ಪೊರ್ವಾರಿಮ್: ಕರ್ನಾಟಕದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಗೋವಾ ಉತ್ತಮ ಮೊತ್ತವನ್ನೇ ಗಳಿಸಿದೆ. ರಣಜಿ ಪಂದ್ಯದ ಮೂರನೇ ದಿನವಾದ ಗುರುವಾರ ಗೋವಾ 8 ವಿಕೆಟ್‌ಗಳ ನಷ್ಟಕ್ಕೆ 321 ರನ್ ಗಳಿಸಿದೆ.
ಪ್ರಸ್ತುತ ಅದು 282 ರನ್‌ಗಳ ಹಿನ್ನಡೆಯಲ್ಲಿದ್ದರೂ, ಇನ್ನೂ ಕಡಿಮೆ ಮೊತ್ತಕ್ಕೆ ಆಲೌಟಾಗುವ ಭೀತಿಯಿಂದ ಪಾರಾಗಿದೆ. ಕರ್ನಾಟಕದ ಬೌಲಿಂಗ್ ಮತ್ತು ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹೋಲಿಸಿದರೆ ಗೋವಾ ತಂಡ ಈ ಮಟ್ಟಿಗಿನ ಬ್ಯಾಟಿಂಗ್ ಮಾಡಿದ್ದು ಅದ್ಭುತ ಸಾಧನೆಯೇ ಹೌದು.
ತನ್ನ 1ನೇ ಇನಿಂಗ್ಸ್‌ನಲ್ಲಿ ಕರ್ನಾಟಕ 603 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿರುವ ಗೋವಾ ತನ್ನ 1ನೇ ಇನಿಂಗ್ಸ್‌ನಲ್ಲಿ 321 ರನ್ ಗಳಿಸಿದೆ. ಆದರೆ ಈಗಲೂ ಅದು ಫಾಲೋಆನ್ ಭೀತಿಯಿಂದ ತಪ್ಪಿಸಿಕೊಂಡಿಲ್ಲ. ಗೋವಾ ಇದೇ ಮೊತ್ತದ ಆಸುಪಾಸಿಗೆ ಆಲೌಟಾದಲ್ಲಿ, ಕರ್ನಾಟಕ ಸಲೀಸಾಗಿ ಫಾಲೋಆನ್ ಹೇರಬಹುದು.
ಗೋವಾ ಪರ ಸುಯಶ್ ಪ್ರಭುದೇಸಾಯಿ, ಸಿದ್ಧೇಶ್ ಲಾಡ್, ದರ್ಶನ್ ಮಿಸಲ್ ಉತ್ತಮ ಪ್ರತಿಹೋರಾಟವನ್ನು ಸಂಘಟಿಸಿದರು. ಪ್ರಭುದೇಸಾಯಿ 165 ಎಸೆತ ಎದುರಿಸಿ, 12 ಬೌಂಡರಿಗಳ ಸಮೇತ 87 ರನ್ ಚಚ್ಚಿದರು. ಆದರೆ ಸಿದ್ಧೇಶ್ ಬಿರುಸಿನ ಆಟವಾಡಿದರು. ಬರೀ 84 ಎಸೆತ ಎದುರಿಸಿದ ಅವರು 10 ಬೌಂಡರಿ, 1 ಸಿಕ್ಸರ್‌ಗಳ ಮೂಲಕ 63 ರನ್ ಚಚ್ಚಿದರು. 134 ಎಸೆತ ಎದುರಿಸಿದ ದರ್ಶನ್ 9 ಬೌಂಡರಿ, 1 ಸಿಕ್ಸರ್‌ಗಳೊಂದಿಗೆ 66 ರನ್ ಬಾರಿಸಿದರು. ರಾಜ್ಯದ ಪರ ಕೆ.ಗೌತಮ್ 3, ವಿ.ವೈಶಾಖ, ಶುಭಾಂಗ ಹೆಗ್ಡೆ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 1ನೇ ಇನಿಂಗ್ಸ್ 603/7. ಗೋವಾ 1ನೇ ಇನಿಂಗ್ಸ್ 321/8 (ಸುಯಶ್ ಪ್ರಭುದೇಸಾಯಿ 87, ಸಿದ್ಧೇಶ್ 63, ದರ್ಶನ್ ಮಿಸಲ್ 66, ಕೆ.ಗೌತಮ್ 109/3).