಟಿಗೆ ಇವರಿಂದ 57 ರನ್‌ ಒಟ್ಟುಗೂಡಿದೆ.

ಆಂಧ್ರ ಪರ ನಿತೀಶ್‌ ರೆಡ್ಡಿ 44ಕ್ಕೆ 3, ಶೋಯಿಬ್‌ ಮೊಹಮ್ಮದ್‌ ಖಾನ್‌ 42ಕ್ಕೆ 2 ವಿಕೆಟ್‌ ಕೆಡವಿದರು.

 

Advertisement

Udayavani is now on Telegram. Click here to join our channel and stay updated with the latest news.

Next